ಕುಮಟಾ : ಭಾರತದ ಮಹತ್ವಾಕಾಂಕ್ಷೆಯ ಯೋಜನೆಯಾದ ಚಂದ್ರಯಾನ-3 ರ ಸಂಪೂರ್ಣ ಪ್ರಕ್ರಿಯೆಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಲನಗದ್ದೆಯ ವಿದ್ಯಾರ್ಥಿಗಳು ಸ್ಮಾರ್ಟ್ ಟಿ.ವಿ.ಮೂಲಕ ವೀಕ್ಷಿಸಿದರು. ದೇಶದ ಹೆಮ್ಮೆಯ ವಿಜ್ಞಾನಿಗಳ ಸಾಧನೆಯನ್ನು ಮಕ್ಕಳಿಗೆ ಪರಿಚಯಿಸುವ ಸದುದ್ದೇಶದಿಂದ ಶಿಕ್ಷಕರು ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದು, ವಿದ್ಯಾರ್ಥಿಗಳು ಚಂದ್ರಯಾನದ ಪ್ರಾರಂಭಿಕ ಪ್ರಕ್ರಿಯೆಗಳನ್ನು ನೋಡಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಚಂದ್ರಯಾನದ ಉದ್ದೇಶ, ಮಹತ್ವ ಭಾರತದ ಸಾಧನೆಯ ಕುರಿತು ಮಾಹಿತಿಯನ್ನು ಶಿಕ್ಷಕರು ಒದಗಿಸಿದರು.
ನಾವಿನ್ಯಯುತ ಚಟುವಟಿಕೆಯ ಮೂಲಕ ಸದಾ ಗಮನಸೆಳೆಯುವ ಹೊಲನಗದ್ದೆ ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಹೊಸ ಹೊಸ ಅವಕಾಶಗಳನ್ನು ತೆರೆದಿಡುತ್ತಿದೆ. ತಿಂಗಳ ಹಕ್ಕಿಗಳ ಲೋಕ, ಮಾಸದ ಪ್ರತಿಭೆ, ಮಾಸದ ಮಾತು, ನಿಸರ್ಗ ಒಡನಾಟದಂತಹ ಚಟುವಟಿಕೆಯ ಜೊತೆ ಸ್ಮಾರ್ಟ್ ಕ್ಲಾಸ್ ನ ಸಮರ್ಪಕ ಬಳಕೆ ಮಾಡುತ್ತಿರುವುದು ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.
ಈ ಸಂದರ್ಭದಲ್ಲಿ ಮುಖ್ಯಾಧ್ಯಾಪಕರಾದ ಜಯಶ್ರೀ ಪಟಗಾರ, ಶೋಭಾ ಭಟ್ಟ, ರವೀಂದ್ರ ಭಟ್ಟ ಸೂರಿ, ವೀಣಾ ನಾಯ್ಕ, ಮಂಗಲಾ ನಾಯ್ಕ, ಶ್ಯಾಮಲಾ ಎಮ್ ಪಟಗಾರ, ಶ್ಯಾಮಲಾ ಬಿ ಪಟಗಾರ, ದೀಪಾ ನಾಯ್ಕ ಹಾಜರಿದ್ದರು.