ಕುಮಟಾ : ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ವಿಪ್ರ ಒಕ್ಕೂಟ ಹೆಗಡೆಯ ವತಿಯಿಂದ ಸನ್ಮಾನಿಸಲಾಯಿತು. ಹೆಗಡೆಯಲ್ಲಿ ನಡೆಯುತ್ತಿರುವ “ಚತುರ್ವೇದ ಸ್ವಾಹಾಕಾರ” ಕಾರ್ಯಕ್ರಮದಲ್ಲಿ ಪ್ರತಿ ವಾರ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸುವ ಉದ್ದೇಶವಿದ್ದು ರವಿವಾರ ನಡೆದ ಕಾರ್ಯಕ್ರಮದಲ್ಲಿ ಐ.ಟಿ.ಬಿ.ಟಿ, ಕಾನೂನು, ವಾಣಿಜ್ಯ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕೆನರಾ ಬ್ಯಾಂಕ್ ಹೆಗಡೆಯ ಶಾಖಾ ಪ್ರಬಂಧಕ ಚಿನ್ಮಯ ಹೆಗಡೆ ನಾವು ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ಸಮಾಜದಲ್ಲಿ ಪ್ರತಿಭಾ ಪಲಾಯನವಾಗುತ್ತಿದೆ. ವೃದ್ಧರು ಮಾತ್ರ ಊರಿನಲ್ಲಿದ್ದಾರೆ, ಯುವಕರು ಪಟ್ಟಣ ಸೇರಿದ್ದಾರೆ. ವೃದ್ಧರ ಸಮಸ್ಯೆಗೆ ಸ್ಪಂದಿಸುವವರಿಲ್ಲ. ಈ ರೀತಿಯ ಪರಿಸ್ಥಿತಿಯಲ್ಲಿ ತಂದೆ ತಾಯಿಗಳಿಗೆ ಆಶ್ರಯವಾಗಬೇಕಾದದ್ದು ಮಕ್ಕಳ ಕರ್ತವ್ಯ. ನೀವು ಎಲ್ಲೇ ಇರಿ ಹೇಗೇ ಇರಿ ಪಾಲಕರ ಬಗ್ಗೆ ಕಾಳಜಿ ಇರಲಿ. ಜನ್ಮ ಪಡೆದ, ಬದುಕಿಗೊಂದು ದಾರಿ ತೋರಿಸಿದ ಹುಟ್ಟೂರನ್ನು ಮರೆಯದಿರಿ ಎಂಬ ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿಪ್ರ ಒಕ್ಕೂಟದ ಅಧ್ಯಕ್ಷರಾದ ಡಾ. ಉಮೇಶ ಶಾಸ್ತ್ರಿಯವರು ಸಂಘಟನೆ ಸಾಗಿಬಂದ ದಾರಿ, ಕೈಗೊಂಡ ಕಾರ್ಯ, ಸಮಾಜ ಸ್ಪಂದಿಸಿದ ರೀತಿಗಳ ಕುರಿತು ಮಾತನಾಡಿದರು.
ಘನಪಾಠಿ ಎಮ್.ವಿ. ಕೃಷ್ಣಮೂರ್ತಿಯವರು ಚತುರ್ವೇದ ಸ್ವಹಾಕಾರದ ಮಹತ್ವ, ಪರಿಣಾಮ, ಕಾರ್ಯಕ್ರಮದ ಉದ್ದೇಶಗಳ ಕುರಿತು ಮಾತನಾಡಿ ವೇದದ ಅಗಾಧತೆಯ ಕುರಿತು ಮನಮುಟ್ಟುವಂತೆ ವಿವರಿಸಿದರು.
ಸಾಧಕರಾದ ಡಾ.ಗೋಪಾಲಕೃಷ್ಣ ಭಟ್ಟ, ತಿಮ್ಮಣ್ಣ ಭಟ್ಟ, ನರಸಿಂಹ ಹೆಗಡೆ, ಶ್ರೀಶ ಭಟ್ಟ, ಪವನ ಹೆಗಡೆ, ವಿಶ್ವಾಸ ಹೆಗಡೆ ಹಾಗೂ ಘನಪಾಠಿ ಎಮ್.ವಿ.ಕೃಷ್ಣಮೂರ್ತಿ, ಸ್ಕಂದೇಶ, ಗುರು ಮತ್ತು ವಿಠ್ಠಲ್ ರವರನ್ನು ಸನ್ಮಾನಿಸಲಾಯಿತು. ಸನ್ಮಾನಿತರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಡಾ.ಗೋಪಾಲಕೃಷ್ಣ ಹೆಗಡೆ ಸ್ವಾಗತಿಸಿದರು, ರವೀಂದ್ರ ಭಟ್ಟ ಸೂರಿ ಪ್ರಾಸ್ತಾವಿಕ ನುಡಿಯೊಂದಿಗೆ ನಿರೂಪಿಸಿದರು. ಮಾತೃವೃಂದದವರಿಂದ ಕುಂಕುಮಾರ್ಚನೆ ನಡೆಯಿತು. ವಿದ್ವಾನ್ ರಮೇಶ ವರ್ಧನ್, ವಿ.ಬಿ.ಮುನ್ನೂರ, ಸಂಘದ ಕೋಶಾಧ್ಯಕ್ಷರಾದ ಎಮ್.ಎಸ್.ಹೆಗಡೆ, ಸುಧಾ ಶಾಸ್ತ್ರಿ, ರಾಘವೇಂದ್ರ ಮಾನೀರ, ಜಿ.ಕೆ.ಭಟ್ಟ ಸೂರಿ ಉಪಸ್ಥಿತರಿದ್ದರು.