ಕುಮಟಾ : ತಾಲೂಕಿನ ಮಿರ್ಜಾನಿನ ಖಂಡಗಾರ ಮಾರ್ಗದಲ್ಲಿ, ಮುಗ್ವೇಖಾನವಾಡಿ ಮೂಲಕ ಗೌರಸ್ಕಿ, ಹೆಗಲೆ, ಹುಳಸೆ, ಕೊಡಗುಂಡಿ ಇನ್ನಿತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ ಕಾಮಗಾರಿ ಈ ಹಿಂದೆ ನಡೆದಿತ್ತಾದರೂ, ಸ್ಥಳೀಯರೊಬ್ಬರ ತಕರಾರಿನಿಂದ ಕಳೆದ ೬ ತಿಂಗಳಿಂದ ನಿಂತುಹೋಗಿದ್ದು ಸಮಸ್ಯೆ ಬಗೆಹರಿಸಿ ಸೇತುವೆಯನ್ನು ನಿರ್ಮಿಸಿಕೊಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂಬ ಆಗ್ರಹ ಅಲ್ಲಿಯ ಜನರಿಂದ ಕೇಳಿಬಂದಿದೆ.
ಈ ಕುರಿತು ಸಾರ್ವಜನಿಕರ ಆಗ್ರಹದಂತೆ ಸ್ಥಳಕ್ಕೆ ಮಂಗಳವಾರ ಸಾಮಾಜಿಕ ಹೋರಾಟಗಾರ ಭಾಸ್ಕರ ಪಟಗಾರ ಭೇಟಿನೀಡಿ ಜನರ ಸಮಸ್ಯೆ ಆಲಿಸಿದರು. ಈ ಮಾರ್ಗದಲ್ಲಿ ನಾಲ್ಕು ಸರ್ಕಾರಿ ಪ್ರಾಥಮಿಕ ಶಾಲೆಗಳು. ಅಂಗನವಾಡಿ ಕೇಂದ್ರಗಳು ಇದ್ದು, ಹಲವು ಹಳ್ಳಿಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ದಿನನಿತ್ಯ ಕೆಎಸ್‌ಆರ್ ಟಿಸಿ ಬಸ್ಸುಗಳ ಸಂಚಾರವೂ ಇದ್ದಿತ್ತು, ಆದರೆ ಇದೀಗ ಸೇತುವೆ ಕಾಮಗಾರಿ ಅಪೂರ್ಣವಾಗಿರುವ ಕಾರಣ ಜನರ ಓಡಾಟ ಕಷ್ಟವಾಗಿದೆ. ಜೊತೆಗೆ ಬಸ್ ಈ ಸ್ಥಳಕ್ಕಿಂತ ಮುಂದೆ ಹೋಗುತ್ತಿಲ್ಲವಾಗಿದ್ದು, ಈ ಬಗ್ಗೆ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ, ನಮಗೆ ದಿಕ್ಕು ತೋಚದಂತಾಗಿದೆ ಎಂದು ಸಮಸ್ಯೆ ವಿವರಿದ್ದಾರೆ.
ಈ ರಸ್ತೆಯಲ್ಲಿ ಕಳೆದ ಆರು ತಿಂಗಳ ಹಿಂದೆ ಹಳ್ಳದ ನೀರು ಹರಿದು ಹೋಗಲು ಪಿಡಬ್ಲ್ಯುಡಿ ಇಲಾಖೆಯಿಂದ ೪.೫. ಲಕ್ಷ ವೆಚ್ಚದಲ್ಲಿ ಚಿಕ್ಕ ಸೇತುವೆ ಕಾಮಗಾರಿ ಆರಂಭಿಸಿದ್ದರು. ಸೇತುವೆ ನಿರ್ಮಿಸುತ್ತಿರುವ ಜಾಗಕ್ಕೆ ಸಂಬಂಧಪಟ್ಟಂತೆ ಸ್ಥಳೀಯರೊಬ್ಬರು ತಕರಾರುಎತ್ತಿದ್ದರಿಂದ ಕಾಮಗಾರಿ ಅಷ್ಟಕ್ಕೇ ನಿಂತಿತ್ತು. ದಾಖಲೆ ಪರಿಶೀಲನೆಯ ಪ್ರಕ್ರಿಯೆಗಳುಗಳು ನಡೆದಿತ್ತು ಎನ್ನಲಾಗಿದ್ದು. ಕಾಮಗಾರಿ ಅಲ್ಲಿಯೇ ನಿಂತಿತ್ತು.
ಈ ಸ್ಥಳ ವೀಕ್ಷಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಭಾಸ್ಕರ ಪಟಗಾರ, ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕವೇ ಕಡಿತವಾಗಿದೆ. ನಾವು ಎಷ್ಟು ಹಿಂದೆ ಇದ್ದೇವೆ ಎಂಬುದರ ಬಗ್ಗೆ ಯೋಚಿಸಬೇಕಾಗಿದೆ. ಮಳೆಗಾಲದಲ್ಲಿ ಗ್ರಾಮೀಣ ಭಾಗಕ್ಕೆ ರಸ್ತೆ ಸಂಪರ್ಕ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಕೂಡಲೇ ಜಿಲ್ಲಾಡಳಿತ, ತಾಲೂಕಾಡಳಿತ ಅಗತ್ಯ ಕ್ರಮಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ರಾಜೇಶ ನಾಯಕ, ಶಾಂತರಾಮ ನಾಯ್ಕ, ರೋಷನ ನಾಯ್ಕ, ಮಂಜು ಪಟಗಾರ ಇನ್ನಿತರರು ಇದ್ದರು.
ರಸ್ತೆ ಸಂಪರ್ಕ ಮನುಷ್ಯನ ಮೂಲಭೂತ ಅಗತ್ಯತೆಯಾಗಿದೆ. ಜನತೆಗೆ ತೀರಾ ಅವಶ್ಯಕವಾದ ರಸ್ತೆಯನ್ನು ಕೂಡಲೇ ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ಉಪವಿಭಾಗಾಧಿಕಾರಿಗಳು ಕೂಡಲೇ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಎದುರಲ್ಲಿಯೇ ಪ್ರತಿಭಟನೆ ಅನಿವಾರ್ಯ – ಭಾಸ್ಕರ ಪಟಗಾರ, ಸಾಮಾಜಿಕ ಹೋರಾಟಗಾರ.
ರಸ್ತೆ ಕಾಮಗಾರಿಯ ಬಗ್ಗೆ ನಮ್ಮದೇನೂ ತಕರಾರಿಲ್ಲ. ಆದರೆ ಸರ್ವೆ ನಂಬರ್ ೧೦ ರ ಬದಲು ಸರ್ವೆ ನಂಬರ್ ೨೫ ರಲ್ಲಿ ಕಾಮಗಾರಿ ನಡೆಯುತ್ತಿದ್ದು, ಇದರಿಂದ ನಮ್ಮ ಜಾಗದಲ್ಲಿ ಗಟಾರದ ನೀರು ಹರಿಯುವ ಕಾರಣ ಅದನ್ನು ವಿರೋಧಿಸಿದ್ದೇವೆ. ರಸ್ತೆ ಬಗ್ಗೆ ತಕರಾರಿಲ್ಲ. – ಮಂಗಲಾ ರಾಜಾರಾಮ, ಕಾಮಗಾರಿ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರಿದವರು.