ಗೋಕರ್ಣ: ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರಿಗೆ ಇತ್ತೀಚೆಗೆ ಹಾಲಕ್ಕಿ ಸಮಾಜದ ವತಿಯಿಂದ ಪಾದಪೂಜೆ ನೆರವೇರಿಸಲಾಯಿತು.
ಹಾಲಕ್ಕಿ ಸಮಾಜ ಶ್ರೀಪೀಠಕ್ಕೆ ಪರಂಪರಾಗತ ಶಿಷ್ಯವರ್ಗಗಳಲ್ಲೊಂದು. ಅನಾದಿ ಕಾಲದಿಂದಲೂ ಶ್ರೀಮಠದ, ಪೀಠದ ಸೇವೆ ಮಾಡಿಕೊಂಡು ಬಂದಿದೆ. ಸಮಾಜದ ಸರ್ವತೋಮುಖ ಏಳಿಗೆಗೆ ಶ್ರೀಮಠ ಸದಾ ಬೆಂಬಲವಾಗಿ ನಿಲ್ಲುತ್ತದೆ ಎಂದು ಸ್ವಾಮೀಜಿ ಭರವಸೆ ನೀಡಿದರು. ಸಮಾಜದ ವಿದ್ಯಾರ್ಥಿಗಳಿಗಾಗಿಯೇ ಪ್ರತ್ಯೇಕ ಗುರುಕುಲ ಸ್ಥಾಪನೆಗೆ ಶ್ರೀಮಠ ಬದ್ಧವಾಗಿದ್ದು, ಸಮಾಜದ ಮುಖಂಡರು ಜತೆ ಸೇರಿ ಇದರ ರೂಪುರೇಷೆಗಳನ್ನು ಸಿದ್ಧಪಡಿಸಬೇಕು ಎಂದು ರಾಘವೇಶ್ವರ ಶ್ರೀಗಳು ಸೂಚಿಸಿದರು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಾಲಕ್ಕಿ ಸಮಾಜದ ಮುಖಂಡರಾದ ಗೋವಿಂದ ಗೌಡ ಗೋಕರ್ಣ, ಮಂಜುನಾಥ ಗೌಡ ಕೆಕ್ಕಾರು, ಹನುಮಂತ ಬೊಮ್ಮು ಗೌಡ ಬೆಳಂಬಾಲ, ಅಂಕೋಲ ಮತ್ತು ಮಾಂಕಾಳು ಗೌಡ ನುಶಿಕೋಟೆ ಅವರನ್ನು ಪರಮಪೂಜ್ಯರು ಸನ್ಮಾನಿಸಿದರು.
ಸಮಾಜದ ಮುಖಂಡರಾದ ನಿವೃತ್ತ ಶಿಕ್ಷಕ ಬಿ.ಎಸ್.ಗೌಡರು, ರಮೇಶಗೌಡರು ಕಾರವಾರದ ಗುರುಗೌಡರು, ಅಘನಾಶಿನಿ ಎಸ್.ಟಿ.ಗೌಡರು, ಹುಲ್ಸೇಕೇರಿ ಆನಂದಗೌಡರು, ಪ್ರಕಾಶಗೌಡರು ಬಿಜ್ನೂರು ಸಂಕರಗೌಡರು ಹೆಗ್ರೆ ಮತ್ತಿತರರು ನೇತೃತ್ವ ವಹಿಸಿದ್ದರು. ಹಾಲಕ್ಕಿ ಸಮಾಜದ 200ಕ್ಕೂ ಹೆಚ್ಚು ಮಂದಿ ಮಹನೀಯರು ಮತ್ತು ಮಾತೆಯರು ಪಾದಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.