ಕುಮಟಾ : ಕಳೆದ ಎರಡು ವಾರಗಳಿಂದ ಭಾರೀ ಗಾಳಿ, ಮಳೆಯಿಂದ ತತ್ತರಿಸಿ ಹೋಗಿದ್ದ ಕುಮಟಾ ತಾಲೂಕಿನ ಜನ  ಬಿಸಿಲಿನ ವಾತಾವರಣದಿಂದ ಹರ್ಷಗೊಂಡಿದ್ದಾರೆ. ಮಳೆಯಿಂದಾಗಿ ಮನೆಯಿಂದ ಹೊರ ಹೋಗಲೂ ಕೂಡದಂತಾದ ಜನರು ಪೇಟೆಗೆ ಬಂದು ತಮ್ಮ ತಮ್ಮ ಕಾರ್ಯದಲ್ಲಿ ತೊಡಗಿಕೊಂಡ ದೃಶ್ಯ ಸೋಮವಾರ ಕಂಡುಬಂತು.

ಹಗಲಿರುಳೆನ್ನದೆ ಹಟ ಹಿಡಿದು ಸುರಿದಿದ್ದ ಮಳೆ, ನೆರಹಾವಳಿಯ ಭೀತಿ ತಂದೊಡ್ಡಿತ್ತು.  ಗಾಳಿ ಸಹಿತ ಧಾರಾಕಾರ ಮಳೆಯಾದ ಕಾರಣ ಕೆಲ ದಿನ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಇದೀಗ ಮತ್ತೆ ಇಳೆ ಸಹಜ ಸ್ಥಿತಿಗೆ ಮರಳುತ್ತಿದೆ. ಸೋಮವಾರ ಬೆಳಗಿನಿಂದ ಭಾರೀ ಮಳೆ ಸುರಿಯದೇ ಅಲ್ಲಲ್ಲಿ ತುಂತುರು ಮಳೆಯಾಗಿದೆ. ಮಧ್ಯಾಹ್ನವಾಗುತ್ತಿದ್ದಂತೆ ಬಿಸಿಲಿನ ವಾತಾವರಣ ಕಂಡು ಬಂದು ಜನ ಖುಷಿಯಾದರು. 

RELATED ARTICLES  ಅಪಘಾತ : ಕಾರಿನಲ್ಲಿದ್ದ ವ್ಯಕ್ತಿ ಧಾರುಣ ಸಾವು.

ನಿತ್ಯ ಮಳೆಯ ನೀರಿನಿಂದ ತುಂಬಿ ಹರಿಯುತ್ತಿದ್ದ ರಸ್ತೆಗಳು ಸೂರ್ಯನ ಬೆಳಕಿಗೆ ಮೈಯೊಡ್ಡಿ ಸ್ವಚ್ಛಂದ ಸಂಚಾರಕ್ಕೆ ಅವಕಾಶ ಕಲ್ಪಿಸಿದವು. ಮಹಾಮಳೆಯಿಂದ ಹಾನಿಗೊಳಗಾಗಿದ್ದ ಮನೆಗಳು, ವಿದ್ಯುತ್ ಕಂಬಗಳನ್ನು ದುರಸ್ತಿ ಪಡಿಸಲು ಮಳೆ ಸಾಕಷ್ಟು ಬಿಡುವು ನೀಡಿದ ಕಾರಣ ದುರಸ್ತಿ ಕಾರ್ಯ ಎಲ್ಲೆಡೆ ಬಿರುಸುಗೊಂಡಿತ್ತು. ಹೆಸ್ಕಾಂ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯ ನಿರ್ವಹಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಮಾಡಿ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರರಾದರು. ಗ್ರಾಮೀಣ ಪ್ರದೇಶಗಳಲ್ಲಿ ಬಿದ್ದಿದ್ದ ಮರಗಳ ತೆರವು ಕಾರ್ಯಾಚರಣೆಯೂ ನಡೆಯಿತು.

RELATED ARTICLES  ಅಪಘಾತ : ಮೆಕ್ಯಾನಿಕ್ ಸಾವು.

ಜುಲೈ ತಿಂಗಳ ಮಧ್ಯದಲ್ಲಿ ಚುರುಕುಗೊಂಡಿದ್ದ ಮಳೆ ಕಳೆದ ಎರಡು ಮೂರು ದಿನಗಳಿಂದ ಸ್ವಲ್ಪ ಕಡಿಮೆಯಾಗಿತ್ತು. ಆದರೆ ಶಾಂತವಾಗಿರುವ ಮಳೆ ಇಂದಿನಿಂದ ಮತ್ತೆ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ ಜಿಲ್ಲೆಯೂ ಸೇರಿದಂತೆ ಕರಾವಳಿಯ ಹಲವು ಜಿಲ್ಲೆಗಳಲ್ಲಿ ಜುಲೈ 31 ರಿಂದ ಅಗಷ್ಟ್ 3 ರ ವರೆಗೆ ಸರಿಸುಮಾರು 6 ರಿಂದ 11 ಸೆಂ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಕರಾವಳಿಯ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ.