ಹೊನ್ನಾವರ: ಪಟ್ಟಣದ ಎಲ್‌ಐಸಿ ಕ್ರಾಸ್ ಹತ್ತಿರ ಬಸ್ ಹಿಂಬದಿಯಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಕುಮಟಾ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಲಿಯೋ ಕ್ಲಬ್ ಅಧ್ಯಕ್ಷ, ಎಲ್‌ಐಸಿ ಪ್ರತಿನಿಧಿ ಸಂದೇಶ ನಾಯ್ಕ ಎಲ್‌ಐಸಿ ಕ್ರಾಸ್ ಸಮೀಪ ಯೂಟರ್ನ್ ಮಾಡುವಾಗ ಹಿಂಬದಿಯಿಂದ ಬರುತ್ತಿದ್ದ ಕುಮಟಾ ಡಿಪೋಗೆ ಸೇರಿದ ಶಿರಸಿ- ಭಟ್ಕಳ ಬಸ್ ಡಿಕ್ಕಿಯಾಗಿದೆ.
ಡಿಕ್ಕಿಯಾದ ರಭಸಕ್ಕೆ ಬಸ್ ಡಿವೈಡರ್ ಮೇಲೆ ನಿಂತಿದ್ದು, ಬೈಕ್ ಬಸ್ ಕೆಳಗಡೆ ಎಳೆದು ತಂದಿದ್ದು, ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಬೈಕ್ ಸಂಪೂರ್ಣ ಜಖಂ ಗೊಂಡಿದ್ದು, ಬಸ್ ಬಲ ಭಾಗಕ್ಕೆ ಹಾನಿಯಾಗಿದೆ. ಸ್ಥಳಕ್ಕೆ ಹೊನ್ನಾವರ ಪೊಲೀಸರು ಆಗಮಿಸಿ ಸಂಚಾರ ಸುಗಮಗೊಳಿಸಿದ್ದಾರೆ. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.