ಕುಮಟಾ : ತಾಲೂಕಿನ ಅಳಕೋಡ್ ಪಂಚಾಯತ್ ವ್ಯಾಪ್ತಿಯ ಕಬ್ಬರ್ಗಿ ಗ್ರಾಮದ ಬೆಳ್ಳಂಗಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 16 ವಿದ್ಯಾರ್ಥಿಗಳಿದ್ದು ಇಲ್ಲಿ ಪ್ರಸ್ತುತ ಶಿಕ್ಷಕರ ಕೊರತೆ ಎದುರಾಗಿದೆ. ಈ ಕಾರಣದಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಈ ಮೊದಲು ಬೆಳ್ಳಂಗಿ ಶಾಲೆಯಲ್ಲಿ ಎರಡು ಶಿಕ್ಷಕರು ಸೇವೆಸಲ್ಲಿಸುತ್ತಿದ್ದರು. ಆದರೆ ಈಗ ಒಬ್ಬ ಶಿಕ್ಷಕರಿಗೆ ವರ್ಗಾವಣೆಯಾಗಿದ್ದು, ಇನ್ನೊರ್ವರು ಅನಾರೋಗ್ಯದ ಕಾರಣದಿಂದ ವೈದ್ಯಕೀಯ ರಜೆಯಲ್ಲಿದ್ದಾರೆ. ಪ್ರಸ್ತುತವಾಗಿ ಬೇರೆ ಶಾಲೆಯ ಒಬ್ಬ ಶಿಕ್ಷಕರು ನಿಯೋಜಿತವಾಗಿ ಆಗಮಿಸಿ ಬೋಧನೆ ಮಾಡುತ್ತಿದ್ದಾರೆ.
ಎರಡು ಶಿಕ್ಷಕರು ಪೂರ್ಣಾವಧಿ ಕಾರ್ಯನಿರ್ವಹಿಸದಿದ್ದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಕುಂಟಾಗುತ್ತದೆ. ಆದ್ದರಿಂದ ಕೂಡಲೇ ನಮ್ಮ ಶಾಲೆ ಎದುರಿಸುತ್ತಿರುವ ಶಿಕ್ಷಕರ ಕೊರತೆಯನ್ನು ಕೂಡಲೇ ನೀಗಿಸಬೇಕೆಂದು ಆಗ್ರಹಿಸಿ ಎಸ್. ಡಿ. ಎಮ್. ಸಿ. ಯವರು ಹಾಗೂ ಗ್ರಾಮಸ್ಥರು ಶಾಸಕರ ನಿವಾಸಕ್ಕೆ ತಂಡೋಪತಂಡವಾಗಿ ಬಂದು ಮುತ್ತಿಗೆಹಾಕುವ ಜೊತೆಗೆ, ತಮ್ಮ ಈ ಬೇಡಿಕೆಯನ್ನು ಕೂಡಲೇ ಈಡೇರಿಸುವಂತೆ ಪಟ್ಟುಹಿಡಿದರು.
ಗ್ರಾಮಸ್ಥರಿಗೆ ಬೇಡಿಕೆಗೆ ಪ್ರತಿಕ್ರಿಯೆ ನೀಡಿದ ಶಾಸಕರು, ಶಿಕ್ಷಕರ ಕೊರತೆ ಇರುವುದರಿಂದ ಮಕ್ಕಳ ಭವಿಷ್ಯಕ್ಕೆ ತೊಂದರೆ ಎಂಬುದಾಗಿ ಪಾಲಕರು ಹಾಗೂ ಗ್ರಾಮಸ್ಥರು ನಮ್ಮ ಬಳಿಗೆ ಬಂದು ವಿಷಯ ವಿವರಿಸಿದ್ದಾರೆ. ಜನರ ಭಾವನೆ ನನಗೆ ಅರ್ಥವಾಗುತ್ತದೆ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಎಲ್. ಭಟ್, ಕೆ. ಡಿ. ಸಿ. ಸಿ. ನಿರ್ದೇಶಕ ಗಜಾನನ ಪೈ, ಗ್ರಾ. ಪಂ. ಸದಸ್ಯ ದೇವು ಗೌಡ, ಎಸ್. ಡಿ. ಎಮ್. ಸಿ. ಅಧ್ಯಕ್ಷ ಬಲಿಯ ಮಾರು ಗೌಡ, ಗ್ರಾಮಸ್ಥರಾದ ಮಾದೇವಿ ಮಂಜುನಾಥ ಗೌಡ, ದೇವಕಿ ದೇವು ಗೌಡ, ಸುರೇಶ ಹಮ್ಮಯ್ಯ ಪಟಗಾರ, ಅಶೋಕ ಶಿವರಾಮ ಉಪಾದ್ಯ, ಗಣೇಶ ವೆಂಕಟರಮಣ ಮುಕ್ರಿ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.