ಕುಮಟಾ : ಯಾವುದೇ ಪಕ್ಷದವರೂ ಇರಬಹುದು, ಆದರೆ ಕುಮಟಾ ಹೊನ್ನಾವರ ಕ್ಷೇತ್ರದ ಎಲ್ಲರೂ ನನ್ನವರು ಎಂಬುದು ನನ್ನ ಭಾವನೆ, ಯಾರಿಗೂ ಬೇಧ ಮಾಡದೆ ಎಲ್ಲರಿಗೂ ಅನುಕೂಲ ಮಾಡಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಹೇಳಿದರು. ಅವರು ಗ್ರಾಮ ಪಂಚಾಯತ್ ಕಲಭಾಗ ಮತ್ತು ದೇವಗಿರಿಯ ವಸತಿ ಯೋಜನೆಯ ಫಲಾನುಭವಿಗಳಿಗೆ ಕಾರ್ಯಾದೇಶ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ, ಫಲಾನುಭವಿಗಳಿಗೆ ಆದೇಶ ಪತ್ರ ನೀಡಿ ಮಾತನಾಡಿದರು.

ಬಿಜೆಪಿ, ಕಾಂಗ್ರೆಸ್ ಹಾಗೂ ಬೇರೆ ಬೇರೆ ಪಕ್ಷಗಳು ಇರಬಹುದು ಆದರೆ ಜನರ ಕಷ್ಟಕ್ಕೆ ಸ್ಪಂದಿಸಲು ಯಾವುದೇ ಪಕ್ಷದ ಬೇಧವಿಲ್ಲ. ಹೊನ್ನಾವರಕ್ಕೆ ಕುಡಿಯುವ ನೀರಿನ ಯೋಜನೆಯಲ್ಲಿ ನಾನು ಹಟ ಹಿಡಿದು ಕಾರ್ಯಮಾಡಿದೆ. ಹಿಂದಿನ‌ ಸರ್ಕಾರ ಮಾಡಿದ ಯೋಜನೆ ಎಂದು ನಾನು ಅದರಲ್ಲಿ ತಾತ್ಸಾರ ಮಾಡದೆ ಜನರ ಕಷ್ಟಕ್ಕೆ‌ನೆರವಾಗಿದ್ದೇನೆ, ಹತ್ತಾರು ಯೋಜನೆಗಳು, ಹಲವಾರು ಕಾರ್ಯಗಳನ್ನು ಜನರಿಗಾಗಿ ನಾನು ಮಾಡಿದ್ದೇನೆ. ಅಭಿವೃದ್ಧಿ ವಿಷಯದಲ್ಲಿ ಎಂದಿಗೂ ರಾಜಕೀಯ ಸಲ್ಲ ಎಂದು ಅವರು ಹೇಳಿದರು.

RELATED ARTICLES  4 ಸುಸಜ್ಜಿತ ಆಂಬ್ಯುಲೆನ್ಸ್ ಲೋಕಾರ್ಪಣೆಗೊಳಿಸಿದ ಶಾಸಕಿ ರೂಪಾಲಿ ನಾಯ್ಕ

ವಸತಿ ಯೋಜನೆಯಲ್ಲಿ ಕುಮಟಾ ಹೊನ್ನಾವರದಲ್ಲಿ 600 ಮನೆಗಳನ್ನು ನೀಡಿದ್ದರು, ಆದರೆ ಎರಡು ಸಾವಿರ ಹೆಚ್ಚುವರಿ ಮನೆ ಅಗತ್ಯತೆ ಇದೆ ಎಂದು ಅರ್ಥ ಮಾಡಿಸಿ, ಮುಖ್ಯಂತ್ರಿಗಳಿಗೆ ಬೇಡಿಕೆ ಇಟ್ಟಿದ್ದೆ,  ಅದಕ್ಕೆ ಸ್ಪಂದಿಸಿದ ಬಸವರಾಜ ಬೊಮ್ಮಾಯಿಯವರು ವಸತಿ ಸಚಿವರಿಗೆ ಸೂಚನೆ ನೀಡಿದರು. ವಿ.ಸೋಮಣ್ಣನವರು ಮನೆ ಮಂಜೂರಿ ಮಾಡಿಕೊಟ್ಟರು. ಆದರೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದು ಚುನಾವಣೆ ನಂತರದಲ್ಲೂ ಹೋರಾಟ ಮಾಡಿ ವಸತಿ ಯೋಜನೆಗೆ ಸಂಬಂಧಿಸಿದ ಹಣ ಬಿಡುಗಡೆ ಮಾಡಿಕೊಂಡು ಬಂದಿದ್ದೇನೆ, ಪ್ರಯತ್ನಪಟ್ಟರೆ ಎಲ್ಲವೂ ಸಾಧ್ಯವಾಗುತ್ತದೆ ಎಂಬುದು ಇದರಿಂದ ನೀವು ತಿಳಿಯಬಹುದು ಎಂದರು. 

