ಕುಮಟಾ : ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣ ಕೇವಲ ಅಂಕಗಳಿಕೆ, ಉದ್ಯೋಗಗಳಿಕೆಗೆ ಮಾತ್ರ ಸೀಮಿತವಾಗದೆ ನಾವು ಬೆಳೆದು ಬಂದ ಋಣ ತೀರಿಸಲು ಸೇವಾ ಮನೋಭಾವದಿಂದ ನಮ್ಮ ಕೈಲಾದ ಮಟ್ಟಿಗೆ ಬಡವರ, ದೀನದಲಿತರ, ಅಸಹಾಯಕರ ಏಳಿಗೆಗೆ ಶ್ರಮಿಸಬೇಕು ಆಗ ಮಾತ್ರ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ ಎಂದು ಭಾರತಿ ಸಂಸ್ಥೆ ಕುಮಟಾದ ಅಧ್ಯಕ್ಷೆ ವಿನುತಾ ನಾಯಕ ಅಭಿಪ್ರಾಯ ಪಟ್ಟರು. ಕುಮಟಾ ತಾಲೂಕಿನ ಹಿರೇಗುತ್ತಿ ದೇವರಬೋಳೆ ಎಸ್.ಎನ್.ಎಸ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತಿ ಸಂಸ್ಥೆ ಕುಮುಟಾ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಐಡಿ ಕಾರ್ಡ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

RELATED ARTICLES  ವೈಮನಸ್ಸನ್ನು ಬಿಟ್ಟು ಒಂದಾಗಿ ದುಡಿದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ: ಶಾಸಕಿ ರೂಪಾಲಿ ನಾಯ್ಕ

ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ, ಆರ್ಥಿಕವಾಗಿ ಸದೃಢವಾದ ವ್ಯಕ್ತಿಗಳು ಸಮಾಜದ ಬಗ್ಗೆ, ಕುಂದು ಕೊರತೆಗಳ ಬಗ್ಗೆ ಚಿಂತಿಸಬೇಕು ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸರ್ಕಾರದಿಂದ ನಿರೀಕ್ಷಿಸದೆ ಶ್ರೀಮಂತರು, ವಿವಿಧ ಸಂಘ ಸಂಸ್ಥೆಗಳು  ಕಾರ್ಯೋನ್ಮುಖರಾಗಿ ಸಮಾಜದ ಏಳಿಗೆಗೆ ಶ್ರಮಿಸಬೇಕು ಆಗ ಮಾತ್ರ ಸ್ವಸ್ಥ ಸದೃಢ ಸಮಾಜದ ನಿರ್ಮಾಣ ಸಾಧ್ಯ. ನಮ್ಮ ಭಾರತಿ ಸಂಸ್ಥೆಯು ತಾಲೂಕಿನ ವಿವಿದೆಡೆಗೆ ಶಿಕ್ಷಣ, ಆರೋಗ್ಯ, ಕ್ರೀಡೆ ಇತ್ಯಾದಿಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು ನಮ್ಮ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಪ್ರೋತ್ಸಾಹಿಸಿ ಸಲಹೆ ಸಹಕಾರ ನೀಡಿ ಇನ್ನಷ್ಟು ಹೆಚ್ಚಿನ ಕಾರ್ಯಕ್ರಮಗಳನ್ನ ನಡೆಸಲು ಉತ್ತೇಜಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ ಮುಖ್ಯಾಧ್ಯಾಪಕಿ ದೇವಾಂಗನೆ ನಾಯಕ  ಮಾತನಾಡಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರದ ಸೌಲಭ್ಯವನ್ನೇ ನೆಚ್ಚಿಕೊಂಡಿದ್ದರೆ ಸಾಧ್ಯವಿಲ್ಲ. ಭಾರತೀ ಸಂಸ್ಥೆಯಂತಹ ಸಂಘ ಸಂಸ್ಥೆಗಳು ಕೈಜೋಡಿಸಿದರೆ ಪ್ರಗತಿ ಸಾಧ್ಯ. ಭಾರತಿ ಸಂಸ್ಥೆಯ  ಈ ಕಾರ್ಯ ನಿಜಕ್ಕೂ ಶ್ಲಾಘನಿಯ ಎಂದು ಅಭಿಪ್ರಾಯ ಪಟ್ಟರು.

RELATED ARTICLES  ಚೆಸ್ ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ತನುಶ್ರೀ.

ಎಸ್. ಡಿ.ಎಂ.ಸಿ ಅಧ್ಯಕ್ಷ ಮಾರುತಿ ಪಟಗಾರ, ಹಳೆ ವಿದ್ಯಾರ್ಥಿಸಂಘದ ಪದಾಧಿಕಾರಿಗಳು,  ಪಾಲಕರು ಉಪಸ್ಥಿತರಿದ್ದರು. ನಂತರ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಐಡಿ ಕಾರ್ಡ್ ಗಳನ್ನು ವಿತರಿಸಲಾಯಿತು. ಶಿಕ್ಷಕ ವಿನಾಯಕ ಸ್ವಾಗತಿಸಿ ಪರಿಚಯಿಸಿದರು. ಶಿಕ್ಷಕಿ ಜೀವನ ನಾಯಕ ನಿರೂಪಿಸಿದರು. ಜಯಲಕ್ಷ್ಮಿ ನಾಯಕ ವಂದಿಸಿದರು. ಶಿಕ್ಷಕಿ ಉಷಾ ನಾಯಕ ಕಾರ್ಯಕ್ರಮವನ್ನು ನಿರ್ವಹಿಸಿದರು.