ಕುಮಟಾ : ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಬಗ್ಗೆ ಮಕ್ಕಳಿಗೆ ಶಾಲಾ ಹಂತದಲ್ಲೇ ಪ್ರಾಯೋಗಿಕವಾಗಿ ಜ್ಞಾನ ನೀಡಿದಾಗ ಮುಂದೆ ಆಡಳಿತಾತ್ಮಕವಾಗಿ, ಸ್ಪರ್ಧಾತ್ಮಕವಾಗಿ ಅನೇಕ ಪರೀಕ್ಷೆ ಎದುರಿಸಲು ಮತ್ತು ಉತ್ತಮ ಆಡಳಿತ ನೀಡಲು ಸಹಕಾರಿಯಾಗುತ್ತದೆ ಎಂದು ಆದಿಚುಂಚನಗಿರಿ ಮಠದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹೇಳಿದರು. ಅವರು ತಾಲೂಕಿನ ದೀವಗಿಯ ಹಾಲಕ್ಕಿ ಒಕ್ಕಲಿಗರ ಸಭಾಭವನದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಬಿಜಿಎಸ್ ಸೆಂಟ್ರಲ್ ಸ್ಕೂಲ್ ನ ಶಾಲಾ ಸಂಸತ್ ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳಿಗೆ ಪ್ರಮಾಣ ವಚನ ಬೋಧನೆ ಹಾಗೂ ತಾಲೂಕಾ ಮಟ್ಟದ ಅಂತರ್ ಪ್ರೌಢಶಾಲಾ ಚದುರಂಗ ಮತ್ತು ಜಾನಪದ ಗೀತೆ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಬಿಜಿಎಸ್ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿಗಳಿಗೆ ಚುನಾವಣೆ ನಡೆಸಿ, ಆ ಮೂಲಕ ವಿದ್ಯಾರ್ಥಿ ಪ್ರತಿನಿಧಿಗಳನ್ನು ಆಯ್ಕೆ ಮಾಡಿ, ಇಂದು ಶಾಲಾ ಸಂಸತ್ ಉದ್ಘಾಟಿಸುತ್ತಿರುವುದು ಶ್ಲಾಘನೀಯ, ಇದರಿಂದ ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಬಗ್ಗೆ ಪ್ರಾಯೋಗಿಕ ಅರಿವು ಮೂಡುತ್ತದೆ. ನಮ್ಮ ನೆರೆ ದೇಶ ಪಾಕಿಸ್ತಾನದಲ್ಲಿ ಇಂದು ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿರುವುದನ್ನು ನಾವಿಂದು ದಿನಪತ್ರಿಕೆಗಳಲ್ಲಿ ಓದುತ್ತಿದ್ದೇವೆ, ಕಾರಣ ಅಲ್ಲಿ ಪ್ರಜಾಪ್ರಭುತ್ವಕ್ಕಿಂತ ಮಿಲಿಟರಿ ಆಡಳಿತಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವುದು ತುಂಬಾ ಕಳವಳಕಾರಿ. ಆದರೆ ನಮ್ಮ ದೇಶದಲ್ಲಿ ಸ್ವಾತಂತ್ರ್ಯದ ನಂತರ ಪ್ರಜಾಪ್ರಭುತ್ವದ ಮೂಲಕ ದೇಶದಲ್ಲಿ ಪ್ರಜೆಗಳೇ ಪ್ರಭುಗಳು, ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಮೈಗೂಡಿಸಿಕೊಳ್ಳುವ ಮೂಲಕ ಮುಂದೆ ಒಳ್ಳೆಯ ಪ್ರಜೆಗಳಾಗಿ ಎಂದು ಅಶೀರ್ವಚನ ನೀಡಿದರು.
