ಕುಮಟಾ : ಧಾರೇಶ್ವರ ಹಾಗೂ ಸುತ್ತ ಮುತ್ತಲಿನ ಭಕ್ತಾದಿಗಳ ಆರಾಧ್ಯ ದೇವರಾದ ಶ್ರೀ ಜಟಗೇಶ್ವರ ದೇವರ ವಾರ್ಷಿಕ ಆವಾರಿ ಪೂಜೆ ರವಿವಾರ ಸಂಪನ್ನಗೊಂಡಿತು. ಪ್ರತಿ ವರ್ಷ ಕರ್ಕಾಟಕ ಮಾಸದಲ್ಲಿ ನಡೆಯುವ ಈ ಪೂಜೆಯಲ್ಲಿ ಗ್ರಾಮದ ಎಲ್ಲಾ ವರ್ಗಗಳ ಭಕ್ತರೂ ಸೇರಿ ಪ್ರತಿ ಮನೆಯಿಂದ ಸೇವಾ ರೂಪದ ಕಾಣಿಕೆಯನ್ನು ಕೊಡುತ್ತಾರೆ. ಮನೆಯಲ್ಲಿರುವ ಜನರ ಹಾಗೂ ಜಾನುವಾರುಗಳ ಪ್ರತಿನಿಧಿತ್ವ ರೂಪವಾದ ಈ ಕಾಣಿಕೆಯನ್ನು ಅರ್ಪಿಸಿ ಕೃತಾರ್ಥರಾಗುತ್ತಾರೆ.
ಊರು ಕಾಯುವ ಜಟಗೇಶ್ವರ ದೇವರು ತಮ್ಮ ತಮ್ಮ ಆರೋಗ್ಯ, ಉದ್ಯೋಗ ಕ್ಷೇತ್ರ ಹಾಗೂ ವ್ಯವಹಾರ, ಕೃಷಿ ಇತ್ಯಾದಿಗಳಲ್ಲಿ ರಕ್ಷಿಸುತ್ತಾನೆ ಇದು ದೃಢವಾದ ನಂಬಿಕೆ ಇಲ್ಲಿನ ಭಕ್ತರದ್ದು. ಊರಿನ ಪ್ರಧಾನ ದೇವರಾದ ಶ್ರೀ ಧಾರಾನಾಥ ಸ್ವಾಮಿಯ ಭಂಟನಾದ ಜಟಗೇಶ್ವರನನ್ನು ಭಕ್ತರು ತಮ್ಮ ಯಾವುದೇ ಕಾರ್ಯ ಅಥವಾ ವಿಶೇಷ ಕಾಮನೆಗಳಲ್ಲಿ ಪ್ರಾರ್ಥಿಸಿ ಫಲವನ್ನು ಪಡೆದಿರುವುದರಿಂದ ಈ ದೇವರು ಅತ್ಯಂತ ಪ್ರಭಾವಿ ಹಾಗೂ ಶಕ್ತಿಶಾಲಿಯೂ ಎಂದು ನಂಬಿ ನಡೆದಿದ್ದಾರೆ.
ಬೇರೆ ಬೇರೆ ಊರುಗಳಲ್ಲಿಯೂ ದೇವರ ಭಕ್ತರಿದ್ದಾರೆ ಅವರು ತಮ್ಮ ತಮ್ಮ ಪೂಜೆಯನ್ನು ಕಾಲಕಾಲಕ್ಕೆ ತಂದು ಅರ್ಪಿಸಿಯೇ ತಮ್ಮ ವಾರ್ಷಿಕ ಸಂಪ್ರದಾಯವನ್ನು ಪಾಲಿಸುತ್ತಾರೆ. ಈ ದೇವರಲ್ಲಿ ಭಕ್ತಾದಿಗಳು ಪ್ರಸಾದ ಕೇಳುವ ರೂಢಿಯೂ ನಡೆದು ಬಂದಿದೆ.
ಅನೇಕರು ಪ್ರಸಾದದ ಮುಖೇನ ತಮ್ಮ ಹಲವಾರು ಸಮಸ್ಯೆಗಳಿಗೆ ಉತ್ತರವನ್ನೂ, ಕಷ್ಟಗಳಿಗೆ ಪರಿಹಾರ ಮಾರ್ಗವನ್ನೂ ಪಡೆದು ಕೃತಾರ್ಥರಾಗಿದ್ದಾರೆ. ಅದಷ್ಟೇ ಅಲ್ಲದೇ ದೇವರಲ್ಲಿ ವಿಶೇಷ ಹರಕೆಯಾಗಿ ತುಲಾಭಾರ ಸೇವೆಯೂ ನಡೆಯುವುದು ವಿಶೇಷವಾಗಿದೆ.