ಕುಮಟಾ : ಪ್ರತಿಭೆಗೆ ಪ್ರೋತ್ಸಾಹ ಸಿಗದಿದ್ದರೆ ಪ್ರತಿಭೆ ಕಮರಿ ಹೋಗುತ್ತದೆ. ಪ್ರೋತ್ಸಾಹ ಸಿಕ್ಕರೆ ಪ್ರತಿಭೆಗಳು ನೈಜತೆಯನ್ನು ತೋರುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಜೇಂದ್ರ ಎಲ್ ಭಟ್ಟ ಹೇಳಿದರು. ಅವರು ಕನ್ನಡ ಸಾಹಿತ್ಯ ಪರಿಷತ್ ಕುಮಟಾ ಘಟಕದ ವತಿಯಿಂದ ನಾದಶ್ರೀ ಕಲಾಕೇಂದ್ರದಲ್ಲಿ ಶನಿವಾರ ನಡೆದ 2022-23 ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಬಾಷಾ ವಿಷಯದಲ್ಲಿ ಶೇ 100 ಅಂಕಗಳಿಸಿದ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಸಾಧಕರನ್ನು ಗೌರವಿಸಿ ಅವರು ಮಾತನಾಡಿದರು.
ಸಸ್ಯಕ್ಕೆ ನೀರು ಗೊಬ್ಬರ ಹಾಕಿ ಆಸರೆ ನೀಡಿದಂತೆ, ಮಕ್ಕಳಿಗೆ ಅವರ ಪ್ರತಿಭೆಯನ್ನು ಪುರಸ್ಕರಿಸುವ ಕಾರ್ಯವನ್ನು ಮಾಡುವ ಅಗತ್ಯ ಇದೆ. ಪ್ರೋತ್ಸಾಹ ಸಿಗುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಆತ್ಮವಿಶ್ವಾಸ ಹೆಚ್ಚಿರುವುದನ್ನು ನಾನು ಗಮನಿಸಿದ್ದೇನೆ ಎನ್ನುತ್ತಾ, ಕನ್ನಡದಲ್ಲಿ ಪೂರ್ಣ ಅಂಕ ಪಡೆದ ಮಕ್ಕಳಿಗೆ ಬೆನ್ನುತಟ್ಟಿ ಅವರ ಸಾಧನೆಯನ್ನು ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯ ಎಂದು ರಾಜೇಂದ್ರ ಭಟ್ಟ ಹೇಳಿದರು.
ತಹಶೀಲ್ದಾರರಾದ ಎಸ್.ಎಸ್ ನಾಯ್ಕಲಮಠ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂಗ್ಲೀಷ್ ಬಗ್ಗೆ ವ್ಯಾಮೋಹ ಹೆಚ್ಚುತ್ತಿರುವ ಈ ಕಾಲದಲ್ಲಿಯೂ ಕನ್ನಡದಲ್ಲಿ ಪೂರ್ಣ ಪ್ರಮಾಣದ ಅಂಕ ಪಡೆದು ಸಾಧನೆ ಮಾಡಿದ ಮಕ್ಕಳ ಬಗ್ಗೆ ಹೆಮ್ಮೆ ಎನಿಸುತ್ತದೆ. ಅವರನ್ನು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಭಿನಂದಿಸುವ ಕಾರ್ಯ ನಿಜವಾಗಿಯೂ ಮೆಚ್ಚುವಂತಹುದ್ದು ಎಂದರು.
ಕನ್ನಡ ಭಾಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದರೆ ಕನ್ನಡ ಉಳಿಸಲು ಸಾಧ್ಯವಿಲ್ಲ. ಕನ್ನಡವನ್ನು ಬಳಸಲು ಕಲಿಯಬೇಕು. ಕನ್ನಡವನ್ನು ಯಾರು ಬಳಸುತ್ತಾರೋ ಅವರು ನಿಜವಾಗಿಯೂ ಕನ್ನಡ ಉಳಿಸುವವರು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷರಾದ ರವೀಂದ್ರ ಭಟ್ಟ ಸೂರಿ ಕನ್ನಡ ಬಳಕೆಯ ಬಗ್ಗೆ ಪಣ ತೊಡಲು ಕರೆ ನೀಡಿದರು.
ಕ.ಸಾ.ಪ ಜಿಲ್ಲಾಧ್ಯಕ್ಷರಾದ ಬಿ.ಎನ್. ವಾಸರೆ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಧನೆಯ ಹಿಂದೆ ಕಾರ್ಯಮಾಡಿದ ಶಿಕ್ಷಕರನ್ನು ಹಾಗೂ ಪಾಲಕರು ನಿಮ್ಮ ಯಶಸ್ಸಿಗೆ ಕಾರಣರು. ಕನ್ನಡದ ಈ ನೆಲದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡದ ಕಾರ್ಯ ಮಾಡುತ್ತಿದೆ. ಇದು ಅತ್ಯಲ್ಪವಾದ ಗೌರವವಾಗಿದೆ. ನಮ್ಮನ್ನು ಆಳುವ ಸರಕಾರ ಇಂತಹ ಕಾರ್ಯಗಳಿಗೆ ಮುಂದಾಗಬೇಕು ಎಂದರು. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕಸಾಪದಿಂದ ತಮನೆ ಗೌರವ ಸಿಕ್ಕಿದೆ ಎಂಬ ಭಾವ ನಿಮ್ಮಲ್ಲಿ ಬಂದರೆ ಕಾರ್ಯಕ್ರಮ ಸಾರ್ಥಕವಾಗುತ್ತದೆ ಎಂದು ಅವರು ಹೇಳಿದರು.
ಜಿಲ್ಲಾ ಕ.ಸಾ.ಪ ಗೌರವ ಕೋಶಾಧ್ಯಕ್ಷರಾದ ಮುರ್ತುಜಾ ಹಿಸೇನ್ ಆನೆಹೊಸೂರು, ಕ್ಷೇತ್ರ ಸಮಸ್ವಯಾಧಿಕಾರಿ ರೇಖಾ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಆನಂದ ಗಾಂವಕರ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಬೀರದಾಸ ಗುನಗಾ, ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷರಾದ ಅನಿಲ್ ರೋಡ್ರಿಗೀಸ್, ರೋಟರಿ ಅಧ್ಯಕ್ಷ ಎನ್.ಆರ್ ಗಜು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕಸಾಪ ತಾಲೂಕಾ ಆಧ್ಯಕ್ಷ ಸುಬ್ಬಯ್ಯ ನಾಯ್ಕ ಪ್ರಾಸ್ತಾವಿಕ ಮಾತುಗಳನ್ನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಸಭೆ ನಡೆಸಲು ನಮ್ಮದೇ ಜಾಗ ಇಲ್ಲವಾಗಿದ್ದು, ತಹಶೀಲ್ದಾರರು ಮಿನಿ ವಿಧಾನಸೌಧದಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿರುವುದಾಗಿ ಹೇಳಿದರು.
ಜಿಲ್ಲಾ ಕ.ಸಾ.ಪ ಗೌರವ ಕಾರ್ಯದರ್ಶಿ ಪಿ.ಆರ್ ನಾಯ್ಕ ಸ್ವಾಗತಿಸಿದರು. ಎಂ.ಎಂ ನಾಯ್ಕ ನಿರೂಪಿಸಿದರು. ಪ್ರಮೋದ ನಾಯ್ಕ ವಂದಿಸಿದರು. ಪಿ.ಎಂ ಮುಕ್ರಿ ಸಹಕರಿಸಿದರು.