ಆಡಳಿತಾಧಿಕಾರಿ ಜಿ. ಮಂಜುನಾಥರವರು ವಿದ್ಯಾರ್ಥಿಗಳ ಶಾಲಾ ವಿಭಾಗದ, ಕ್ರೀಡಾ ವಿಭಾಗದ, ಶಿಸ್ತುಪಾಲನಾ ವಿಭಾಗದ ಹಾಗೂ ಸಾಂಸ್ಕೃತಿಕ ವಿಭಾಗದ ನಾಯಕ /ನಾಯಕಿ ಪ್ರತಿನಿಧಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗದ ಶ್ರೀ ಆದಿಚುಂಚನಗಿರಿ ಇಂಡಿಪೆಂಡೆಂಟ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಗುರುರಾಜ್, ಭದ್ರಾವತಿಯ ಆಡಳಿತಾಧಿಕಾರಿ ಜಗದೀಶ್, ಶಿವಮೊಗ್ಗದ ವ್ಯವಸ್ಥಾಪಕರಾದ ಅಮೀಶ್ , ಆಡಳಿತ ಮಂಡಳಿ ಸದಸ್ಯರಾದ ಎಂ. ಟಿ. ಗೌಡ, ಬಿಜಿಎಸ್ ಸೆಂಟ್ರಲ್ ಸ್ಕೂಲಿನ ಪ್ರಾಂಶುಪಾಲೆ ಲೀನಾ ಎಂ ಗೊನೇಹಳ್ಳಿ, ಶ್ರೀಧರ ಗೌಡ ಉಪ್ಪಿನ ಗಣಪತಿ, ಮಜುನಾಥ ಪಟಗಾರ, ಭಾಸ್ಕರ ಪಟಗಾರ, ಬೊಮ್ಮಯ್ಯ ಗೌಡ, ಹಿರಿಯ ಶಿಕ್ಷಕ ಎಂ. ಜಿ. ಹಿರೇಕುಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕಾ ಮಟ್ಟದ ಅಂತರ್ ಪ್ರೌಢಶಾಲಾ ಚದುರಂಗ ಸ್ಪರ್ಧೆಯಲ್ಲಿ ಸಿಂಚನಾ ಜಿ. ಭಟ್ (ಸಿ.ವಿ.ಎಸ್.ಕೆ ಪ್ರೌಢಶಾಲೆ) ಪ್ರಥಮ, ಪ್ರಣೀತ್ ವಿ. ಶೆಟ್ಟಿ (ಸಿ.ವಿ.ಎಸ್.ಕೆ ಪ್ರೌಢಶಾಲೆ) ದ್ವಿತೀಯ, ಕೌಶಿಕ್ ಜಿ. ಹೆಗಡೆ (ಬಿಜಿಎಸ್ ಸೆಂಟ್ರಲ್ ಸ್ಕೂಲ್ ಮಿರ್ಜಾನ್) ತೃತೀಯ ಸ್ಥಾನ ಹಾಗೂ ಜಾನಪದ ಗೀತೆ ಸ್ಪರ್ಧೆಯಲ್ಲಿ ಲಚಿತಾ ಗಾವಡಿ (ಬಿಜಿಎಸ್ ಸೆಂಟ್ರಲ್ ಸ್ಕೂಲ್) ಪ್ರಥಮ, ಶ್ರೇಯಾ ಜಿ. ಹೆಬ್ಬಾರ್ (ಸಿ.ವಿ.ಎಸ್.ಕೆ ಪ್ರೌಢಶಾಲೆ) ದ್ವಿತೀಯ, ಜ್ಯೋತಿ ನಾಯ್ಕ (ಜನತಾ ವಿದ್ಯಾಲಯ ಮಿರ್ಜಾನ್ ಕೋಡ್ಕಣಿ) ಮತ್ತು ಶಿರೀನ್ ತಾಜ್ (ಐಡಿಯಲ್ ಆಂಗ್ಲ ಮಾಧ್ಯಮ ಶಾಲೆ ಕುಮಟಾ) ತೃತೀಯ ಸ್ಥಾನ ಪಡೆದಿದ್ದು, ಎಲ್ಲಾ ವಿಜೇತರಿಗೆ ಬಹುಮಾನ ವಿತರಿಸಿ ಸನ್ಮಾನಿಸಲಾಯಿತು. ಸ್ಪರ್ಧೆಗಳಲ್ಲಿ ಭಾಗವಹಿಸಿದ ಕುಮಟಾ ತಾಲೂಕಿನ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ನೀಡಲಾಯಿತು.
ಇದೇ ಸಮಾರಂಭದಲ್ಲಿ ಪೂಜ್ಯರು ವಿದ್ಯಾರ್ಥಿಗಳು ರಚಿಸಿದ ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳ ಬರಹಗಳನ್ನೊಳಗೊಂಡ “ಸ್ಪೆಕ್ಟ್ರಂ” ಸಂಚಿಕೆ ಬಿಡುಗಡೆ ಮಾಡಿದರು. ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಪಾಲಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.