ಭಟ್ಕಳ: ಭಟ್ಕಳ ಸೆಂಟ್ರಿಂಗ್ ಕಾರ್ಮಿಕರ ಸಂಘ (ರಿ.) ಭಟ್ಕಳ, ಇದರ ವಾರ್ಷಿಕ ಸಭೆಯು ತಾಲೂಕಿನ ಗುಳ್ಮಿಯಲ್ಲಿರುವ ಲ್ಯಾಂಪ್ಸ್ ಸಭಾಭವನದಲ್ಲಿ ನಡೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಗೌರವಾಧ್ಯಕ್ಷರಾದ ಕೇಶವ ಆಚಾರಿಯವರು, ʼಈ ಹಿಂದೆ ಕೆಲವರು ನಮ್ಮನ್ನು ಜೀತದಾಳುಗಳಂತೆ ನೋಡುತ್ತಿದ್ದರು. ಆದರೆ ಈಗ ಹಾಗಿಲ್ಲ, ನಾವುಗಳೆಲ್ಲ ಸೇರಿಕೊಂಡು ಸಂಘವನ್ನು ರಚನೆ ಮಾಡಿಕೊಂಡಿದ್ದೇವೆ. ಈ ಮೂಲಕ ನಾವೆಲ್ಲ ಈಗ ಸಂಘಟಿತರಾಗಿದ್ದೇವೆ. ಎಲ್ಲಿ ಯಾರಿಗೇ ಆಗಲಿ ನಮ್ಮ ಕಾರ್ಮಿಕರಿಗೆ ಸಮಸ್ಯೆಯಾದರೆ ಇವತ್ತು ನಾವುಗಳು ಒಟ್ಟಾಗಿ ಸಹಾಯಹಸ್ತ ಚಾಚುತ್ತಿದ್ದೇವೆ. ಸರಕಾರ ತನ್ನ ನಿವೃತ್ತ ನೌಕರರಿಗೆ ಹೇಗೆ ನಿವೃತ್ತಿವೇತನ ನೀಡುತ್ತದೆಯೋ ಹಾಗೆಯೇ ನಮ್ಮ ಸದಸ್ಯರುಗಳಿಗೂ ಕೂಡ ಅವರ ನಿವೃತ್ತ ಜೀವನದ ಸಮಯದಲ್ಲಿ ನಿವೃತ್ತಿವೇತನ ನೀಡುವಂತಾಗಬೇಕು ಹಾಗೂ ಅಂಥ ದೊಡ್ಡ ಮಟ್ಟದಲ್ಲಿ ನಮ್ಮ ಸಂಘ ಬೆಳೆಯುವಂತಾಗಲಿʼ ಎಂದು ಶುಭ ಹಾರೈಸಿದರು.
ನಿಕಟಪೂರ್ವ ಅಧ್ಯಕ್ಷರಾದ ರಮೇಶ ಗೊಂಡರವರು ಮಾತನಾಡಿ, ಈ ಹಿಂದೆ ಸದಸ್ಯರು ತಮಗೆ ನೀಡಿದ ಸಹಕಾರವನ್ನು ಸ್ಮರಿಸಿಕೊಂಡು, ನೂತನವಾಗಿ ಆಯ್ಕೆಗೊಂಡ ಆಡಳಿತ ಮಂಡಳಿಯ ಸದಸ್ಯರುಗಳಿಗೆ ಶುಭ ಕೋರಿದರು. ನಂತರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಲೋಕೇಶ ಸರ್ಪನಕಟ್ಟೆ ಇವರು, ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿ, ಈ ಜವಾಬ್ದಾರಿಯನ್ನು ಮುಂದಿನ ದಿನಗಳಲ್ಲಿ ಅತ್ಯಂತ ಶೃದ್ಧೆಯಿಂದ ನಡೆಸಿಕೊಂಡು ಹೋಗುವುದಾಗಿ ತಿಳಿಸಿದರು.
