ಕುಮಟಾ : ಎಂ. ಟಿ ಗೌಡರವರು ಎಲ್ಲಾ ಶಿಕ್ಷಕರಿಗೂ ಮಾದರಿಯಾಗಿದ್ದವರು. ತಾವಿರುವ ಪ್ರೌಢಶಾಲೆಯನ್ನು ಸರ್ವಾಂಗೀಣ ಅಭಿವೃದ್ಧಿ ಮಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ನೀಡುವಲ್ಲಿ ಶ್ರಮಿಸಿದ ಸ್ನೇಹಮಯಿ ವ್ಯಕ್ತಿತ್ವದ ಅವರನ್ನು ಅವರ ಶಿಷ್ಯರು ಗ್ರಾಮಸ್ಥರು ಹಾಗೂ ಅವರ ಬಳಗದವರು ಅತ್ಯಂತ ಪ್ರೀತಿಯಿಂದ ಈ ಹೊತ್ತು ಗೌರವಿಸುತ್ತಿದ್ದಾರೆ. ಇವರಿಗೆ ಸಲ್ಲುತ್ತಿರುವ ಈ ಗೌರವ ನಿಜವಾದ ಗುರುವಿಗೆ ಸಲ್ಲುತ್ತಿರುವ ಗೌರವ ಎಂದು ಕರ್ನಾಟಕ ವಿಧಾನ ಪರಿಷತ್ ಅಧ್ಯಕ್ಷ ಹಾಗೂ ಮಾಜಿ ಶಿಕ್ಷಣ ಮಂತ್ರಿಗಳಾದ ಬಸವರಾಜ ಹೊರಟ್ಟಿ ಹೇಳಿದರು. ಅವರು ಗುರುಪ್ರಸಾದ ಪ್ರೌಢಶಾಲೆ ಮಲ್ಲಾಪುರದ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದುತ್ತಿರುವ, ಎಂ.ಟಿ ಗೌಡರವರ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 

ಶಿಕ್ಷಕ ಸಾಮಾನ್ಯ ಶಿಕ್ಷಕನಾಗಿದ್ದರೆ ಸಾಲದು. ಎಲ್ಲರನ್ನೂ ಸರಿದಾರಿಯಲ್ಲಿ ನಡೆಸುವ ಗುರುವಾಗಬೇಕು. ಅಂತಹ ಕಾರ್ಯದಲ್ಲಿ ಎಂ. ಟಿ ಗೌಡ ಯಶಸ್ಸು ಕಂಡಿದ್ದಾರೆ. ತಾನಿರುವ ಸುತ್ತಲ ಪರಿಸರವನ್ನು ಸುಂದರವಾಗಿರಿಸುವ ಜೊತೆಗೆ ವಿದ್ಯಾರ್ಥಿಗಳ ಶ್ರೇಯಸ್ಸನ್ನು ಬಯಸಿ ಸಂಸ್ಥೆಯ ಅಭಿವೃದ್ಧಿಗೆ ಹಗಲಿರುಳು ದುಡಿಯುವ ಅವರ ಕಾರ್ಯಕ್ಕೆ ಇಡೀ ಸಮಾಜವೇ ಮನ್ನಣೆ ನೀಡಿದೆ ಎಂದು ಅವರು ಅಭಿಪ್ರಾಯಪಟ್ಟರು.

RELATED ARTICLES  ಅತ್ಯುತ್ತಮ ಅವಕಾಶಗಳನ್ನು ಇಂಟರ್ಯಾಕ್ಟ್ ಕ್ಲಬ್ ಕಲ್ಪಿಸುತ್ತದೆ : ಶಿಲ್ಪಾ ಜಿನರಾಜ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಡಳಿತ ಮಂಡಳಿಯ ಅಧ್ಯಕ್ಷರಾದ ನಾರಾಯಣ ಮಲ್ಲಾಪುರ ಮಾತನಾಡಿ ಎಂ.ಟಿ ಗೌಡ ಪ್ರೌಢಶಾಲೆಯ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ, ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ.  ಅವರನ್ನು ಶ್ರೀವಲ್ಲೀ ಟ್ರಸ್ಟ ನಡೆಸುವ ಶಿಕ್ಷಣ ಸಂಸ್ಥೆಗಳು ಹಾಗೂ ಗುರುಪ್ರಸಾದ ಪ್ರೌಢಶಾಲೆ ಮಲ್ಲಾಪುರದ ಸಲಹಾಗಾರರನ್ನಾಗಿ ನೇಮಿಸಿದ್ದೇವೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಮುರಳಿಧರ ಪ್ರಭು ಮಾತನಾಡಿ, ಒಳ್ಳೆಯ ಕೌಶಲ್ಯವಿರುವವರನ್ನು ಸೇವೆಯಿಂದ ನಿವೃತ್ತಿಗೊಳಿಸಬಾರದು. ಅವರ ಸೇವೆ ಶಿಕ್ಷಣ ಇಲಾಖೆಗೆ ದೊರೆಯುವಂತಾಗಬೇಕು. ಈ ದಿಶೆಯಲ್ಲಿ ಆಡಳಿತ ನಡೆಸುವ ಸರ್ಕಾರಗಳು ಚಿಂತಿಸಬೇಕು ಎಂದರು.

ಅರುಣ ಉಭಯಕರ್ ಮಾತನಾಡಿ ಎಂ.ಟಿ ಗೌಡರವರು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ನಿರ್ಮಿಸಿದ್ದಾರೆ. ಅವರೊಬ್ಬ ಪ್ರಯತ್ನಶೀಲ. ಎಲ್ಲಾ ಕೆಲಸದಲ್ಲಿ ನಿರಂತರವಾಗಿ ಶ್ರಮವಹಿಸುವ ಸಾಧಕ ಎಂದರು. ನಿಕಟ ಪೂರ್ವ ಉಪ ನಿರ್ದೇಶಕರಾದ ಈಶ್ವರ ನಾಯ್ಕ ಮಾತನಾಡಿ ಶಿಕ್ಷಣ ಇಲಾಖೆಯ ಎಲ್ಲಾ ನಿಯಮಗಳನ್ನು ಪಾಲಿಸುವ ಮಾದರಿ ಪ್ರೌಢಶಾಲೆ ಇದು ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಪರಿಜ್ಞಾನ ಪೂರ್ವ ವಿದ್ಯಾರ್ಥಿಗಳ ಸಂಘದ ಜಿ.ಎಸ್ ಹೆಗಡೆ, ಎಚ್.ಆರ್ ನಾಯ್ಕ, ಹೊನ್ನಾವರದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್ ನಾಯ್ಕ, ಎಲ್.ಎಂ ಹೆಗಡೆ, ಆರ್‌.ಟಿ ನಾಯ್ಕ, ಪ್ರಭಾಕರ ಬಂಟ್, ಸತೀಶ ನಾಯ್ಕ, ಸಂತೋಷ ನಾಯ್ಕ ಅತಿಥಿಗಳಾಗಿ ಉಪಸ್ಥಿತರಿದ್ದರು.

RELATED ARTICLES  ರಾಘವೇಶ್ವರ ಶ್ರೀ ಸೀಮೋಲ್ಲಂಘನ : ಚಾತುರ್ಮಾಸ್ಯ ಪ್ರಶಸ್ತಿ ಪ್ರದಾನ ನಾಳೆ

ನಿವೃತ್ತಿ ಹೊಂದುತ್ತಿರುವ ಎಂ.ಟಿ ಗೌಡ ಮಾತನಾಡಿ ಚಂದಾವರ, ಮಲ್ಲಾಪುರ, ಕೂಜಳ್ಳಿ, ಕೋನಳ್ಳಿ ಊರಿನ ಜನ ನನ್ನನ್ನು ಮನೆಯ ಸದಸ್ಯರಂತೆ ಕಂಡಿದ್ದಾರೆ. ಓರ್ವ ಶಿಕ್ಷಕ ವಿದ್ಯಾರ್ಥಿಗಳ ಚಲನವಲನಗಳನ್ನು ಗ್ರಹಿಸಬೇಕು ಅವರಿಗೆ ಅಭ್ಯಾಸವನ್ನು ಹೇಳಿಕೊಡುವುದರ ಜೊತೆಗೆ ಅವರ ಕಷ್ಟ ಬೇಸರ ತೊಂದರೆಗಳಿಗೆ ಆತ್ಮೀಯತೆಯಿಂದ ಸ್ಪಂದಿಸಬೇಕು ಎಂದರು. ಅನುದಾನಿತ ಶಿಕ್ಷಣ ಸಂಸ್ಥೆಗಳ ಅನೇಕ ಸಮಸ್ಯೆಗಳನ್ನು ಪರಿಹರಿಸಿದ ಬಸವರಾಜ ಹೊರಟ್ಟಿಯವರನ್ನು ಶ್ಲಾಘಿಸಿದರು. 

ಎಂ.ಟಿ. ಗೌಡ ದಂಪತಿಗಳನ್ನು ಜಿ.ಇ.ಸೊಸೈಟಿ ಪ್ರೌಢಶಾಲೆ ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು, ಪರಿಜ್ಞಾನ ಪೂರ್ವ ವಿದ್ಯಾರ್ಥಿಗಳ ಸಂಘದ ವಸತಿಯಿಂದ ಸನ್ಮಾನಿಸಲಾಯಿತು. ವಿವಿಧ ಶಿಕ್ಷಕರ ಸಂಘಟನೆಗಳು, ಹಿತೈಷಿಗಳು ಅವರನ್ನು ಸನ್ಮಾನಿಸಿದರು. ಎಂ.ಟಿ.ಗೌಡರ ಸಾಧನೆಯ “ನಿರಾಮಯ” ಗ್ರಂಥದ ತಾತ್ಕಾಲಿಕ ಪ್ರತಿ ಅನಾವರಣಗೊಳಿಸಲಾಯಿತು. 

ಪೂರ್ವ ವಿದ್ಯಾರ್ಥಿಗಳ ವತಿಯಿಂದ ಉಪನ್ಯಾಸಕರಾದ ಆನಂದ ನಾಯ್ಕ ಅಭಿನಂದನಾ ನುಡಿಗಳನ್ನಾಡಿದರು. ಶಿಕ್ಷಕ ರಾಮಚಂದ್ರ ಮಡಿವಾಳ ಅಭಿಪ್ರಾಯ ವ್ಯಕ್ತಪಡಿಸಿದರು. ನಿಯೋಜಿತ ಮುಖ್ಯಾಧ್ಯಾಪಕರಾದ ವಿಜಯಲಕ್ಷ್ಮಿ ಭಟ್ಟ ಸ್ವಾಗತಿಸಿದರು. ಜಯಾ ನಾಯ್ಕ, ರೋಹಿದಾಸ್ ನಾಯ್ಕ ನಿರೂಪಿಸಿದರು. ತಿಮ್ಮಣ್ಣ ಭಟ್ಟ ವಂದಿಸಿದರು.