ಕುಮಟಾ : ಉಚ್ಛ ನ್ಯಾಯಾಲಯ ಹಾಗೂ ಸರ್ವೋಚ್ಛ ನ್ಯಾಯಾಲಯದಲ್ಲಿಯೂ ಶಿಕ್ಷಕರನ್ನು ಅನ್ಯ ಕಾರ್ಯಕ್ಕೆ ನಿಯೋಜಿಸದಂತೆ ಆದೇಶ ಮಾಡಿದ್ದು, ಈ ಸುತ್ತೋಲೆ ಹಾಗೂ ಇಲಾಖಾ ಆದೇಶ ಇವುಗಳನ್ನು ಪರಿಗಣಿಸಿ ಕುಮಟಾ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಭೋಧಕೇತರ (ಬಿ.ಎಲ್.ಓ.) ಕಾರ್ಯಕ್ಕೆ ನಿಯೋಜಿಸಿರುವುದನ್ನು ರದ್ದು ಪಡಿಸಿ ಬೋಧನಾ ಕಾರ್ಯಕ್ಕೆ ಹೆಚ್ಚು ಒತ್ತು ಕೊಡಲು ಶಿಕ್ಷಕರಿಗೆ ಅವಕಾಶ ಒದಗಿಸಿಕೊಡುವಂತೆ ಮನವಿ ಸಲ್ಲಿಸಲಾಯಿತು.

ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಚುನಾವಣಾ ಬೂತ್ ಲೆವೆಲ್ ಆಫೀಸರ್ (ಮತಗಟ್ಟೆ ಅಧಿಕಾರಿ) ಆಗಿ ನೇಮಿಸಿದ್ದು, ಇದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುವ ಜೊತೆಗೆ ಶಿಕ್ಷಕರಿಗೂ ಮಾನಸಿಕ ಒತ್ತಡದ ಜೊತೆಗೆ ಕೆಲಸದಹರೆ ನಿಭಾಯಿಸುವುದು ಕಷ್ಟವಾಗುತ್ತದೆ. ಹೀಗಾಗಿ ಈ ಜವಾಬ್ದಾರಿಯಿಂದ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಶಿಕ್ಷಕರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಜೊತೆಗೆ ತಾಲೂಕಾ‌ ಸೌಧಕ್ಕೆ ದೌಡಾಯಿಸಿ ಕುಮಟಾ ತಹಶಿಲ್ದಾರರಾದ ಎಸ್.ಎಸ್. ನಾಯ್ಕಲಮಠ ಅವರಿಗೆ ಮನವಿ ಸಲ್ಲಿಸಿದರು.

RELATED ARTICLES  ಸೂರಜ್ ನಾಯ್ಕ ಸೋನಿ ವಿರುದ್ಧ ಅಪ ಪ್ರಚಾರ ಯತ್ನ : ಜೆಡಿಎಸ್ ಕಾರ್ಯಕರ್ತರಿಂದ ಆಕ್ರೋಶ.

ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಶಾಲೆಗಳಲ್ಲಿ ಆಯಾ ತರಗತಿಗಳಲ್ಲಿ ನಿಗದಿಗೊಳಿಸಲಾಗಿರುವ ಪಠ್ಯವನ್ನು ಪೂರ್ಣಗೊಳಿಸಲು ಶಾಲಾ ಕೆಲಸದ ದಿನಗಳನ್ನು ಕನಿಷ್ಟ ೨೪೪ ದಿನಗಳೆಂದು ನಿಗದಿಪಡಿಸಲಾಗಿದೆ.
ಆದರೆ ಪ್ರಾಥಮಿಕ ಶಾಲಾ ಶಿಕ್ಷಕರುಗಳನ್ನು ಜನಗಣತಿ ಚುನಾವಣಾ ಕಾರ್ಯ, ಮಕ್ಕಳ ಗಣತಿ ಕಾರ್ಯಗಳಿಗೆ ನಿಯೋಜಿಸುವುದರಿಂದ ವಿದ್ಯಾರ್ಥಿಗಳ ಬೋಧನಾ ಕಲಿಕಾ ಪ್ರಕ್ರಿಯೆಗೆ ಕೇವಲ ೧೮೦ ದಿನಗಳು ಮಾತ್ರ ಸಿಗುತ್ತಿವೆ. ಇದರಿಂದ ಭೋಧನಾ ಕಾರ್ಯವು ಕುಂಠಿತವಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಭಿವೃದ್ದಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಪ್ರಾಥಮಿಕ ಶಾಲೆಯ ೫ನೇ ತರಗತಿ ಹಾಗೂ ೮ನೇ ತರಗತಿಗೆ ರಾಜ್ಯಮಟ್ಟದಲ್ಲಿ ಪರೀಕ್ಷೆಗಳು ನಡೆಯುವುದರಿಂದ ಶಿಕ್ಷಕರು ಭೋಧನಾ ಕಾರ್ಯಕ್ಕೆ ಹೆಚ್ಚು ಒತ್ತು ಕೊಟ್ಟು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಹೆಚ್ಚಾಗಿ ಸ್ಪಂದಿಸಿ ಉತ್ತಮ ಫಲಿತಾಂಶ ತರುವ ದೃಷ್ಟಿಯಿಂದ ಘನ ಸರ್ಕಾರವು ಹಲವು ಆದೇಶಗಳ ಮೂಲಕ ಶಿಕ್ಷಕರನ್ನು ಭೋಧಕೇತರ ಕೆಲಸಗಳಿಗೆ ನಿಯೋಜಿಸುವುದನ್ನು ನಿಷೇದಿಸಿರುತ್ತದೆ. ಶಿಕ್ಷಕರುಗಳನ್ನು ಬಿ.ಎಲ್.ಓ. ಕಾರ್ಯಕ್ಕೆ ನಿಯೋಜಿಸುವುದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತುಂಬಲಾರದ ನಷ್ಟ ಉಂಟಾಗಿ ಸಂವಿಧಾನಾತ್ಮಕ ಹಕ್ಕಿಗೆ ಧಕ್ಕೆ ತರುವಂತಾಗಿರುತ್ತದೆ ಎನ್ನಲಾಗಿದೆ.

RELATED ARTICLES  ಉತ್ತರಕನ್ನಡ ಜಿಲ್ಲೆ ಜ್ಞಾನದಲ್ಲಿ ಸಮೃದ್ಧವಾಗಿದೆ : ವಿನಾಯಕ ಭಟ್ಟ ಮೂರೂರು.

ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆನಂದು ಗಾವ್ಕರ್, ಕುಮಟಾ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ರವೀಂದ್ರ ಭಟ್ಟ ಸೂರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಅನಿಲ್ ಭಂಡಾರಿ, ಉಪಾಧ್ಯಕ್ಷೆ ಶೈಲಾ ಮಡಿವಾಳ, ಸದಸ್ಯರಾದ ವಿಷ್ಣು ನಾಯ್ಕ, ನೌಕರರ ಸಂಘದ ಗುರುದಾಸ ಮಹಾಲೆ ಹಾಗೂ ಬಿ.ಎಲ್.ಓ ಕಾರ್ಯಕ್ಕೆ ನಿಯೋಜನೆಗೊಂಡ ನೂರಾರು ಶಿಕ್ಷಕ, ಶಿಕ್ಷಕಿಯರು ಹಾಜರಿದ್ದರು.