ಇದಕ್ಕೂ ಮೊದಲು ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶಿವರಾಮ ನಾಯ್ಕರವರು ವಾರ್ಷಿಕ ಜಮಾ-ಖರ್ಚುಗಳನ್ನು ಓದಿ ಹೇಳಿದರು. ಸಭೆಯಲ್ಲಿ ಸದಸ್ಯರು ಪ್ರಸ್ತುತ ಸೆಂಟ್ರಿಂಗ್ ದರಗಳ ಬಗ್ಗೆ ಚರ್ಚಿಸಿದರು. ಅಂತಿಮವಾಗಿ ಈ ವರ್ಷ ಗ್ರೌಂಡ್ ಫ್ಲೋರ್ ಸ್ಕ್ವೇರ್ ಫೀಟಿಗೆ ಐವತ್ತು ರೂಪಾಯಿ, ಫರ್ಸ್ಟ್ ಫ್ಲೋರ್ ಸ್ಕ್ವೇರ್ ಫೀಟಿಗೆ ಅರವತ್ತು ರೂಪಾಯಿ ಹಾಗೂ ತದನಂತರದ ಮಹಡಿಗಳಿಗೆ ತಲಾ ಸ್ಕ್ವೇರ್ ಫೀಟಿಗೆ ಹತ್ತು ರೂಪಾಯಿ ಹೆಚ್ಚುವರಿ ಹಣ ತೆಗೆದುಕೊಳ್ಳುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.
ನಂತರ 2023-26 ರವರೆಗಿನ ಮೂರು ವರ್ಷಗಳ ಅವಧಿಗೆ ನೂತನವಾಗಿ ಹತ್ತೊಂಬತ್ತು ಸದಸ್ಯರುಗಳನ್ನು ಸಭೆಯಲ್ಲಿ ಕೆಲವೊಂದು ಕ್ಷೇತ್ರಕ್ಕನುಗುಣವಾಗಿ ಆಯ್ಕೆ ಮಾಡಲಾಯಿತು. ಇವರುಗಳಲ್ಲಿ ಲೋಕೇಶ ಸರ್ಪನಕಟ್ಟೆ ಅಧ್ಯಕ್ಷರಾಗಿ, ತಿಮ್ಮಯ್ಯ ನಾಯ್ಕ ಮತ್ತು ಸುಬ್ರಾಯ ಕಾರಗದ್ದೆ ಉಪಾಧ್ಯಕ್ಷರಾಗಿ, ಶಿವರಾಮ ಹೊನ್ನೆಗದ್ದೆ ಪ್ರಧಾನ ಕಾರ್ಯದರ್ಶಿಯಾಗಿ, ರಾಮ ಹೆಬಳೆ ಸಹ ಕಾರ್ಯದರ್ಶಿಯಾಗಿ ಹಾಗೂ ಬಾಬು ನಾಯ್ಕ ಖಜಾಂಚಿಯಾಗಿ ಆಯ್ಕೆಗೊಂಡರು. ಹಿರಿಯ ಸದಸ್ಯರಾದ ಶ್ರೀ ಕೇಶವ ಆಚಾರಿಯವರನ್ನು ಸಂಘದ ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ, ನೂತನವಾಗಿ ಆಯ್ಕೆಗೊಂಡ ಆಡಳಿತ ಮಂಡಳಿಯ ಸರ್ವ ಸದಸ್ಯರುಗಳಿಗೂ ಶುಭ ಕೋರಲಾಯಿತು.
ಈ ವಾರ್ಷಿಕ ಸಭೆಯಲ್ಲಿ ಸಂಘದ ನೂರಕ್ಕೂ ಅಧಿಕ ಸದಸ್ಯರು ಭಾಗವಹಿಸಿದ್ದರು. ಸಂಘದ ಸಹ ಕಾರ್ಯದರ್ಶಿ ರಾಮ ಹೆಬಳೆ ಕಾರ್ಯಕ್ರಮ ನಿರ್ವಹಣೆಯ ಜೊತೆಗೆ ವರದಿ ವಾಚಿಸಿ, ಸ್ವಾಗತಿಸಿದರು. ನಿಕಟಪೂರ್ವ ಉಪಾಧ್ಯಕ್ಷರಾದ ನಾಗರಾಜ ನಾಯ್ಕ ವಂದಿಸಿದರು.