ಕುಮಟಾ : ಭಾರತ ಕಾತರದಿಂದ ಕಾಯುತ್ತಿರುವ ‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ’ಯ ಚಂದ್ರಯಾನ 3 ಮಿಷನ್ ಉಡಾವಣೆ ಯಶಸ್ವಿಯಾಗಿದ್ದು ದೇಶದಲ್ಲಿಯೇ ಸಂತಸ ಮನೆಮಾಡಿದೆ. ಶುಕ್ರವಾರ ಮಧ್ಯಾಹ್ನ 2:35 ಪ್ರಾರಂಭವಾದ ಈ ಉಡಾವಣೆ ಪ್ರಕ್ರಿಯೆಯನ್ನು ಇಸ್ರೋ ನೇರ ಪ್ರಸಾರ ಮಾಡಿದ್ದು, ಆ ಲೈವ್ ಅನ್ನು ತಾಲೂಕಿನ ಕೊಂಕಣ ಎಜುಕೇಶನ್ ಟ್ರಸ್ಟ್ ನ ಸರಸ್ವತಿ ವಿದ್ಯಾ ಕೇಂದ್ರದಲ್ಲಿ ಪ್ರಾಜೆಕ್ಟರ್ ಮೂಲಕ ವೀಕ್ಷಣೆ ಮಾಡಿದ ಮಕ್ಕಳು ವೀಕ್ಷಿಸಿದರು.
ಮೂರು ಹಂತದ ವಿಶೇಷ ಸಾಮರ್ಥ್ಯ ಹೊಂದಿರುವ ಬಾಹ್ಯಾಕಾಶ ನೌಕೆಯು ಒಂದೊಂದೇ ಹಂತ ದಾಟುತ್ತಿದ್ದಂತೆ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟುವುದರ ಮೂಲಕ ಆನಂದಿಸಿದ್ದರು. ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡಾವಣೆಗೊಂಡ ಚಂದ್ರಯಾನ 3 ನೌಕೆಯು ಭೂಮಿಯಿಂದ ಮೂರು ಕಕ್ಷೆಯನ್ನು ಸಂಪೂರ್ಣವಾಗಿ ದಾಟಿದ ನಂತರ ಇದನ್ನು ಅಧಿಕೃತಗೊಳಿಸಿದ ಇಸ್ರೋ ವಿಜ್ಞಾನಿಗಳು, ತಂತ್ರಜ್ಞರ ತಂಡದ ಮಾತು ಆಲಿಸಿದ ಮುಗ್ದ ಮಕ್ಕಳು ಬೊಲೋಭಾರತ್ ಮಾತಾಕಿ ಜೈ, ಜೈ ಹಿಂದ್, ಭಾರತ ಬೆಳಗಲಿ ಎಂಬ ಘೋಷಣೆ ಮೊಳಗಿಸಿ ಸಂತಸ ಹಂಚಿಕೊಂಡರು.
ಈ ಸಂದರ್ಭದಲ್ಲಿ ನಾಲ್ಕು, ಐದು ಹಾಗೂ ಆರನೇ ವರ್ಗದ ಅನೇಕ ವಿದ್ಯಾರ್ಥಿಗಳು, ನಾವೂ ವಿಜ್ಞಾನಿಗಳಾಗುತ್ತೇವೆ, ನಾವು ವಿಜ್ಞಾನಿಗಳಾಗುತ್ತೇವೆ ಎಂಬುದಾಗಿ ಕೂಗುತ್ತಾ ಸಂತಸ ಹಂಚಿಕೊಂಡರು.
ಬಾಹ್ಯಾಕಾಶದಲ್ಲಿ ವಿಸ್ಮಯ ಮೂಡಿಸಲಿರುವ ಇಸ್ರೋದ ಚಂದ್ರಯಾನ 3ರ ಯೋಜನೆಯ ಅಂದಾಜು ವೆಚ್ಚ 615 ಕೋಟಿ ರೂ. ಆಗಿದ್ದು, ನಿಗದಿತ ಗುರಿಯ ಪ್ರಕಾರ 45ದಿನಗಳಲ್ಲಿ ಚಂದ್ರನ ಬಳಿ ತಲುಪಲಿರುವ ಇಸ್ರೋ ನೌಕೆ ಹೊಸ ಸಂಚಲನ ಮೂಡಿಸಲಿದೆ ಎಂದು ವಿಜ್ಞಾನ ಶಿಕ್ಷಕಿ ಉಷಾ ಭಟ್ಟ ಮಕ್ಕಳಿಗೆ ವಿವರಿಸಿದರು. ಜೊತೆಗೆ ಈ ಹಿಂದಿನ ಪ್ರಯತ್ನಗಳು ಹಾಗೂ ರಾಕೆಟ್ ಉಡಾವಣೆಯ ಕುರಿತಾದ ವೈಜ್ಞಾನಿಕ ಮಾಹಿತಿಯನ್ನು ಮಕ್ಕಳಿಗೆ ತಿಳಿಸಿಕೊಟ್ಟರು.
2019ರಲ್ಲಿ ಚಂದ್ರಯಾನ-2 ಯೋಜನೆ ಕೈಗೊಳ್ಳಲಾಗಿತ್ತು. ಎಲ್ಲ ಪ್ರಕ್ರಿಯೆಗಳೂ ಸರಿಯಾಗಿಯೇ ನಡೆದಿದ್ದವು. ಆದರೆ ಚಂದ್ರನ ಮೇಲೆ ರೋವರ್ ಇಳಿಯುವ ಸಂದರ್ಭದಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ನಿಯಂತ್ರಣ ಕೇಂದ್ರದ ಜತೆ ಸಂಪರ್ಕ ಕಡಿದುಕೊಂಡು ಸಾಫ್ಟ್ ಲ್ಯಾಂಡಿಂಗ್ ಸಾಧ್ಯವಾಗಿರಲಿಲ್ಲ. ಚಂದ್ರಯಾನ ೩ರಲ್ಲಿ ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯ ಸಾಫ್ಟ್ ಲ್ಯಾಂಡಿಂಗ್ ಆಗಸ್ಟ್ ಅಂತ್ಯದಲ್ಲಿ ನಡೆಯಲಿದೆ. ಇದು ಯಶಸ್ವಿಯಾದರೆ ಭವಿಷ್ಯದ ಅಂತರಗ್ರಹ ಕಾರ್ಯಾಚರಣೆಗಳಿಗೆ ಮುನ್ನುಡಿ ಬರೆಯಲಿದೆ ಎಂದು ಅವರು ವಿವರಿಸಿದರು.
ಮುಖ್ಯಶಿಕ್ಷಕಿ ಸುಜಾತಾ ನಾಯ್ಕ ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಲೈವ್ ತೋರಿಸುವಂತೆ ಸಂಯೋಜನೆ ಮಾಡಿರುವುದಾಗಿ ಹೇಳಿದರು. ಶಿಕ್ಷಕರು ಹಾಗೂ ಐದು ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಚಂದ್ರಯಾನದ ಘಟನೆಗಳನ್ನು ಕಣ್ತುಂಬಿಕೊಂಡರು.