ಮೋದಿಯವರ ಕಿಸಾನ್ ಸಮ್ಮಾನ್ ಯೋಜನೆಯ ಬಗ್ಗೆ ಉಲ್ಲೇಖಿಸಿದ ಅವರು ಎಲ್ಲಿಯೂ ಏಜೆಂಟರ ಹಾವಳಿ ಇಲ್ಲದೆ ಜನರಿಗೆ‌ ನೇರವಾಗಿ ಸೌಲತ್ತುಗಳು ಸಿಗುತ್ತಲಿದೆ. ವಸತಿ ಯೋಜನೆಯಲ್ಲಿಯೂ ಎಲ್ಲಿಯೂ ಏಜೆಂಟರ ಹಾವಳಿ ಇಲ್ಲ. ಈ ಬಗ್ಗೆ ಯಾವುದೇ ವಿಚಾರ ಗಮನಕ್ಕೆ ಬಂದರೂ ತಕ್ಷಣ ಸಂಬಂಧಿಸಿದವರ ಗಮನಕ್ಕೆ ತರುವಂತೆ ಅವರು ತಿಳಿಸಿದರು.

RELATED ARTICLES  ಬಿಜೆಪಿ ಸರ್ಕಾರದಲ್ಲಿ ಸ್ಪೀಕರ್​ ಆಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಆಯ್ಕೆ..

ಯಡಿಯೂರಪ್ಪ ಸರ್ಕಾರ ಮಳೆಯಿಂದ ಪೂರ್ಣ ಮನೆಗೆ ಹಾನಿಯಾದರೆ 5 ಲಕ್ಷ ರೂಪಾಯಿ ನೀಡುತ್ತಿದ್ದರು, ಈಗ ಒಂದು 1,25,000 ನೀಡುತ್ತಿದ್ದಾರೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇನೆ. ಮನೆಗೆ ನೀರು ನುಗ್ಗಿದವರಿಗೆ ತಕ್ಷಣದಲ್ಲಿ ರಾಜ್ಯ ಹಾಗೂ ಕೇಂದ್ರದ ಮೊತ್ತ ಸೇರಿ 10,000 ರೂ. ಮಂಜೂರಿ ಮಾಡುತ್ತಿದ್ದೆವು. ಈಗ ಕೇಂದ್ರ ಸರ್ಕಾರದ 5,000 ರೂ. ಮಾತ್ರವೇ ಬರುತ್ತಿದೆ‌.  ಈ ಬಗ್ಗೆಯೂ ಸಂಬಂಧಿಸಿದವರ ಜೊತೆಗೆ ಮಾತನಾಡುವುದಾಗಿ ತಿಳಿಸಿದರು.

ತಾಲೂಕಾ ಪಂಚಾಯತದ ಕಾರ್ಯನಿರ್ವಹಣಾಧಿಕಾರಿ ನಾಗರತ್ನಾ ನಾಯ್ಕ, ದೇವಗಿರಿ ಪಂಚಾಯತ ಅಧ್ಯಕ್ಷೆ ರತ್ನಮಾಲಾ ಹರಿಕಂತ್ರ, ಪಿ.ಡಿ.ಓ ಗಳಾದ ವಿನಯ ಕುಮಾರ್, ಡಿ. ಪ್ರಜ್ಞಾ, ಕಲ್ಭಾಗ ಪಂಚಾಯತದ ಉಪಾಧ್ಯಕ್ಷರಾದ ಮಂಜುನಾಥ ನಾಯ್ಕ ವೇದಿಕೆಯಲ್ಲಿದ್ದರು. ಗ್ರಾ.ಪಂ ಸದಸ್ಯರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿದ್ದರು. ದೇವಗಿರಿಯ 31 ಕಲಭಾಗದ 23 ಫಲಾನುಭವಿಗಳು ಆದೇಶ ಪತ್ರ ಪಡೆದರು.