ಕುಮಟಾದಲ್ಲಿ ಎಬಿವಿಪಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ : ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಕೆ.
ಕುಮಟಾ : ಉಡುಪಿಯ ಖಾಸಗಿ ಕಾಲೇಜೊಂದರ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವೀಡಿಯೋ ಚಿತ್ರೀಕರಿಸಿದ ಪ್ರಕರಣ ಅತ್ಯಂತ ಹೇಯ ಮತ್ತು ಖಂಡನೀಯವಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗುರುವಾರ ಕುಮಟಾ ಹಾಗೂ ಹೊನ್ನಾವರ ತಾಲೂಕಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿದ್ಯಾರ್ಥಿಗಳು ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆವಣಿಗೆ ನಡೆಸಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಉಡುಪಿಯ ಖಾಸಗಿ ಕಾಲೇಜಿನಲ್ಲಿ ಹಿಂದು ವಿದ್ಯಾರ್ಥಿನಿಯರು ಶೌಚಕ್ಕೆ ಹೋದಾಗ ಅನ್ಯ ಕೋಮಿನ ವಿದ್ಯಾರ್ಥಿನಿಯರು ವೀಡಿಯೋ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಕಾಲೇಜು ಆಡಳಿತವು ಆರೋಪಿ ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿದೆ. ಎಬಿವಿಪಿ ಇನ್ನಿತರ ಸಂಘಟನೆಗಳು ಹಾಗೂ ನಾಗರಿಕ ಸಮಾಜ ವಿರೋಧ ವ್ಯಕ್ತಪಡಿಸಿದ ಬಳಿಕ ಪೊಲೀಸರು ಈ ಕುರಿತಾದ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಆಕ್ರೋಶ ಹೊರಹಾಕುತ್ತಾ, ವಿದ್ಯಾರ್ಥಿಗಳು ಮುರೂರು ಪದವಿ ಕಾಲೇಜಿನಿಂದ ಮೆರವಣಿಗೆ ಪ್ರಾರಂಭಿಸಿ ನೆಲ್ಲಿಕೇರಿ, ಮಾಸ್ತಿಕಟ್ಟೆಯ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಗಿಬ್ ಸರ್ಕಲ್ ಗೆ ಬಂದು ಜಮಾವಣೆಗೊಂಡು ನಂತರ ಅಲ್ಲಿಂದ ಸಹಾಯಕ ಆಯುಕ್ತರ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಮನವಿ ಸಲ್ಲಿಸಿದರು. ಮೆರವಣಿಗೆಯುದ್ದಕ್ಕೂ ಆಕ್ರೋಶದಿಂದ ವಿದ್ಯಾರ್ಥಿಗಳು ವಿವಿಧ ಘೋಷಣೆ ಕೂಗಿದ್ದು ಕಂಡುಬಂತು.
ಸಹಾಯಕ ಆಯುಕ್ತರ ಕಚೇರಿಗೆ ಆಗಮಿಸಿದ ವಿದ್ಯಾರ್ಥಿ ಸಮೂಹ ಕೆಲಕಾಲ ಸರ್ಕಾರದ ವೈಫಲ್ಯವನ್ನು ಖಂಡಿಸಿ ದಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಘಟನೆಯ ಹಿಂದೆ ಜಿಹಾದಿಗಳ ಕೈವಾಡ, ಹೆಣ್ಣು ಮಕ್ಕಳನ್ನು ಲವ್ ಜಿಹಾದ ಕೂಪಕ್ಕೆ ತಳ್ಳುವ ಷಡ್ಯಂತ್ರ ಇದ್ದಂತೆ ಭಾಸವಾಗುತ್ತಿದೆ. ಕೇರಳ ಸ್ಟೋರಿಯಂತೆ ಘಟನೆಗಳು ಉಡುಪಿಯಲ್ಲಿ ನಡೆಯುತ್ತಿರುವ ಸಂಶಯವಿರುವ ಕಾರಣ ಪಾಲಕರು ವಿದ್ಯಾರ್ಥಿನಿಯರನ್ನು ವಿದ್ಯಾಭ್ಯಾಸಕ್ಕೆ ಕಳಿಸಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗುತ್ತಲಿದೆ. ಹೀಗಾಗಿ ಪೊಲೀಸರು ಆರೋಪಿಗಳನ್ನು ಸಮಗ್ರವಾಗಿ ತನಿಖೆ ನಡೆಸಿ, ಸರ್ಕಾರವು ಯಾವುದೇ ಹಸ್ತಕ್ಷೇಪ ನಡೆಸದೇ ಸಂಪೂರ್ಣ ಸತ್ಯಾಸತ್ಯತೆ ಹೊರಬರುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಎರಡು ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಬಗ್ಗೆ ಹಾಗೂ ಪುನಃ ಇಂತಹ ಘಟನೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯ ಮೂಲಕ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಬಿವಿಪಿ ಪ್ರಮುಖ ಕೆ.ಎಸ್ ನಂದೀಶ ನಾವೆಲ್ಲರೂ ಒಟ್ಟಿಗೇ ಸಹೋದರತ್ವದ ಭಾವನೆಯಿಂದ ಶಾಲಾ-ಕಾಲೇಜುಗಳಲ್ಲಿ ಇದ್ದು, ಅದೇ ರೀತಿ ಬಾಳುತ್ತಿದ್ದೇವೆ. ಹೀಗಿರುವಾಗ ಉಡುಪಿಯಲ್ಲಾದ ವಿಡಿಯೋ ಚಿತ್ರೀಕರಣ ಪ್ರಕರಣ ಎಲ್ಲರೂ ತಲೆ ತಗ್ಗಿಸುವಂತಹುದು. ಇದನ್ನು ಎಬಿವಿಪಿ ತೀವ್ರವಾಗಿ ಖಂಡಿಸುತ್ತದೆ. ಉಡುಪಿ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಬೇಕು. ಎಬಿವಿಪಿ 75 ವರ್ಷಗಳ ಇತಿಹಾಸವಿದ್ದು, ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ವಿದ್ಯಾರ್ಥಿಗಳು ನೀಡಿದ ಮನವಿಯನ್ನು ಗ್ರೇಡ್-2 ತಹಶೀಲ್ದಾರ್ ಅಶೋಕ್ ಭಟ್ಟ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ವೀರೇಂದ್ರ ಗುನಗಾ, ತಾಲೂಕು ಸಂಚಾಲಕ ನಿಶಾಂತ ದೇಶಪಾಂಡೆ, ಸಹ ಸಂಚಾಲಕಿ ಲಾವಣ್ಯ ಹೆಗಡೆ, ರಾಜ್ಯ ಕಾರ್ಯಕಾರಿಣಿಯ ಸದಸ್ಯೆ ರೂಪಾ ನಾಯ್ಕ, ಶಶಿಕಾಂತ ವಿನಾಯಕ ನಾಯ್ಕ, ಪ್ರಜ್ವಲ್ ಶೆಟ್ಟಿ, ನಮೃತಾ ಇನ್ನಿತರರು ಇದ್ದರು.