ಗೋಕರ್ಣ: ದೇವರನ್ನು ಒಲಿಸಿಕೊಳ್ಳುವುದು ನಿಜಕ್ಕೂ ಕಷ್ಟಸಾಧ್ಯ. ಅದಕ್ಕೆ ಸತತ ಪ್ರಯತ್ನ, ಪರಿಶ್ರಮ, ತಪಸ್ಸು ಬೇಕು. ಆದರೆ ಗುರುಸೇವೆ ಎಂಬ ಅನಾಯಾಸದ ಮಾರ್ಗವನ್ನು ಸದುಪಯೋಗ ಪಡಿಸಿಕೊಂಡು ಜೀವನ ಸಾರ್ಥಕಪಡಿಸಿಕೊಳ್ಳಿ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು. ಅಶೋಕೆಯ ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಪರಮಪೂಜ್ಯರು ಮಂಗಳವಾರ ಇಟಗಿ, ದೊಡ್ಮನೆ, ಚಪ್ಪರಮನೆ ವಲಯಗಳಿಂದ ಆಗಮಿಸಿದ ಶಿಷ್ಯಭಕ್ತರ ಭಿಕ್ಷಾಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.


ದೇವರಲ್ಲಿ ಭಕ್ತಿ, ಗುರುಪೀಠದಲ್ಲಿ ನಿಷ್ಠೆ, ಕಾಯಕದಲ್ಲಿ ಶ್ರದ್ಧೆ ಮತ್ತು ಸಾಮಾಜಿಕ ಕಳಕಳಿಯೊಂದಿಗೆ ಗುರುಪೀಠಕ್ಕೆ, ದೇವರಿಗೆ ಪ್ರೀತಿಯಾಗುವ ರೀತಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವುದು ಎಲ್ಲ ಶಿಷ್ಯಭಕ್ತರ ಜವಾಬ್ದಾರಿ ಎಂದು ವಿಶ್ಲೇಷಿಸಿದರು.
ನಿಮ್ಮ ನಿಮ್ಮ ಕಾರ್ಯಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ಗೌರವಿಸಿ; ಸಂಕಷ್ಟದಲ್ಲಿರುವವರು ನೆರವಿಗೆ ಯಾಚಿಸುವ ಮುನ್ನವೇ ಅವರ ಅವರ ಕಷ್ಟಗಳಿಗೆ ಸ್ಪಂದಿಸಿ, ಸಮಾಜ ಸಂಚಾರ ಮಾಡಿ ಮನೆ ಮನೆಗೆ ಶ್ರೀಮಠದ ಸಮಾಜಮುಖಿ ಕಾರ್ಯಗಳನ್ನು ತಲುಪಿಸುವ ಹೊಣೆ ಕಾರ್ಯಕರ್ತರ ಮೇಲಿದೆ. ಶ್ರೀಪೀಠದ ಮೇಲೆ ನಿಷ್ಠೆ ಇರುವ ಪ್ರತಿಯೊಬ್ಬರೂ ಕಾರ್ಯಕರ್ತರಾಗಿ ತಮ್ಮಿಂದಾಗುವ ಸೇವೆ ಮಾಡಬೇಕು ಎಂದು ಸೂಚಿಸಿದರು.

RELATED ARTICLES  ಟಿಪ್ಪು ಜಯಂತಿಗೆ ವಿರೋಧ: ಕುಮಟಾದಲ್ಲಿ ಪ್ರತಿಭಟನಾ ಮೆರವಣಿಗೆ


ಸ್ವತಃ ನಾವೇ ಸಂಸ್ಕಾರವಂತರಲ್ಲದ ಕಾರಣ ನಮ್ಮ ಮುಂದಿನ ಪೀಳಿಗೆಗೆ ಸಂಸ್ಕಾರ ಬೋಧಿಸುವ ಸ್ಥಿತಿಯಲ್ಲಿ ನಾವಿಲ್ಲ. ಇಂಥ ಪರಿಸ್ಥಿತಿಯಲ್ಲಿ ಸನಾತನ ಮತ್ತು ಆಧುನಿಕ ವಿದ್ಯೆಗಳು ಮೇಳೈಸಿರುವ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಇಡೀ ದೇಶದ ಆಶಾಕಿರಣ. ಇದರ ಧ್ಯೇಯೋದ್ದೇಶಗಳ ಬಗ್ಗೆ ಸಮಸ್ತ ಸಮಾಜಕ್ಕೆ ಮಾಹಿತಿ ತಲುಪಬೇಕು. ಇಡೀ ಸಮಾಜ ಇದರ ಪ್ರಯೋಜನ ಪಡೆಯುವಂತಾಗಬೇಕು ಎಂದು ಆಶಿಸಿದರು.


ಈ ವರ್ಷದ ವ್ಯಾಸಪೂಜೆಯಂದು ಉದ್ಘೋಷಣೆಯಾಗಿರುವ ಸ್ವರ್ಣಪಾದುಕೆ ಸೇವೆ ಮುಂದಿನ ದಿನಗಳಲ್ಲಿ ಇಡೀ ವಿವಿವಿ ನಿರ್ವಹಣೆಯ ಆಧಾರಸ್ತಂಭವಾಗಲಿದೆ. ಸ್ವರ್ಣಪಾದುಕೆ ಮೂಲಕ ವಿವಿವಿ ಪರಿಕಲ್ಪನೆ ಎಲ್ಲ ಶಿಷ್ಯಭಕ್ತರ ಮನೆಗಳನ್ನು ತಲುಪಲಿದೆ. ಪ್ರತಿಯೊಬ್ಬರೂ ಈ ಸೇವಾ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಇದರಿಂದ ನಮ್ಮ ಮನೆತನ ಉದ್ಧಾರವಾಗುವುದು ಮಾತ್ರವಲ್ಲದೇ, ವಿವಿವಿಯಂಥ ಮಹಾನ್ ಸತ್ಕಾರ್ಯಕ್ಕೆ ಅನಾಯಾಸವಾಗಿ ಕಾಣಿಕೆಯನ್ನೂ ಸಲ್ಲಿಸಿದಂತಾಗುತ್ತದೆ ಎಂದು ವಿವರಿಸಿದರು.
ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಸಿದ್ದಾಪುರ ಮಂಡಲ ಅಧ್ಯಕ್ಷ ಮಹೇಶ್ ಚಟ್ನಳ್ಳಿ, ಕಾರ್ಯದರ್ಶಿ ಚಂದನ್ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.
ಚಪ್ಪರಮನೆ ವಲಯ ಅಧ್ಯಕ್ಷರಾಗಿ ವೀರಭದ್ರ ರಾಮಯ್ಯ ಹೆಗಡೆ, ದೊಡ್ಮನೆ ವಲಯ ಅಧ್ಯಕ್ಷರಾಹಿ ಅರವಿಂದ ಶರ್ಮಾ ಕಲ್ಲಾಳ, ಇಟಗಿ ವಲಯ ಅಧ್ಯಕ್ಷರಾಗಿ ನಾರಾಯಣ ಜಿ ಹೆಗಡೆ ಮತ್ತು ಮೂರೂ ವಲಯಗಳ ಪದಾಧಿಕಾರಿಗಳು ಶ್ರೀಗಳಿಂದ ನಿಯುಕ್ತಿಪತ್ರ ಮತ್ತು ಅನುಗ್ರಹ ಮಂತ್ರಾಕ್ಷತೆ ಪಡೆದರು.

RELATED ARTICLES  ಸಾಲದ ಭಾರಕ್ಕೆ ಮಹಿಳೆ ಆತ್ಮಹತ್ಯೆ