ಕುಮಟಾ : ಹವ್ಯಕ ಸೇವಾ ಪ್ರತಿಷ್ಠಾನ ಉತ್ತರಕನ್ನಡ ಹಾಗೂ ಹವ್ಯಕ ಸಮಾಜ ಸೇವಾ ಸಂಘ ಗುಡೇಅಂಗಡಿ ಅಶ್ರಯದಲ್ಲಿ ಯಕ್ಷ ಸಂಪದ ಸಂಸ್ಥಾಪಕರುಗಳಾದ ದಿ. ಕೆ. ಟಿ. ಭಟ್ಟ ಮತ್ತು ದಿ. ಎನ್. ಎಸ್. ಭಟ್ಟ ಇವರುಗಳ ಸಂಸ್ಮರಣೆ ಹಾಗೂ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಡೆದ “ಚಂದ್ರಹಾಸ ಚರಿತ್ರೆ” ಯಕ್ಷಗಾನ ಪ್ರದರ್ಶನ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.
ತಾಲೂಕಿನ ಹೊಲನಗದ್ದೆಯ ಹವ್ಯಕ ಸಭಾ ಭವನದಲ್ಲಿ ನಡೆದ ಈ ಯಕ್ಷಗಾನ ಪ್ರದರ್ಶನದಲ್ಲಿ ಸುಬ್ರಹ್ಮಣ್ಯ ಚಿಟ್ಟಾಣಿ, ವಿನಯ ಬೇರೊಳ್ಳಿ, ಕಾರ್ತಿಕ ಚಿಟ್ಟಾಣಿ, ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ದರ್ಶನ ಭಟ್, ಗುರುಪ್ರಸಾದ್ ಭಟ್ ಮತ್ತು ನಾಗೇಂದ್ರ ಮೂರೂರು ಇನ್ನಿತರ ಕಲಾವಿದರು ಯಕ್ಷಾಭಿನಯದ ಮೂಲಕ ಗಮನ ಸೆಳೆದರು.
ಹಿಮ್ಮೇಳದಲ್ಲಿ ಭಾಗವತರರಾಗಿ ಉಮೇಶ್ ಭಟ್ಟ ಬಾಡ ಹಾಗೂ ಸರ್ವೇಶ್ವರ ಹೆಗಡೆ , ಮದ್ದಳೆಯಲ್ಲಿ ಮಂಜುನಾಥ ಕಂಚಿಕೈ, ಚಂಡೆಯಲ್ಲಿ ಗಜಾನನ ಹೆಗಡೆ ಸಾಂತೂರು ಚಂಡೆವಾದಕರಾಗಿ ಪಾಲ್ಗೊಂಡರು.
ಯಕ್ಷಗಾನ ಪ್ರದರ್ಶನಕ್ಕೆ ಪೂರ್ವದಲ್ಲಿ ನಡೆದ ಸಂಸ್ಮರಣಾ ಕಾರ್ಯಕ್ರಮದಲ್ಲಿ ಹವ್ಯಕ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಜಿ ಭಟ್ಟ ಕಾರ್ಯಕ್ರಮದ ಕುರಿತಾಗಿ ವಿವರಿಸಿ, ನಂತರ ದೇಶದ ಕಲೆ ಸಂಸ್ಕೃತಿ ಉಳಿವಿಗೆ ನಾವು ಪ್ರಯತ್ನಿಸಬೇಕು. ನಮ್ಮ ