ಕುಮಟಾ : ಜು ೨೭ರಂದು ರಾಜ್ಯವ್ಯಾಪಿ ನಡೆಯುವ ಟ್ಯಾಕ್ಸಿ ಮಾಲಕರ, ಚಾಲಕರ ಸಂಘ ನೀಡಿದ ಮುಷ್ಕರಕ್ಕೆ ಉತ್ತರಕನ್ನಡ ಜಿಲ್ಲೆಯ ಎಲ್ಲ ಸಂಘಟನೆಗಳು ಬೆಂಬಲ ಸೂಚಿಸುವ ಮೂಲಕ ಸಾರಿಗೆ ವ್ಯವಸ್ಥೆಯನ್ನು ಬಂದ್ ಮಾಡಲಾಗುವುದು. ಸಾರ್ವಜನಿಕರು ಸಹಕಾರ ನೀಡುವಂತೆ  ಆಟೋ ರಿಕ್ಷಾ ಚಾಲಕ, ಮಾಲಕ ಸಂಘದ ಜಿಲ್ಲಾಧ್ಯಕ್ಷ ಆರ್. ಜಿ ನಾಯ್ಕ ಮನವಿ ಮಾಡಿದರು.

ಪಟ್ಟಣದ ಮಹಾಸತಿ ಸಭಾಭವನದಲ್ಲಿ ಟ್ಯಾಕ್ಸಿ, ಆಟೋ, ಟೆಂಪೋ ಸೇರಿದಂತೆ ವಿವಿಧ ಸಂಘಟನೆಗಳು ಸೇರಿ ನಡೆಸಿದ ಮುಷ್ಕರದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಆರ್.ಜಿ ನಾಯ್ಕ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. 

ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಅದರಲ್ಲಿ ಸ್ತ್ರೀ ಶಕ್ತಿ ಯೋಜನೆಯಿಂದ ಖಾಸಗಿ ಸಾರಿಗೆ ವ್ಯವಸ್ಥೆಗೆ ತೀವ್ರ ಹೊಡೆತ ಬಿದ್ದಿದೆ. ಆಟೋ, ಟೆಂಪೋ, ಟೆಕ್ಸಿ, ಖಾಸಗಿ ಬಸ್ ಮಾಲೀಕರು, ಚಾಲಕರು ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿದ್ದರಿಂದ ಪ್ರಯಾಣಿಕರನ್ನೆ ನಂಬಿಕೊಂಡು ಜೀವನ ನಡೆಸುತ್ತಿದ್ದ ಖಾಸಗಿ ಸಾರಿಗೆ ವ್ಯವಸ್ಥೆ ಹದಗೆಟ್ಟಿದೆ. ಅವುಗಳಲ್ಲಿ ಕಾರ್ಯ ನಿರ್ವಹಿಸುವ ಚಾಲಕರು, ನಿರ್ವಾಹಕರು, ಸಿಬ್ಬಂದಿ ಬದುಕು ಬೀದಿಗೆ ಬಂದಿದೆ. ಅವರ ಕುಟುಂಬದ ನಿರ್ವಹಣೆ ಸೇರಿದಂತೆ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿದೆ. ಹಾಗಾಗಿ ಖಾಸಗಿ ಸಾರಿಗೆ ಸಂಸ್ಥೆಗಳು ನೀಡಿದ ಕರೆಯ ಮೇರೆಗೆ ಜಿಲೈ ೨೭ರಂದು ಬೃಹತ್ ಮುಷ್ಕರ ನಡೆಸಲು  ತೀರ್ಮಾನಿಸಿದ್ದೇವೆ. ಆಯಾ ತಾಲೂಕಿನ ಖಾಸಗಿ ವಾಹನ ಚಾಲಕರು, ತಮ್ಮ ಕರ್ತವ್ಯದಿಂದ ದೂರ ಉಳಿದು ಮುಷ್ಕರದಲ್ಲಿ ಪಾಲ್ಗೊಳ್ಳಬೇಕು. ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಖಾಸಗಿ ವಾಹನಗಳನ್ನು ನಿಲ್ಲಿಸಿ, ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಆದರೆ ಶಾಲಾ ವಾಹನ ಮತ್ತು ರೋಗಿಗಳನ್ನು ಸಾಗಿಸುವ ವಾಹನಗಳ ಕಾರ್ಯ ನಿರ್ವಹಣೆಗೆ ಅವಕಾಶ ನೀಡಲಾಗುವುದು. ಈ ಮುಷ್ಕರಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

RELATED ARTICLES  ಶ್ರೀಮಯ ಯಕ್ಷಗಾನ ಗುರುಕುಲ ಕಲಾ ಕೇಂದ್ರಕ್ಕೆ ಅರ್ಜಿ ಆಹ್ವಾನ

ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ರಾಜು ನಾಯ್ಕ ಮಾಸ್ತಿಹಳ್ಳ ಮಾತನಾಡಿ, ಸಾರಿಗೆ ಸಂಸ್ಥೆಗಳ ಮುಷ್ಕರಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಎಲ್ಲರಿಗೂ ಸರ್ಕಾರದ ಸಹಾಯಧನದ ದೊರೆಯುತ್ತಿದೆ. ಆದರೆ ಖಾಸಗಿ ಸಾರಿಗೆ ವಾಹನಗಳ ಚಾಲಕ, ಮಾಲಕರಿಗೆ ಯಾವುದೇ ಸೌಲಭ್ಯಗಳಿಲ್ಲ. ಅವರ ಕುಟುಂಬ ತೀವ್ರ ಸಂಕಷ್ಟದಲ್ಲಿದೆ. ಕರೋನಾದಲ್ಲೂ ಕೂಡ ನಮ್ಮ ವಾಹನ ಚಾಲಕರ, ಮಾಲಕರ ಬದುಕು ಬೀದಿಗೆ ಬಂದಿತ್ತು. ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಂತೆ ಸರ್ಕಾರದ ಗ್ಯಾರಂಟಿ ಯೋಜನೆ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕಿದೆ. ಎಲ್ಲ ಕ್ಷೇತ್ರಗಳಿಗೂ ಸಹಾಧನ ನೀಡುವ ಸರ್ಕಾರ ಖಾಸಗಿ ಸಾರಿಗೆ ವ್ಯವಸ್ಥೆಗೂ ಹೊಸ ಯೋಜನೆ ರೂಪಿಸಿ, ಅವರ ಬದುಕಿಗೆ ಆಸರೆಯಾಗಬೇಕು. ಚಾಲಕ, ಮಾಲಕರ ಸಂಘದ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೀರಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

RELATED ARTICLES  ಸೈಕಲ್ ಮೇಲೆ ಹೋಗುತ್ತಿದ್ದವನಿಗೆ ಬಡಿದ ಲಾರಿ : ಕುಮಟಾದಲ್ಲಿ ಓರ್ವನ ಸಾವು

ಈ ಸಂದರ್ಭದಲ್ಲಿ ಕೆಟಿಡಿಒ ಜಿಲ್ಲಾಧ್ಯಕ್ಷ ನವೀನ ನಾಯ್ಕ, ಹೊನ್ನಾವರ ತಾಲೂಕು ಟ್ಯಾಕ್ಸಿ ಯೂನಿಯನ್ ಅಧ್ಯಕ್ಷ ಶ್ರೀಕಾಂತ ಮೇಸ್ತಾ, ಹೊನ್ನಾವರದ ಟೆಂಪೋ ಯೂನಿಯನ್ ಅಧ್ಯಕ್ಷ ಸಂತೋಷ ನಾಯ್ಕ, ಪ್ರಮುಖರಾದ ಸೋಮನಾಥ ಗೌಡ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.