ಕುಮಟಾ : ನಗರದ ಮುರೂರು ರಸ್ತೆಯಲ್ಲಿ ನಿರ್ಮಾಣಗೊಂಡು ಲೋಕಾರ್ಪಣೆ ಗೊಂಡಿರುವ ತಾಲೂಕು ಆಡಳಿತ ಸೌಧದಲ್ಲಿ ಜು. 24 ರಿಂದ ನಮ್ಮ ಕಛೇರಿ ಕಾರ್ಯ ಆರಂಭಿಸಲಿದೆ ಎಂದು ತಹಶೀಲ್ದಾರ್ ಎಸ್ ಎಸ್ ನಾಯ್ಕಲಮಠ ತಿಳಿಸಿದರು.
ತಮ್ಮ ಕಛೇರಿಯಲ್ಲಿ ಶನಿವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಹಶೀಲ್ದಾರ್ ಅವರು, ನಗರದ ಮುರೂರು ರಸ್ತೆಯಲ್ಲಿ ಭವ್ಯವಾದ ತಾಲೂಕು ಆಡಳಿತ ಸೌಧ ನಿರ್ಮಾಣಗೊಂಡು ಮಾರ್ಚ ನಲ್ಲಿ ಮಾನ್ಯ ಮುಖ್ಯಮಂತ್ರಿಗಳು ಲೋಕಾರ್ಪಣೆ ಗೊಳಿಸುವವರಿದ್ದರು, ಆದರೆ ಅನಿವಾರ್ಯ ಕಾರಣಗಳಿಂದ ಅಂದಿನ ಸರ್ಕಾರದ ಸಭಾಧ್ಯಕ್ಷರು, ಉಸ್ತುವಾರಿ ಸಚಿವರು, ಮಂತ್ರಿಗಳು, ಶಾಸಕರ ಉಪಸ್ಥಿತಿಯಲ್ಲಿ ಲೋಕಾರ್ಪಣೆಗೊಂಡಿದೆ. ನಂತರ ವಿಧಾನಸಭಾ ಚುನಾವಣೆ ಎದುರಾದುದರಿಂದ ಕಛೇರಿ ಸ್ಥಳಾಂತರ ಕಾರ್ಯ ವಿಳಂಬವಾಗಿತ್ತು ಇದೀಗ ಮಾನ್ಯ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಹಶೀಲ್ದಾರ್ ಕಛೇರಿಯಲ್ಲಿಯ ಚುನಾವಣೆ ವಿಭಾಗ , ಆಡಳಿತ, ಸಿಬ್ಬಂದಿ, ಭೂ ಸುಧಾರಣೆ, ಎಲ್ ಎನ್ ಡಿ, ಅಂಕಿ ಸಂಖ್ಯೆ, ವಿವಿಧ ಯೋಜನೆ ವಿಭಾಗ ಹಾಗೂ ಗ್ರೇಡ್ 2 ತಹಶೀಲ್ದಾರ್ ರವರ ವಿಭಾಗಗಳನ್ನು ಆಡಳಿತ ಸೌಧಕ್ಕೆ ಸ್ಥಳಾಂತರ ಕಾರ್ಯ ಆರಂಭಿಸಿದ್ದು ಜು.೨೪ ರಿಂದ ಹೊಸ ಕಟ್ಟಡದಲ್ಲಿ ಕಾರ್ಯ ಆರಂಭಿಸಲಿದ್ದೇವೆ ಎಂದರು.
ಸ್ಥಳಾಂತರದ ಸಂದರ್ಭದಲ್ಲಿ ಅಥವಾ ಮುಂದೆ ಕಾರ್ಯ ಆರಂಭ ಆದ ನಂತರ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಿ ಸರಿಯಾದ ಯೋಜನೆ ರೂಪಿಸಿ ಕಾರ್ಯ ಮಾಡಲಿದ್ದೇವೆ ಎಂದರು.
ಇನ್ನು ಈಗಿರುವ ಹಳೆಯ ತಹಶೀಲ್ದಾರ್ ಕಛೇರಿಯಲ್ಲಿ ಭೂಮಿ, ಅಜಲ್ ಜೀ ಜನಸ್ನೇಹಿ ಕೇಂದ್ರ, ಆಧಾರ, ಆಹಾರ, ರೆಕಾರ್ಡ್ ವಿಭಾಗ ಕಾರ್ಯ ಮುಂದುವರೆಸಲಿದ್ದು ಈ ವಿಭಾಗಗಳು ಕೇಸ್ ಒನ್ ಅಂತರ್ಜಾಲ ಸಂಪರ್ಕ ಹೊಂದಿದವಾಗಿದ್ದರಿಂದ ಇವುಗಳ ಸ್ಥಳಾಂತರಕ್ಕೆ ಈಗಾಗಲೇ ಇಲಾಖಾ ಮುಖ್ಯಸ್ಥರೊಂದಿಗೆ ಪತ್ರ ವ್ಯವಹಾರ ನಡೆಸಿದ್ದು ಆದಷ್ಟು ಬೇಗ ಟೆಂಡರ್ ಕರೆದು ಏಜೆನ್ಸಿ ಮುಖಾಂತರ ಸ್ಥಳಾಂತರ ಮಾಡಿಕೊಡಲು ತಿಳಿಸಿದ್ದಾರೆ. ಬಹುತೇಕ ಇನ್ನು ಒಂದು ಒಂದು ತಿಂಗಳಲ್ಲಿ ಎಲ್ಲ ವಿಭಾಗಗಳು ಆಡಳಿತ ಸೌಧದಲ್ಲಿ ಜನರಿಗೆ ಉತ್ತಮ ಸೇವೆ ನೀಡಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗ್ರೇಡ್ 2 ತಹಶೀಲ್ದಾರ್ ಸತೀಶ ಗೌಡ ಉಪಸ್ಥಿತರಿದ್ದರು.
ನೂತನ ಕಟ್ಟಡದಲ್ಲಿ ಎಲ್ಲೆಲ್ಲಿ ಏನೇನು?
* ನೆಲಮಹಡಿಯಲ್ಲಿ ಕಂದಾಯ ಇಲಾಖೆಯ ತಹಶೀಲ್ದಾರ್ ಕಛೇರಿಗೆ ಸಂಬಂಧಿಸಿದ ರೆಕಾರ್ಡ್ ವಿಭಾಗ, ಚುನಾವಣಾ ಸ್ಟ್ರಾಂಗ್ ರೂಮ್.
* ಮೊದಲನೇ ಮಹಡಿಯಲ್ಲಿ ತಹಶೀಲ್ದಾರ್ ಹಾಗೂ ಗ್ರೇಡ್ 2 ತಹಶೀಲ್ದಾರ್, ಉಳಿದ ವಿಭಾಗಗಳು ಮತ್ತು ಉಪ ಖಜಾನೆ.
* ಎರಡನೇ ಮಹಡಿಯಲ್ಲಿ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿ, ಉಪ ನೊಂದಣಾಧಿಕಾರಿಗಳ ಕಛೇರಿ, ಕಾರ್ಮಿಕ ಇಲಾಖೆ.
* ಮೂರನೇ ಮಹಡಿಯಲ್ಲಿ ಸಹಾಯಕ ಆಯುಕ್ತರ ಕಛೇರಿ ಹಾಗೂ ಅಬಕಾರಿ ಇಲಾಖೆ ಕಛೇರಿ.