ಗೋಕರ್ಣ: ಇಂದು ಹಣ, ಸೇಡು, ಕೀರ್ತಿ, ಲೋಭಕ್ಕಾಗಿ ಯುದ್ಧಗಳು ನಡೆಯುತ್ತಿವೆ; ಆದರೆ ವಾಸ್ತವವಾಗಿ ಧರ್ಮಕ್ಕಾಗಿ ಯುದ್ಧ ನಡೆಯಬೇಕು. ಇಂಥ ಯುದ್ಧಗಳು ಯಾಗ ಹಾಗೂ ಯೋಗಕ್ಕೆ ಸಮ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.
ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಆವರಣದಲ್ಲಿ ಸಂಘಟನಾ ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡಿರುವ ಪರಮಪೂಜ್ಯರು ಶನಿವಾರ ಕ್ಷಾತ್ರಧರ್ಮದ ಬಗ್ಗೆ ಪ್ರವಚನ ಅನುಗ್ರಹಿಸಿದರು.


“ಭಾರತದ ಯುದ್ಧ ಪರಂಪರೆಯನ್ನು ನೋಡಿದರೆ ಧರ್ಮಯುದ್ಧಕ್ಕೆ ಮಹತ್ವ ನೀಡಿದ್ದನ್ನು ಕಾಣುತ್ತೇವೆ. ಇಂದಿನಂತೆ ವಂಚನೆ ಅಥವಾ ಕಪಟ ಯುದ್ಧ ವಿಧಾನಗಳು ನಮ್ಮಲ್ಲಿಲ್ಲ. ಇಂಥ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡುವ ಪರಂಪರೆ ನಮ್ಮದು. ಶಿವಾಜಿ, ರಾಣಾಪ್ರತಾಪ ಅವರಂಥ ನಿದರ್ಶನಗಳು ಆಧುನಿಕ ಯುಗದಲ್ಲೂ ನಮಗೆ ಸಿಗುತ್ತವೆ. ಆದರೆ ಇಂದು ಇಂಥ ಭಾವ ಮರೆಯಾಗುತ್ತಿದ್ದು, ಇದು ಪುನರುಜ್ಜೀವನಗೊಳ್ಳಬೇಕು” ಎಂದು ಆಶಿಸಿದರು.
ದೇಶದ ಋಣ ನಮ್ಮ ಮೇಲಿದೆ. ನಾವು ನಡೆಯುವ ನೆಲ, ಉಸಿರಡುವ ಗಾಳಿ, ಕುಡಿಯುವ ನೀರು, ಉಡುವ ಬಟ್ಟೆ ಎಲ್ಲವೂ ದೇಶದ ಕೊಡುಗೆ. ನಮ್ಮ ಜೀವನದ ಬಹುತೇಕ ಎಲ್ಲ ಅಂಶಗಳನ್ನು ಸಮಾಜದಿಂದಲೇ ಪಡೆದಿರುತ್ತೇವೆ. ಆದ್ದರಿಂದ ದೇಶಕ್ಕೆ ಅಗತ್ಯ ಇದ್ದಾಗ ಸರ್ವಸ್ವವನ್ನೂ ತ್ಯಾಗ ಮಾಡಲು ಸಜ್ಜಾಗಬೇಕು.

RELATED ARTICLES  ಆಝಾದ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯರೇ ಅಲ್ಲಾ. ಅಂಗೈ ಹುಣ್ಣಿಗೆ ಕನ್ನಡಿ ಏಕೆ?  ವಕ್ಸ ಬೋರ್ಡ ಬಿ.ಜೆ.ಪಿ. ಕೊಡುಗೆ ಜಗದೀಪ :


ದೇಶಕ್ಕಾಗಿ ಜೀವ- ಜೀವನ ಎರಡನ್ನೂ ಮುಡಿಪಾಗಿಟ್ಟ ವೀರಪರಂಪರೆ ನಮ್ಮದು. ದೇಶಕ್ಕಾಗಿ ಪ್ರಾಣತ್ಯಾಗ ಮಾಡುವುದು ಸರ್ವಶ್ರೇಷ್ಠ. ದೇಶಕ್ಕೆ ಆಪತ್ತು ಬಂದಾಗ ನಮ್ಮನ್ನು ಕಾಪಾಡುವುದು ಕ್ಷಾತ್ರಧರ್ಮ. ದೇಶಕ್ಕೆ ಆಪತ್ತು ಬಂದಾಗ ಜೀವದ ಮೇಲಿನ ಹಂಗು ತೊರೆದು ಎಲ್ಲವನ್ನೂ ದೇಶಕ್ಕೆ ಸಮರ್ಪಣೆ ಮಾಡುವುದು ಕ್ಷಾತ್ರ ಧರ್ಮದ ವೈಶಿಷ್ಟ್ಯ. ಹಿರಿದಾದ್ದನ್ನು ರಕ್ಷಿಸಲು ಕಿರಿದಾದ್ದನ್ನು ದಾನ ಮಾಡುವ, ರಾಷ್ಟ್ರರಕ್ಷಣೆಗಾಗಿ ಆತ್ಮಾರ್ಪಣೆಗೂ ಹಿಂದೆ ಮುಂದೆ ನೋಡುವುದಿಲ್ಲ ಎಂದು ಬಣ್ಣಿಸಿದರು.
ಸಮರ ಕಲೆಯ ಕಲಿಕೆಯೂ ಒಂದು ತಪಸ್ಸು. ಅದಕ್ಕೆ ನಿರಂತರ ಕಠಿಣ ಶ್ರಮ ಬೇಕಾಗುತ್ತದೆ. ಯುದ್ಧದಲ್ಲಿ ಗೆದ್ದರೆ ಇಲ್ಲಿ ಶ್ರೇಯಸ್ಸು. ವೀರ ಮರಣವನ್ನಪ್ಪಿದರೆ ಅವರಿಗೆ ಮೋಕ್ಷ. ಆದ್ದರಿಂದ ಯೋಗಿ ಹಾಗೂ ಯೋಧನಿಗೆ ಹೆಚ್ಚಿನ ಭಿನ್ನತೆ ಇಲ್ಲ. ಧರ್ಮ, ಗುರು ಮತ್ತು ದೇಶಕ್ಕಾಗಿ ಮಾಡುವ ತ್ಯಾಗ ಸರ್ವಶ್ರೇಷ್ಠ ಎಂದು ಹೇಳಿದರು.

RELATED ARTICLES  “ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ-10” ಕಾರ್ಯಕ್ರಮದ ವಿವರ ಇಲ್ಲಿದೆ.


ಉತ್ತಮ ಶೈಕ್ಷಣಿಕ ಸಾಧನೆ ಮಾಡಿದ ಪಿ.ದೀಪಶ್ರೀ ಹಾಗೂ ಸುಷ್ಮಾ ಜಗದೀಶ್ ಭಟ್ ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಸ್ವಾಮೀಜಿಯುವರು ಆಶೀರ್ವದಿಸಿದರು. ಶಿರಸಿ- ಸಿದ್ದಾಪುರ ಶಾಸಕ ಭೀಮಣ್ಣ ನಾಯಕ ಶನಿವಾರ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಹವ್ಯಕ ಮಹಾಮಂಡಲದ ನಿಕಟಪೂರ್ವ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ವಿವಿವಿ ಪರಂಪರಾ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮ, ಆಡಳಿತಾಧಿಕಾರಿ ಪ್ರಸನ್ನ ಕುಮಾರ್ ಟಿ.ಜಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು ಮತ್ತಿತರರು ಉಪಸ್ಥಿತರಿದ್ದರು.