ಸಿದ್ದಾಪುರ: ತಮ್ಮ ಇಪ್ಪತ್ತೇಳನೇ ವಯಸ್ಸಿನಲ್ಲಿಯೇ ಟಿ.ಎಸ್.ಎಸ್. ನ ಅಧ್ಯಕ್ಷರಾಗಿ ರೈತರ, ಅಡಿಕೆಬೆಳೆಗಾರರ ಸಂಕಷ್ಟಗಳನ್ನು ಪರಿಹರಿಸುತ್ತ ಅವರ ಏಳ್ಗೆಗಾಗಿ ಜೀವ ಸವೆಸಿದ ದಾರ್ಶನಿಕ ಬದುಕು ದಿವಂಗತ ಶ್ರೀಪಾದ ಹೆಗಡೆ ಕಡೆಯವರದ್ದು ಎಂದು ಹಿರಿಯ ಸಹಕಾರಿ ಎಸ್.ಕೆ. ಭಾಗ್ವತ್ ಹೇಳಿದರು.
ಅವರು ಸಿದ್ದಾಪುರ ತಾಲೂಕಿನ ಹೇರೂರಿನಲ್ಲಿ ನಡೆದ ತೋಟಗಾರರ ಸ್ವಯಂ ಸಹಕಾರಿ ಅಭಿಯಾನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಅಂದಿನ ಕಾಲದಲ್ಲಿ ಅಡಿಕೆ ಬೆಳೆಗಾರರು ಬದುಕು ಅತ್ಯಂತ ಸಂಕಷ್ಟಮಯವಾಗಿತ್ತು. ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲು ರೈತರು ಹರಸಾಹಸ ಪಡಬೇಕಿತ್ತು. ಅದರಲ್ಲಿ ಸಿಕ್ಕ ಬಿಡಿಗಾಸಿನಲ್ಲೇ ಜೀವನ ನಡೆಸಬೇಕಿತ್ತು. ಆದರೆ ದಿ. ಶ್ರೀಪಾದ ಹೆಗಡೆ ಕಡವೆಯವರು ಅವರೆಲ್ಲರ ಬದುಕಿಗೆ ಆಶಾಕಿರಣವಾದರು. ಅಡಿಕೆಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರು. ಸಂಕಷ್ಟದಲ್ಲಿರುವವರಿಗೆ ಹಣಕಾಸಿನ ಸಹಾಯ ಮಾಡುತ್ತ ಅವರು ಬದುಕನ್ನು ಹಸನಾಗಿಸಿದರು. ರೈತರ ಉನ್ನತಿಗಾಗಿ ಶ್ರಮಿಸಿದ ಅವರ ಬದುಕು ಇಂದಿನ ಯುವಪೀಳಿಗೆಗೆ ಆದರ್ಶಪ್ರಾಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಟಿ.ಎಸ್.ಎಸ್. ಕಾರ್ಯಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಮಾತನಾಡಿ ಮುಂದಿನ ವರ್ಷ ದಿ.ಶ್ರೀಪಾದ ಹೆಗಡೆ ಕಡವೆಯವರ ಜನ್ಮ ಶತಾಬ್ಧಿ ವರ್ಷಾಚರಣೆಯಾಗಲಿದ್ದು ಅದರ ಪೂರ್ವಭಾವಿಯಾಗಿ ತೋಟಗಾರರ ಸ್ವಯಂ ಸಹಕಾರಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ದಿ.ಶ್ರೀಪಾದ ಹೆಗಡೆಯವರ ತತ್ವ- ಆದರ್ಶಗಳನ್ನು ಪ್ರತೀ ಮನೆ ಮನೆಗೆ ತಲುಪಿಸುವ ಮೂಲಕ ಮುಂದಿನ ಪೀಳಿಗೆಗೆ ಪ್ರೇರಣೆ ನೀಡಬೇಕಾದುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಟಿ.ಎಸ್.ಎಸ್. ಪ್ರಧಾನ ವ್ಯವಸ್ಥಾಪಕರಾದ ರವೀಶ್ ಹೆಗಡೆ ಮಾತನಾಡಿ ಅಡಿಕೆಬೆಳೆಗಾರರನ್ನು ಸಹಕಾರಿ ವ್ಯವಸ್ಥೆಯಡಿ ಬರುವಂತೆ ಮಾಡಿದ್ದು ಕಡವೆಯವರ ಸಾಧನೆ. ಹಳ್ಳಿಹಳ್ಳಿಗಳಿಗೂ ಸಂಚರಿಸಿ ಸಹಕಾರಿ ವ್ಯವಸ್ಥೆಯನ್ನು ಅವರು ಬಲಪಡಿಸಿದ್ದಾರೆ. ಅಲ್ಲದೇ ಅಡಿಕೆ ವರ್ತಕರಿಗೂ ಅವರು ಸಹಾಯ ಹಸ್ತ ಚಾಚುವ ಮೂಲಕ ಉತ್ತಮ ವ್ಯಾಪಾರ ವ್ಯವಸ್ಥೆ ರೂಪಿಸುವಲ್ಲಿ ಶ್ರಮ ವಹಿಸಿದ್ದರು ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಊರಿನ ರೈತರೊಬ್ಬರು ಶ್ರೀಪಾದ ಹೆಗಡೆ ಕಡವೆಯವರು ನಮ್ಮ ಕುಟುಂಬದ ಪಾಲಿಗೆ ದೇವರ ಸಮಾನ, ನಮ್ಮ ಕುಟುಂಬದ ಸಂಕಷ್ಟಕಾಲದಲ್ಲಿ ಅವರು ನಮಗೆ ಮಾಡಿದ ಸಹಾಯದ ಕಾರಣದಿಂದಲೇ ನಾವಿಂದು ಬದುಕುತ್ತಿದ್ದೇವೆ ಎಂದು ಅಭಿಪ್ರಾಯ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಅಗ್ರಿಕಲ್ಚರಲ್ ಡೆವಲಪ್ಮೆಂಟ್ ಸೊಸೈಟಿ ನಿರ್ದೇಶಕ ಶ್ರೀಪಾದ ಹೆಗಡೆ ಕಡವೆ, ಟಿಎಸ್ಎಸ್ ನಿರ್ದೇಶಕ ಬಾಲಚಂದ್ರ ಹೆಗಡೆ ಕೊಡಮೂಡು, ಹೀಪನಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲ್ ಆರ್ ಹೆಗಡೆ, ಹೀಪನಳ್ಳಿ ಸೊಸೈಟಿ ನಿರ್ದೇಶಕ ಶಾಂತಾರಾಮ ಹೆಗಡೆ, ಸೇರಿದಂತೆ ಊರಿನ ಹಿರಿಯ ಸಹಕಾರಿಗಳು, ರೈತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.