ಮುಂಡಗೋಡ: ತಾಯಿ ಮತ್ತು ಮಗಳ ಮೇಲೆ ಹಾಡಹಗಲೇ ಕುಡುಗೋಲಿನಿಂದ ಮಾರಣಾಂತಿಕ ಹಲ್ಲೆಯಾದ ಘಟನೆ ತಾಲೂಕಿನ ಗೊಟಗೋಡಿಕೊಪ್ಪದಲ್ಲಿ ನಡೆದಿದೆ. ಅಳಿಯನೇ ಅತ್ತೆ ಹಾಗೂ ಹೆಂಡತಿಯ ಮೇಲೆ ಕುಡುಗೋಲಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿ ಮಗಳನ್ನು ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗೋಟಗೋಡಿಕೊಪ್ಪದ ಹೊನ್ನಮ್ಮ ಬಸವರಾಜ್ ಚಿನ್ನಳ್ಳಿ ಹಾಗೂ ಮಗಳು ಅನ್ನಪೂರ್ಣ ಎಂಬುವವರೇ ಕುಡುಗೋಲಿನಿಂದ ಹಲ್ಲೆಗೆ ಒಳಗಾದವರಾಗಿದ್ದು, ಅನ್ನಪೂರ್ಣ ಎಂಬುವ ಯುವತಿಯನ್ನು ಅದೇ ಗ್ರಾಮದ ನಾಗರಾಜ್ ವಡಲಣ್ಣವರ್ ಎಂಬುವ ಯುವಕನಿಗೆ ಕಳೆದ 10 ವರ್ಷದ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು. ಮದುವೆ ಆದಾಗಿನಿಂದ ಗಂಡ ನಿತ್ಯವೂ ಕುಡಿದು ಬಂದು ಪತ್ನಿಯನ್ನು ಹೊಡೆಯುತ್ತಿದ್ದ ಎಂದು ತಿಳಿದುಬಂದಿದೆ.ದಂಪತಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳು ಇದ್ದರೂ, ಗಂಡನ ಕಿರುಕುಳ ನಿರಂತರವಾಗಿಯೇ ಇತ್ತು ಅನ್ನೋ ಆರೋಪ ಕೇಳಿ ಬಂದಿದೆ.
ಈ ಕಾರಣಕ್ಕಾಗಿ ಗಂಡ ನಾಗರಾಜನ ಉಪಟಳ ತಡೆಯಲಾಗದೇ ಪತ್ನಿ ಅನ್ನಪೂರ್ಣ ಕಳೆದ ಒಂದೂವರೇ ತಿಂಗಳ ಹಿಂದೆ, ಅಲ್ಲಿಯೇ ಇದ್ದ ತನ್ನ ತವರು ಮನೆ ಸೇರಿದ್ದು, ಕೂಲಿ ಕೆಲಸ ಮಾಡಿಕೊಂಡು ತಾಯಿ ಜೊತೆಗೆ ಜೀವನ ನಡೆಸುತ್ತಿದ್ದಳು. ಇದರಿಂದ ಕೋಪಗೊಂಡ ನಾಗರಾಜ್ ಶುಂಠಿ ಗದ್ದೆಯಲ್ಲಿ ಕೆಲಸಕ್ಕೆಂದು ಹೊರಟಿದ್ದ ವೇಳೆ, ಗ್ರಾಮದ ಶಿಬಾರ್ ಗಟ್ಟಿ ಹತ್ತಿರ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಗಾಯಗೊಂಡ ತಾಯಿ ಮಗಳನ್ನು ಸ್ಥಳೀಯರು ಮುಂಡಗೋಡ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ, ತಾಯಿಯ ಸ್ಥಿತಿ ಸ್ಥಿರವಾಗಿದ್ದು, ಅನ್ನಪೂರ್ಣಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ.