ಸಿದ್ದಾಪುರ: ತಾಲೂಕಿನ ಹರಕನಳ್ಳಿಯಲ್ಲಿ ಆಕಸ್ಮಿಕ ಬೆಂಕಿ ತಗುಲಿ ರೈತನೋರ್ವನ ದಾಸ್ತಾನು ಕೊಠಡಿ ಸಂಪೂರ್ಣ ಭಸ್ಮವಾಗಿದ್ದು, ಅಡಿಕೆ-ಕಾಳುಮೆಣಸು ಮತ್ತಿತರ ವಸ್ತುಗಳು ಬೆಂಕಿಗಾಹುತಿಯಾದ ಘಟನೆ ನಡೆದಿದೆ. ರಾಮಕೃಷ್ಣ ನಾಯ್ಕ ಎಂಬುವರ ಮನೆಯ ದಾಸ್ತಾನು ಕೊಠಡಿಗೆ ಏಕಾಏಕಿ ಬೆಂಕಿ ತಗುಲಿ ಪೂರ್ತಿ ಸುಟ್ಟು ಕರಕಲಾಗಿದೆ.
ಈ ಘಟನೆಯಲ್ಲಿ ಅಡಿಕೆ, ಕಾಳುಮೆಣಸು, ಅಡಿಕೆ ಬೇಯಿಸುವ ಹಂಡೆ, ಬುಟ್ಟಿ, ಕಲ್ಲಿ ಮತ್ತಿತರ ವಸ್ತುಗಳು ಸಂಪೂರ್ಣ ಭಸ್ಮವಾಗಿದ್ದು, ಬಡ ರೈತರಾಗಿರುವ ಇವರ ಕುಟುಂಬ ನಿರ್ವಹಣೆಗೆ ಪರದಾಡುವ ಸ್ಥಿತಿ ಉದ್ಭವವಾಗಿದೆ. ಬೆಂಕಿ ಅನಾಹುತದಿಂದ ಅಡಿಕೆ ಮತ್ತಿತರ ಬೆಲೆಬಾಳುವ ವಸ್ತುಗಳು ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ನಂತರ ವಿಷಯ ತಿಳಿದು ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಬಂಧಪಟ್ಟ ಆಡಳಿತ ಇಲಾಖೆಗೆ ಈ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.