ಶಿರಸಿ: ಸಮಸ್ತ ಹಿಂದುಗಳು ಪವಿತ್ರವಾಗಿ ಕಾಣುವ, ಪೂಜಿಸುವ ಗೋಮಾತೆಯ ತಲೆ ಕಡಿದು ಹೆಗಡೆಕಟ್ಟಾ ಬಳಿಯ ರಸ್ತೆಯಲ್ಲಿ ಎಸೆಯಲಾಗಿದ್ದ ಕುಕೃತ್ಯ ವಿರೋಧಿಸಿ ಜು.1ರಂದು ಶಿರಸಿ ಗ್ರಾಮೀಣ ಪೋಲಿಸ್ ಠಾಣೆಯ ಪಿಎಸ್ಐಗೆ ದೂರು ಸಲ್ಲಿಸಲಾಗಿತ್ತು.
ಆದರೆ ಘಟನೆ ನಡೆದು ಇಷ್ಟು ದಿನಗಳು ಕಳೆದರೂ ತನಿಖೆ ಕೈಗೊಂಡು, ಹೇಯ ಕೃತ್ಯ ನಡೆಸಿದ ದುಷ್ಕರ್ಮಿಗಳ ಬಂಧನ ಆಗದಿರುವುದು ದುರದೃಷ್ಟಕರ ಎಂದು ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಚಾಲಕ ಹರೀಶ್ ಕರ್ಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಶಿರಸಿ ಸೂಕ್ಷ್ಮ ಪ್ರದೇಶವಾಗಿ ಬದಲಾಗಿದ್ದು, ಭಯೋತ್ಪಾದಕರ ಬಂಧನ ಹಾಗೂ ರಾಷ್ಟ್ರೀಯ ತನಿಖಾ ದಳದಿಂದ ತನಿಖೆಯಾಗಿರುವ ಘಟನೆಗಳೂ ಕೂಡಾ ನಡೆದಿದೆ. ಈಗ ಹಿಂದೂ ಭಾವನೆಯನ್ನು ಕೆರಳಿಸುವ, ಶಾಂತಿ ಭಂಗ ಮಾಡುವ ದುಷ್ಕೃತ್ಯ ಹೆಗಡೆಕಟ್ಟಾದಲ್ಲಿ ನಡೆದಿದ್ದು, ಗೋಹಂತರ ಬಂಧನವನ್ನು ತಕ್ಷಣವೇ ಮಾಡಿ, ಕಾನೂನಿನ ಅಡಿಯಲ್ಲಿ ಸೂಕ್ತ ಶಿಕ್ಷೆಗೆ ಗುರಿಮಾಡಬೇಕೆಂದು ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆಯು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಈ ವೇಳೆ ಸಂಘಟನೆಯ ಕಮಲಾಕರ ಹನೇಹಳ್ಳಿ, ಲೋಹಿತ್ ಮೊಗೇರ್, ಗುರುಪ್ರಸಾದ ಹೆಗಡೆ, ಸಂಜಯ್ ಸಜ್ಜನ, ಸುದೀಪ್ ಪೂಜಾರ್ ಇನ್ನಿತರರು ಇದ್ದರು.