ಕುಮಟಾ: ಪತ್ರಿಕಾ ದಿನಾಚರಣೆಯ ನಿಮಿತ್ತ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಕುಮಟಾ ಘಟಕದಿಂದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ತಾಲೂಕು ಮಟ್ಟದ ಭಾಷಣೆ ಸ್ಪರ್ಧೆ ಕುಮಟಾದ ಗಿಬ್ ಬಾಲಕಿಯರ ಪ್ರೌಢ ಶಾಲೆಯಲ್ಲಿ ಯಶಸ್ವಿಯಾಗಿ ನಡೆಯಿತು. ಮಾದಕ ದ್ರವ್ಯಗಳ ವ್ಯಸನದಿಂದ ಸಮಾಜದ ಮೇಲಾಗುವ ದುಷ್ಪರಿಣಾಮ ಎಂಬ ವಿಷಯ ಮೇಲೆ ಹಮ್ಮಿಕೊಂಡ ಕುಮಟಾ ತಾಲೂಕು ಮಟ್ಟದ ಭಾಷಣೆ ಸ್ಪರ್ಧೆಯಲ್ಲಿ ಹತ್ತು ಪ್ರೌಢ ಶಾಲೆಗಳಿಂದ ೨೨ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಮಟಾ ಪೊಲೀಸ್ ಇನ್ಸ್ಪೆಕ್ಟರ್ ತಿಮ್ಮಪ್ಪ ನಾಯ್ಕರು ಮಾತನಾಡಿ, ಇವತ್ತಿನ ದಿನಮಾನಗಳಲ್ಲಿ ಮಾದಕ ದ್ರವ್ಯಗಳ ವ್ಯಸನಕ್ಕೆ ವಿದ್ಯಾರ್ಥಿಗಳು ಕೂಡ ಬಲಿಯಾಗುತ್ತಿದ್ದಾರೆ. ವಿದ್ಯಾರ್ಥಿಗಳೇ ಮುಂದಿನ ಸ್ವಸ್ತ ಸಮಾಜ ನಿರ್ಮಾಣಕರ್ತರು. ಹಾಗಾಗಿ ಅವರನ್ನು ದುಷ್ಚಟಗಳಿಂದ ದೂರ ಉಳಿಯುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಅವರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಕಟಿಬದ್ದರಾಗೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಕುಮಟಾ ಘಟಕದ ಅಧ್ಯಕ್ಷ ಅನ್ಸಾರ್ ಶೇಖ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯಗಳ ವ್ಯಸನದಿಂದಾಗುವ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲೇ ಈ ಭಾಷಣ ಸ್ಪರ್ಧೆಯನ್ನು ಪೊಲೀಸ್ ಇಲಾಖೆಯ ಸಹಕಾರದಲ್ಲಿ ಹಮ್ಮಿಕೊಂಡಿದ್ದೇವೆ. ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಪಾಲ್ಗೊಂಡಿರುವುದು ಖುಷಿ ತಂದಿದೆ. ಈ ಸ್ಪರ್ದೆಯನ್ನು ಏರ್ಪಡಿಸಲು ಸಹಕಾರ ನೀಡಿದ ಗಿಬ್ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು.

RELATED ARTICLES  ಜಿಲ್ಲಾ ಕ.ಸಾ.ಪ. ದಿಂದ ಅನುಭವ ಮಂಟಪ ಅಸ್ತಿತ್ವಕ್ಕೆ : ಶಂಕರ ಮುಂಗರವಾಡಿ ಸಂಚಾಲಕರಾಗಿ ನೇಮಕ


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಗಿಬ್ ಬಾಲಕಿಯರ ಪ್ರೌಢ ಶಾಲೆಯ ಮುಖ್ಯಾಧ್ಯಾಪಕಿ ಗೀತಾ ಪೈ ಅವರು ಪಾಲ್ಗೊಂಡಿದ್ದರು. ಬಳಿಕ ನಡೆದ ಭಾಷಣ ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಕುಮಟಾ ಪೊಲೀಸ್ ಠಾಣೆಯ ಪಿಎಸ್‌ಐ ಈ ಸಿ ಸಂಪತ್ ಮತ್ತು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಕುಮಟಾ ಘಟಕದ ಕಾರ್ಯದರ್ಶಿ ಚರಣರಾಜ್ ನಾಯ್ಕರು ಕಾರ್ಯ ನಿರ್ವಹಿಸಿದ್ದರು. ಹತ್ತು ಪ್ರೌಢ ಶಾಲೆಗಳಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ ೨೨ ವಿದ್ಯಾರ್ಥಿಗಳು ಬಹಳ ಚೆನ್ನಾಗಿ ಭಾಷಣ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಸ್ಪರ್ಧೆಯ ಬಳಿಕ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದ ಕುಮಟಾ ಪೊಲೀಸ್ ಠಾಣೆಯ ಪಿಎಸ್‌ಐ ಈ ಸಿ ಸಂಪತ್ ಅವರು ಮಾತನಾಡಿ, ವಿದ್ಯಾರ್ಥಿಗಳು ತುಂಬಾ ಚೆನ್ನಾಗಿ ಭಾಷಣ ಮಾಡಿದ್ದಾರೆ. ಮಾದಕ ದ್ರವ್ಯಗಳ ವ್ಯಸನದಿಂದ ಸಮಾಜದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿರುವುದು ನೂರಕ್ಕೆ ನೂರಷ್ಟು ಸತ್ಯ. ಇದರ ಜೊತೆಗೆ ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಬಲಿಯಾಗುತ್ತಿದ್ದಾರೆ. ಮೊಬೈಲ್ ಮತ್ತು ಇಂಟರ್ ನೆಟ್ ಗಳ ದುರ್ಬಳಕೆ ಮಾಡಿಕೊಳ್ಳದೇ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

RELATED ARTICLES  ಉತ್ತರಕನ್ನಡದಲ್ಲಿ ಇಂದು 28 ಕೋವಿಡ್ ಕೇಸ್


ಕಾರ್ಯಕ್ರಮವನ್ನು ಶಿಕ್ಷಕ ಉದಯ ನಾಯ್ಕರು ನಿರ್ವಹಿಸಿ, ವಂದಿಸಿದರು. ಅಲ್ಲದೆ ಸ್ಪರ್ಧೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಕುಮಟಾ ಘಟಕದ ಖಜಾಂಚಿ ರಾಘವೇಂದ್ರ ದಿವಾಕರ, ಉಪಾಧ್ಯಕ್ಷರಾದ ರವಿ ಗಾವಡಿ, ಪತ್ರಕರ್ತರಾದ ಯೋಗೇಶ ಮಡಿವಾಳ, ನಟರಾಜ್ ಗದ್ದೆಮನೆ, ಸದಸ್ಯರಾದ ವಿನೋದ ಹರಿಕಂತ್ರ, ಶಾಲಾ ಶಿಕ್ಷಕರು, ಸಿಬ್ಬಂದಿ ಸಹಕರಿಸಿದ್ದರು.