ಕುಮಟಾ : ತಾಲೂಕಿನಲ್ಲಿ ಮಂಗಳವಾರ ಬೆಳಗ್ಗೆ ಕೊಂಚ ಕಾಲ ಬಿಡುವು ಕೊಟ್ಟಿದ್ದ ವರುಣ, ಸಂಜೆ ಮತ್ತೆ ಅಬ್ಬರಿಸಿದ್ದಾನೆ. ನದಿಯಂಚಿನ ಜನ ವಸತಿ ಪ್ರದೇಶದಲ್ಲಿ ನೀರಿನಮಟ್ಟ ಇಳಿಕೆ ಕಾಣುತ್ತಿರುವ ಹಂತದಲ್ಲಿ ಮತ್ತೆ ಮಳೆಯಾರ್ಭಟ ಜೋರಾಗಿದ್ದು, ತಗ್ಗು ಪ್ರದೇಶದ ಜನರಲ್ಲಿ ಮತ್ತೆ ಆತಂಕ ಶುರುವಾಗಿತ್ತು. ಕುಮಟಾ ತಾಲೂಕಿನಲ್ಲಿ ಮಂಗಳವಾರ ೭೧.೮ ಮಿ.ಮೀ ಮಳೆಬಿದ್ದಿದೆ. ಮಳೆ ಪ್ರಮಾಣ ಅಧಿಕವಾದದ್ದರಿಂದ ಮಣ್ಣಿನ ಮನೆಯ ಗೋಡೆಯ ಕುಸಿತ ಹೆಚ್ಚಾಗಿದ್ದು, ಹಲವಡೆ ಮನೆ ಗೋಡೆ ಕುಸಿದು ಹಲವರು ನಿರಾಶ್ರಿತರಾಗಿದ್ದಾರೆ.
ತಾಲೂಕಿನ ಬಾಡದ ದೇವಕಿ ವಿಷ್ಣು ಹಳ್ಳೇರ್ ಇವರ ವಾಸದ ಮನೆಯ ಮೇಲ್ಚಾವಣಿ ಕುಸಿದು ಬಿದ್ದಿದೆ. ಪರಿಣಾಮ ಗೋಡೆಯ ಮೇಲೆ ನಿರಂತರ ಮಳೆ ಸುರಿದು ಗೋಡೆ ಬಿರುಕು ಬಿಟ್ಟಿದ್ದು, ೨೩,೮೦೦ ರೂ. ಹಾನಿ ಅಂದಾಜಿಸಲಾಗಿದೆ ಸಂತೇಗುಳಿಯ ಸಾಂತಗಲ್ ನ ದೇವಿ ಕೃಷ್ಣ ದೇಶ ಭಂಡಾರಿ ಇವರ ವಾಸದ ಮನೆಯ ಗೋಡೆ ಕುಸಿದು ಬಿದ್ದಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲವಾಗಿದ್ದು, ರೂ ೪೫,೦೦೦ ರಷ್ಟು ಹಾನಿಯಾಗಿದೆ. ಹುಬ್ಬಣಗೇರಿ ಗ್ರಾಮದ ಪಾರ್ವತಿ ವೆಂಕಟ್ರಮಣ ನಾಯ್ಕ ಇವರ ಮನೆಯ ಮೇಲ್ಛಾವಣಿ ಕುಸಿದು ಬಿದ್ದು, ಮನೆಗೆ ಭಾಗಶಃ ಹಾನಿಯಾಗಿದೆ. ಇದರಿಂದ ಅಂದಾಜು ೧೫,೦೦೦ರೂ. ಹಾನಿಯಾದ ಬಗ್ಗೆ ಅಧಿಕಾರಿಗಳು ವರದಿ ನೀಡಿದ್ದಾರೆ.
ಗೋಕರ್ಣ ದಂಡೇಭಾಗದ ಸುಶೀಲಾ ಈಶ್ವರ ಅಂಬಿಗ ಇವರ ವಾಸ್ಯವ್ಯದ ಮನೆ ಗೋಡೆ ಕುಸಿದು ಬಿದ್ದು ಹಾನಿಯಾಗಿದ್ದು ಸದ್ರಿ ಹಾನಿಯಿಂದ ರೂ. ೨೬, ೦೦೦ ಹಾನಿ ಅಂದಾಜಿಸಲಾಗಿದೆ. ಚೌಡಕೇರಿಯ ಹೊನ್ನ ವೆಂಕ್ಟ ಗೌಡ ಇವರ ವಾಸ್ತವ್ಯದ ಕಚ್ಚಾ ಮನೆ ಮಣ್ಣಿನ ಗೋಡೆ ಮಳೆಯಿಂದಾಗಿ ಕುಸಿದು ಬಿದ್ದಿದೆ. ರೂ. ೧೩, ೦೦೦ ನಷ್ಟದ ಬಗ್ಗೆ ವರದಿ ಸಲ್ಲಿಕೆಯಾಗಿದೆ.
ಶಾಲಾ ಕಾಲೇಜಿಗೆ ರಜೆ ನೀಡಲಾಗಿತ್ತು. ಯಾವುದೇ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ.