ಕುಮಟಾ : ಹಿಂದಿನ ಸರ್ಕಾರದ ಅವಧಿಯಲ್ಲಿ ವಸತಿಯೋಜನೆಯಲ್ಲಿ ಅತಿಹೆಚ್ಚು ಮನೆಗಳು ಮಂಜೂರಾಗಿದ್ದು, ವಸತಿರಹಿತರಿಗೆ ಇದರಿಂದ ಅನುಕೂಲವಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಅವರು ಗೋಕರ್ಣದ ನೆಲೆಗುಣಿಯ ಕಾಶಿ ವಿಶ್ವನಾಥ ಸಭಾಭವನದಲ್ಲಿ ತಾಲೂಕಿನ ಗೋಕರ್ಣ, ಹನೆಹಳ್ಳಿ ಹಾಗೂ ನಾಡುಮಾಸ್ಕೇರಿ ಗ್ರಾಮಪಂಚಾಯತ್ ವ್ಯಾಪ್ತಿಯ ವಸತಿ ಯೋಜನೆ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರವನ್ನು ಗುರುವಾರ ವಿತರಿಸಿ ಮಾತನಾಡಿದರು.
ಗೋಕರ್ಣ ಪಂಚಾಯತ್ ಭಾಗದ 28, ಹನೆಹಳ್ಳಿ ಭಾಗದ 40 ಹಾಗೂ ನಾಡುಮಾಸ್ಕೇರಿ ಭಾಗದ 28 ಫಲಾನುಭವಿಗಳಿಗೆ ವಸತಿಯೋಜನೆಯ ಆದೇಶಪತ್ರವನ್ನು ನೀಡಲಾಗಿದೆ. ಸೂಕ್ತ ವಸತಿ ವ್ಯವಸ್ಥೆ ಇಲ್ಲದ ಬಡ ಕುಟುಂಬಗಳಿಗೆ ಅನುಕೂಲವಾಗಬೇಕೆಂದು ಸರ್ಕಾರ ಈ ಯೋಜನೆಯನ್ನು ನೀಡಿದ್ದು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು. 2021-22 ನೇ ಸಾಲಿನಲ್ಲಿ ಬಸವ ವಸತಿ ಯೋಜನೆಯಡಿಯಲ್ಲಿ ಮಂಜೂರಾದ ಹೆಚ್ಚುವರಿ ಮನೆಗಳು ಇದಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ವಸತಿಯೋಜನೆಯಲ್ಲಿ ಅತಿಹೆಚ್ಚು ಮನೆಗಳು ಮಂಜೂರಾಗಿದ್ದು, ವಸತಿರಹಿತರಿಗೆ ಇದರಿಂದ ಅನುಕೂಲವಾಗಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಮಾಹಿತಿ ಪಡೆದು, ಸರ್ಕಾರದ ನಿಯಮನುಸಾರ ಮನೆಯನ್ನು ನಿರ್ಮಿಸಿ ಎಂದು ಫಲಾನುಭವಿಗಳಿಗೆ ಸೂಚಿಸಿದರು.
ಮೂರು ಪಂಚಾಯತ ವ್ಯಾಪ್ತಿಯ 96 ಫಲಾನುಭವಿಗಳಿಗೆ ಆದೇಶ ಪತ್ರವನ್ನು ಶಾಸಕರು ಹಸ್ತಾಂತರ ಮಾಡಿದರು. ಗೋಕರ್ಣ ಗ್ರಾಮಪಂಚಾಯತ್ ಅಧ್ಯಕ್ಷ ಮಂಜುನಾಥ ಜನ್ನು, ಉಪಾಧ್ಯಕ್ಷೆ ಶಾರದಾ ಮೂಡಂಗಿ, ನಾಡುಮಾಸ್ಕೇರಿ ಗ್ರಾಮಪಂಚಾಯತ್ ಅಧ್ಯಕ್ಷೆ ಧನುಶ್ರೀ ಅಂಕೋಲೆಕರ, ಹನೆಹಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷೆ ಭಾರತಿ ಗೌಡ, ಉಪಾಧ್ಯಕ್ಷ ಭರತ್ ಗಾಂವಕರ, ಮೂರೂ ಗ್ರಾಮಪಂಚಾಯತ ಸದಸ್ಯರುಗಳು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.