ಶಿರಸಿ: ತಾಲೂಕಿನ ಬಂಡಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಬ್ರೆ ಗ್ರಾಮದಲ್ಲಿ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು, ಮನೆಯೊಂದರ ಅಡುಗೆ ಕೋಣೆಯಲ್ಲಿ ಬಚ್ಚಿಟ್ಟಿದ್ದ 162 ಗ್ರಾಂ ಒಣ ಗಾಂಜಾ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ ಘಟನೆ ನಡೆದಿದೆ.
ತಾಲೂಕಿನ ಹೆಬ್ರೆ ಗ್ರಾಮದ ವಿನಯ ವಿಷ್ಣು ಗೌಡ ಬಂಧಿತ ಆರೋಪಿ. ಮನೆಯ ಅಡುಗೆ ಕೋಣೆಯ ಕಪಾಟಿನ ಮಧ್ಯದಲ್ಲಿ ಪಾತ್ರೆಗಳ ಮಧ್ಯೆ ಅಕ್ರಮವಾಗಿ ಸುಮಾರು 5 ಸಾವಿರ ರೂ. ಮೌಲ್ಯದ 162 ಗ್ರಾಂ ತೂಕದ ಒಣ ಗಾಂಜಾವನ್ನು ಮಾರಾಟಕ್ಕಾಗಿ ಅಡಗಿಸಿಟ್ಟಿದ್ದನು ಎನ್ನಲಾಗಿದೆ.
ಖಚಿತ ಮಾಹಿತಿ ಮೇರೆಗೆ ಶಿರಸಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ,ಗಾಂಜಾ ಮತ್ತು ಇತರೆ ಸ್ವತ್ತುಗಳನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿ,ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಅಬಕಾರಿ ನಿರೀಕ್ಷಕ ಮಹೇಂದ್ರ ಎಸ್. ನಾಯ್ಕ
ನೇತೃತ್ವದಲ್ಲಿ ಸಿಬ್ಬಂದಿಗಳಾದ ನಿತ್ಯಾನಂದ ವೈದ್ಯ, ಲೋಕೇಶ್ವರ ಬೋರ್ಕರ್, ಗಜಾನನ ನಾಯ್ಕ ಮತ್ತು ಅಬ್ದುಲ್ ಮಕಾನದಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ.