ಕುಮಟಾ : ಇಲ್ಲಿನ ಕುಮಟಾ ಅರ್ಬನ್ ಕೋ-ಒಪರೇಟಿವ್ ಬ್ಯಾಂಕ್ ಲಿ. ಇದರ ನಿರ್ದೇಶಕ ಮಂಡಳಿಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲಾ ಸ್ಥಾನಗಳೂ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಅಭಿವೃದ್ಧಿಯ ಹೊಸ ದಿಶೆಗೆ ಒಮ್ಮತದ ಬಲ ಬಂದಂತಾಗಿದೆ. ಈ ಬಗ್ಗೆ ಮಾಹಿತಿ ನೀಡಲು ಪತ್ರಿಕಾಗೋಷ್ಠಿಯನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ಈ ಹಿಂದಿನ ಎರಡು ಅವಧಿಯ ಬ್ಯಾಂಕಿನ ಅಧ್ಯಕ್ಷರಾಗಿ ಯಶಸ್ವಿಯಾಗಿ ಬ್ಯಾಂಕ್ ಮುನ್ನಡೆಸಿ ಜನಮನ್ನಣೆ ಪಡೆದಿರುವ ಕುಮಟಾದ ಪ್ರಸಿದ್ಧ ಉದ್ಯಮಿ ರಾಮನಾಥ ಶ್ರೀಧರ ಶಾನಭಾಗ (ಧೀರೂ ಶಾನಭಾಗ) ಅವರು ಚುನಾವಣಾ ಪ್ರಕ್ರಿಯೆಯ ಕುರಿತಾಗಿ ಮಾಹಿತಿ ನೀಡುತ್ತಾ, ಜು.16 ರಿಂದ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಿದ್ದು, 13 ಸದಸ್ಯರ ಅಗತ್ಯ ಇದ್ದು, ಎಸ್.ಟಿ ಸ್ಪರ್ಧಿಗಳು ಇಲ್ಲದ ಕಾರಣ 12 ಸದಸ್ಯರ ಆಯ್ಕೆಯಾಗಬೇಕಿತ್ತು. ಒಟ್ಟೂ 21 ಸ್ಪರ್ಧಿಗಳು ಇದ್ದು, ಅದರಲ್ಲಿ ಮೊದಲು ಹಿಂದುಳಿದ ವರ್ಗದ ಪ್ರಶಾಂತ ನಾಯ್ಕ ಅವಿರೋಧವಾಗಿ ಆಯ್ಕೆಯಾದರು. ಸಾಮಾನ್ಯ ಮಹಿಳೆ ವಿಭಾಗದಲ್ಲಿ ಸುಧಾ ಗೌಡ, ಸುನೀತಾ ಕಾಮತ್ ಅವಿರೋಧವಾದರು, ‘ಬ’ ವರ್ಗದಲ್ಲಿ ಸ್ಪರ್ಧೆಯಿಂದ ಇನ್ನೋರ್ವ ಸ್ಪರ್ಧಾಳು ನಾಮಪತ್ರ ಹಿಂದೆ ಪಡೆದ ಕಾರಣ ಲೀಲಾವತಿ ಭಂಡಾರಿ ಆಯ್ಜೆಯಾದರು. ಸಾಮಾನ್ಯದಲ್ಲಿ‌ 14 ಮಂದಿ ಸ್ಪರ್ಧೆಯಲ್ಲಿ ಇದ್ದರೂ 7 ಜನ ಅವಿರೋಧವಾಗಿ ಆಯ್ಕೆಯಾದರು ಎಂದು ವಿವರಿಸಿದರು. 

RELATED ARTICLES  ಮಗಳ ಹುಟ್ಟುಹಬ್ಬವನ್ನು ಮತಾದನ ಜಾಗೃತಿಗೆ ಬಳಸಿದ್ದು ಸಾರ್ಥಕತೆಯ ಕ್ಷಣ : ಅರವಿಂದ ಕಕಿಕೋಡಿ

ಬ್ಯಾಂಕ್ ಪ್ರಾರಂಭವಾಗಿ 112ನೇ ವರ್ಷ ಇದಾಗಿದ್ದು, ಇತಿಹಾಸದಲ್ಲಿಯೇ ಮೊದಲ ಬಾರಿಗೆ ಚಂದಾವರ ಹನುಮಂತ ದೇವರು ಬ್ಯಾಂಕಿಗೆ ಪ್ರವೇಶ ಮಾಡಿ ನಮ್ಮನ್ನು ಹರಸಿತ್ತು. ಅದೇ ರೀತಿ ಪರ್ತಗಾಳಿ ಶ್ರೀಗಳು ಆಗಮಿಸಿ ನಮ್ಮನ್ನು ಹರಸಿದ್ದರು. ಹೀಗಾಗಿ ಈ ಚುನಾವಣಾ ಪ್ರಕ್ರಿಯೆ ಇಷ್ಟು ಸಾಂಗವಾಗಿ ಸಂಪನ್ನವಾಗಿದೆ. ಈಗ ಎಲ್ಲಾ ಸ್ಥಳೀಯ ಹಾಗೂ ಸಹಕಾರಿ ಸಂಸ್ಥೆಗಳ ಚುನಾವಣೆ ಬಿರುಸಾಗಿ ಹಾಗೂ ವಿವಿಧ ರೀತಿಯಲ್ಲಿ ನಡೆಯುವುದನ್ನು ನಾವು ಗಮನಿಸುತ್ತೇವೆ ಆದರೆ ಕುಮಟಾ ಅರ್ಬನ್ ಬ್ಯಾಂಕ್ ಎಲ್ಲರಿಗೆ ಮಾದರಿಯಾಗಿದೆ ಎಂದು ಧೀರು ಶಾನಭಾಗ ವಿವರಿಸಿದರು. 

