ಕುಮಟಾ : ಇಂದಿನ ತಂತ್ರಜ್ಞಾನ ಯುಗದಲ್ಲಿ ಗ್ರಾಮೀಣ ಪ್ರದೇಶದ ಶಾಲೆಗಳು ಹಂತ ಹಂತವಾಗಿ ಅಭಿವೃದ್ಧಿ ಆಗುತ್ತಿರುವುದು ಸಂತಸ ತಂದಿದೆ. ಇಂತಹ ಕಾರ್ಯಕ್ಕೆ ವಿವಿಧ ಸಂಘ ಸಂಸ್ಥೆಗಳು ಮುಂದಾಗುತ್ತಿರುವುದು ಶ್ಲಾಘನೀಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಜೇಂದ್ರ ಎಲ್. ಭಟ್ಟ ಹೇಳಿದರು. ಸೆಲ್ಕೋ ಫೌಂಡೇಶನ್ ಹಾಗೂ ಎಲ್.ಐ.ಸಿ ಎಚ್.ಎಫ್.ಎಲ್ ವತಿಯಿಂದ ತಾಲೂಕಿನ ಮೂರೂರು ಗ್ರಾ.ಪಂ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರ್ಕಿಮಕ್ಕಿಗೆ ಕೊಡಲ್ಪಟ್ಟ ಸ್ಮಾರ್ಟ ಕ್ಲಾಸ್ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಪ್ರತಿಭೆಯಿರುತ್ತದೆ, ಆದರೆ ಅದನ್ನು ಸೂಕ್ತವಾಗಿ ಬಳಸಿಕೊಳ್ಳುವಂತಹ ಅವಕಾಶಗಳು ದೊರೆತಿರುವುದಿಲ್ಲ, ಅಂತಹ ಅವಕಾಶಗಳನ್ನು ಹುಡುಕಿ ಅವರಿಗೆ ದೊರಕಿಸಿಕೊಡುವುದರಿಂದ ಅವರ ಪ್ರತಿಭೆಯೂ ಸಹ ಬೆಳಕಿಗೆ ಬರುವುದಲ್ಲದೆ, ಅಂತಹ ಪ್ರತಿಭಾನ್ವಿತರು ದೇಶದ ಆಸ್ತಿಯಾಗುತ್ತಾರೆ ಎಂದ ಅವರು, ಅವಕಾಶಗಳನ್ನು ಹುಡುಕಿಕೊಂಡು ಹೋಗುವಂತಹ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಪಾಲಕರಿಗೆ ತಿಳಿ ಹೇಳಿದ ರಾಜೇಂದ್ರ ಭಟ್ಟ, ಇಂದಿನ ತಂತ್ರಜ್ಞಾನ ಯುಗದಲ್ಲಿ ಇಂತಹ ಗ್ರಾಮೀಣ ಪ್ರದೇಶದ ಶಾಲೆಯಲ್ಲಿ ಇಂತ ಸ್ಮಾರ್ಟ್ ಕ್ಲಾಸ್ ಮಾಡಲು ಟಿ.ವಿ, ಇನ್ವರ್ಟರ್ , ಸೋಲಾರ್ ಪ್ಯಾನೆಲ್ ನೀಡಿದ ಸೆಲ್ಕೋ ಫೌಂಡೇಶನ್ ಹಾಗೂ ಎಲ್.ಐ.ಸಿ ಎಚ್.ಎಫ್.ಎಲ್ ನವರಿಗೆ ಇಲಾಖೆಯ ಪರವಾಗಿ ಧನ್ಯವಾದ ಅರ್ಪಿಸಿದರು. ಶಾಲೆಯ ಅಭಿವೃದ್ಧಿ ದೃಷ್ಟಿಯಿಂದ ಈ ಸ್ಮಾರ್ಟ್ ಕ್ಲಾಸ್ ತರುವಲ್ಲಿ ಹೆಚ್ಚಿನ ಮತುವರ್ಜಿ ವಹಿಸಿದ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಹರೀಶ್ ಪಟಗಾರ ಇವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸೆಲ್ಕೋ ಸೋಲಾರ್ ನ ಸೀನಿಯಲ್ ಮ್ಯಾನೇಜರ್ ಪದ್ಮನಾಭ ಎಸ್ ಭಟ್ಟ ಹಾಗೂ ವೇದಿಕೆಯ ಮೇಲೆ ಸೆಲ್ಕೋ ಸೋಲಾರ್ ನ ಎಕ್ಸಿಕ್ಯೂಟಿವ್ ಸಂತೋಷ್ ನಾಯ್ಕ ಇತರರು ಹಾಜರಿದ್ದು, ಮಕ್ಕಳಿಗೆ ಅಗತ್ಯವಾದ ಎರಡು ಲಕ್ಷ್ಯ ರೂಪಾಯಿಯ ಪರಿಕರವನ್ನು ಶಾಲೆಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿದ್ದ ಸಮನ್ವಯಾಧಿಕಾರಿ ಗಳಾದ ಶ್ರೀಮತಿ ರೇಖಾ ನಾಯ್ಕ ಗ್ರಾಮೀಣ ಭಾಗದಲ್ಲಿ ಇಂತಹ ಸ್ಮಾರ್ಟ ಕ್ಲಾಸ್ ಪ್ರಾರಂಭಿಸಿದ್ದು ಸಂತಸ ತಂದಿದೆ ಎಂದರು. ಬಿ ಅರ್.ಪಿ.ರಾಘವೇಂದ್ರ ಹೆಗಡೆ, ಸಿ. ಅರ್ ಪಿ. ಎಲ್.ಜಿ.ಪಟಗಾರ ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷ ಜಗದೀಶ್ ನಾಯ್ಕ ಹಾಜರಿದ್ದರು. ಮುಖ್ಯಶಿಕ್ಷಕ ಹರಿಶಂದ್ರ ಪಟಗಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾ ಶೆಟ್ಟಿ ನಿರೂಪಿಸಿದರು. ಗಣೇಶ ನಾಯ್ಕ ವಂದಿಸಿದರು. ಮಾಲಿನಿ ಹೆಗಡೆ ಸಹಕರಿಸಿದರು.
ವಿದ್ಯುತ್ ಇಲ್ಲದೆ ಇದ್ದರೂ ಕಾರ್ಯನಿರ್ವಹಿಸುವ ಮಟ್ಟಿಗೆ ಹಳ್ಳಿ ಶಾಲೆಯ ಸ್ಮಾರ್ಟ್ ಕ್ಲಾಸನ್ನು ಸಿದ್ಧಪಡಿಸಿಕೊಟ್ಟಿದ್ದಾರೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಪ್ರೀಲೋಡೆಡ್ ವಿಡಿಯೋಗಳು ಹಾಗೂ ಪಾಠ ಪ್ರವಚನಗಳು ಅದರಲ್ಲಿದ್ದು, ಇದರ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳ ಭವಿಷ್ಯ ಬೆಳಗುವ ಪ್ರಯತ್ನವನ್ನು ಶಿಕ್ಷಕರು ಮಾಡಬೇಕು – ರಾಜೇಂದ್ರ ಭಟ್ಟ, ಕ್ಷೇತ್ರ ಶಿಕ್ಷಣಾಧಿಕಾರಿಗಳು.