ಕುಮಟಾ : ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ, 2021-22ನೇ ಸಾಲಿನಲ್ಲಿ ಪ್ರತಿಭಾವಂತ ಯುವ ಕಲಾವಿದರಿಗೆ ಎರಡು ವರ್ಷಗಳ ಕಾಲ ನೀಡುವ ಎಸ್.ವೈ.ಎ ವಿದ್ಯಾರ್ಥಿ ವೇತನಕ್ಕೆ ತಾಲೂಕಿನ ವಿದುಷಿ ಪಲ್ಲವಿ ಗಾಯತ್ರಿ ಆಯ್ಕೆಯಾಗಿದ್ದಾಳೆ.
ಭರತನಾಟ್ಯ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಆಯ್ಕೆಯಾದ ಒಟ್ಟು 31 ವಿದ್ಯಾರ್ಥಿಗಳಲ್ಲಿ ಪಲ್ಲವಿಯೂ ಒಬ್ಬಳಾಗಿದ್ದು ಕರ್ನಾಟಕದ ಆರು ವಿದ್ಯಾರ್ಥಿಗಳಲ್ಲಿ ಸ್ಥಾನ ಪಡೆದ ಉತ್ತರಕನ್ನಡದ ಏಕೈಕ ಯುವ ಕಲಾವಿದೆಯಾಗಿದ್ದಾಳೆ.
ವಿದುಷಿ ಪಲ್ಲವಿ ಗಾಯತ್ರಿ ಇವಳು ಗೋಕರ್ಣ ಮೂಲದ ಕುಮಟಾ ನಿವಾಸಿ ಗೋಪಾಲಕೃಷ್ಣ ಹಾಗೂ ಲಕ್ಷ್ಮಿ ಗಾಯತ್ರಿ ಇವರ ಮಗಳು. ಇವಳು ಕುಮಟಾದ ನಾದಶ್ರೀ ಕಲಾ ಕೇಂದ್ರದಲ್ಲಿ ವಿದುಷಿ ನಯನ ಪ್ರಸನ್ನ ಇವರ ಬಳಿ 16 ವರ್ಷಗಳಿಂದ ಭರತ ನಾಟ್ಯ ಅಭ್ಯಾಸ ಮಾಡುತ್ತಿದ್ದು 2022 ರ ಸಾಲಿನಲ್ಲಿ ನಡೆದ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ 90.8% ಅಂಕ ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾಳೆ.
2022ರ ಮಹಾರಾಷ್ಟ್ರ ಗಂಧರ್ವ ಮಹಾವಿದ್ಯಾಲಯದ ಭರತ ನಾಟ್ಯ ವಿಶಾರದ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಪ್ರಥಮ ಸ್ಥಾನ ಗಳಿಸಿದ್ದು 2023 ಮೇ 5 ರಂದು ಡಾ. ಅಂಬೇಡ್ಕರ್ ಯುನಿವರ್ಸಿಟಿ ಗಾಂಧಿನಗರ ಗುಜರಾತ್ ಉಪ ಕುಲಪತಿಗಳಿಂದ ಮುಂಬೈನಲ್ಲಿ ಸನ್ಮಾನಿತಳಾಗಿದ್ದಾಳೆ. ಇದೇ ಗಂಧರ್ವ ಮಹಾವಿದ್ಯಾಲಯದ 2023ರ ಸ್ನಾತಕೋತ್ತರ ಪದವಿ ಪರೀಕ್ಷೆಯಾದ ಅಲಂಕಾರ ಪ್ರಥಮ ಪರೀಕ್ಷೆಯಲ್ಲೂ ಅತ್ಯುತ್ತಮ ಅಂಕಗಳಿಸಿರುತ್ತಾಳೆ.