ಕುಮಟಾ ಅರ್ಬನ್ ಬ್ಯಾಂಕ್ ನಲ್ಲಿ 7110 ಶೇರುದಾರರಿದ್ದು, 1382 ಜನ ವೋಟರ್ ಗಳು ಇದ್ದರು. ಸ್ಪರ್ಧೆಗಳು ಮೊದಲು ಕಂಡಿದ್ದರೂ ನಂತರದಲ್ಲಿ ಎಲ್ಲವೂ ಪ್ರೀತಿಯಿಂದ ಇತ್ಯರ್ಥವಾಗಿದೆ. ಚುನಾವಣೆಗೆ ಸುಮಾರು 6 ರಿಂದ 7 ಲಕ್ಷ ರೂಪಾಯಿ ಖರ್ಚಾಗುತ್ತಿತ್ತು. ಇದೀಗ ಕೇವಲ 2 ಲಕ್ಷ 10 ಸಾವಿರದಲ್ಲಿ ಚುನಾವಣಾ ಪ್ರಕ್ರಿಯೆ ಮುಗಿದಿದೆ. ಇದರಿಂದಾಗಿ ಬ್ಯಾಂಕಿಗೆ ಸುಮಾರು ನಾಲ್ಕು ಲಕ್ಷ ರೂ. ಗಳು ಉಳಿತಾಯವಾಗಿದೆ ಇದಕ್ಕೆ ಸಹಕರಿಸಿದ ಎಲ್ಲರಿಗೂ ನೂತನವಾಗಿ ಆಯ್ಕೆಯಾದ ಸದಸ್ಯರು ಧನ್ಯವಾದ ಸಮರ್ಪಿಸುತ್ತೇವೆ ಎಂದರು.

ಅತ್ಯುತ್ತಮ ಸಹಕಾರಿ ಹಾಗೂ ಬ್ಯಾಂಕಿಂಗ್ ನಲ್ಲಿ ಉತ್ತಮ ಜನಸೇವೆಯ ಮೂಲಕವೇ ಹೆಸರಾಗಿರುವ ಈ ಕುಮಟಾ ಅರ್ಬನ್ ಕೋ ಒಪರೇಟಿವ್ ಬ್ಯಾಂಕ್, ಈ ಸಾಲಿನಲ್ಲಿ ಉದ್ಯಮಿ ರಾಮನಾಥ ಶ್ರೀಧರ ಶಾನಭಾಗ (ಧೀರೂ ಶಾನಭಾಗ) ಅವರ ನೇತ್ರತ್ವದಲ್ಲಿ ಮುಕುಂದ ಬಾಬು ಶಾನಭಾಗ ವಲ್ಲಿಗದ್ದೆ, ಸದಾನಂದ ಗಂಗಾಧರ ಕಾಮತ್, ಅಶೋಕ ದಾಮೋದರ ಶಾನಭಾಗ, ಚಂದ್ರಕಾಂತ ಮಂಜುನಾಥ ಶಾನಭಾಗ, ರಾಘವೇಂದ್ರ ಪಾಂಡುರಂಗ ನಾಯಕ್, ಜಯವಂತ ಸಾರಿಂಗ ನಾಯ್ಕ, ಪ್ರಶಾಂತ ವೆಂಕಟೇಶ ನಾಯ್ಕ, ಲೀಲಾವತಿ ನಾಗೇಶ ಭಂಡಾರಿ, ವಸಂತ ಗಣಪತಿ ಹುಲಸ್ವಾರ, ಸುನೀತಾ ರಾಯಾ ಕಾಮತ್, ಸುಧಾ ಬೀರಪ್ಪ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

RELATED ARTICLES  ಅರಣ್ಯ ಇಲಾಖೆಯ ಅಧಿಕಾರಿಗಳ ದರ್ಪ : ಬೀದಿಗೆ ಬಿತ್ತು ಬಡವರ ಬದುಕು.

ಹಿಂದೆ 2004 ರಲ್ಲಿ ಇದೇ ಬ್ಯಾಂಕ್ ನಲ್ಲಿ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆದಿತ್ತು. ನಂತರದ ಎರಡು ಅವಧಿಗೆ ಚುನಾವಣೆ ನಡೆದಿತ್ತು. ಇದೀಗ ಕುಮಟಾ ಅರ್ಬನ್ ಕೋ-ಒಪರೇಟಿವ್ ಬ್ಯಾಂಕ್ ನ ಚುನಾವಣೆಯಲ್ಲಿ ಎಲ್ಲಾ ನಿರ್ದೇಶಕರೂ ಅವಿರೋಧವಾಗಿ ಆಯ್ಕೆಯಾಗಿರುವುದರ ಮೂಲಕ ಗಮನ ಸೆಳೆದಿದ್ದಾರೆ. ಜು.೩೦ ರ ನಂತರದಲ್ಲಿ ಅಧ್ಯಕ್ಷರು ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. 

ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಉತ್ತಮ ಲಾಭ ಪಡೆಯುತ್ತಿದ್ದು 2020-21 ರಲ್ಲಿ 38,17,106 ರೂ. 2021-22 ರಲ್ಲಿ 48,01,863 ರೂ. ಹಾಗೂ 2022-23 ರಲ್ಲಿ 54,94,189 ರೂ ನಿವ್ವಳ ಲಾಭ ಪಡೆದಿದೆ. ಇನ್ನು ಬ್ಯಾಂಕಿನ ವ್ಯವಹಾರದಲ್ಲಿಯೂ ಅತ್ಯುತ್ತಮ ಸೇವೆಯ ಮೂಲಕ ಜನಮನ್ನಣೆ ಪಡೆದುಕೊಂಡಿದೆ.