ಹೊನ್ನಾವರ: ತಾಲ್ಲೂಕಿನ ಉಪ್ಪೊಣಿ ಸಮೀಪದ ಬೈಲಗದ್ದೆಯ ಯಕ್ಷಗಾನ ಕಲಾವಿದ ಗಣಪತಿ ಬೈಲಗದ್ದೆ(39) ಅನಾರೋಗ್ಯದಿಂದ ಕೊನೆಯುಸಿರೆಳೆದರು. ಬಾಲ್ಯದಿಂದಲೇ ಯಕ್ಷಗಾನದ ಕುರಿತು ಒಲವು ಹೊಂದಿದ್ದ ಅವರು ಗುಣವಂತೆಯ ಶ್ರೀಮಯ ಯಕ್ಷಗಾನ ಕಲಾಕೇಂದ್ರದಲ್ಲಿ ಯಕ್ಷಗಾನ ತರಬೇತಿ ಪಡೆದರು. ಬಳಿಕ ಗುಂಡಬಾಳ, ಮಡಾಮಕ್ಕಿ, ಸಿಗಂಧೂರು, ಸಾಲಿಗ್ರಾಮ,ಪೆರ್ಡೂರು ಮೊದಲಾದ ಬಯಲಾಟ ಹಾಗೂ ವೃತ್ತಿಪರ ಮೇಳಗಳಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು. ಸರಿಸುಮಾರು ಎರಡು ದಶಕಗಳ ಕಾಲ ವಿಶೇಷವಾಗಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು.
‘ಗಣಪತಿ ಬೈಲಗದ್ದೆ ನಮ್ಮ ಕಲಾಕೇಂದ್ರದಲ್ಲಿ ತರಬೇತಿ ಪಡೆದು ನಂತರ ವೃತ್ತಿಯರಸಿ ದಕ್ಷಿಣದ ಜಿಲ್ಲೆಗಳತ್ತ ಮುಖ ಮಾಡಿದ್ದರು. ಇವರ ಅಕಾಲಿಕ ನಿಧನದಿಂದ ಯಕ್ಷಗಾನ ಕ್ಷೇತ್ರಕ್ಕೆ ನಷ್ಟ ಉಂಟಾಗಿದೆ’ ಎಂದು ಶ್ರೀಮಯ ಯಕ್ಷಗಾನ ಕೇಂದ್ರದ ಮುಖ್ಯಸ್ಥ ಹಾಗೂ ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ಸಂತಾಪ ಸೂಚಿಸಿದ್ದಾರೆ.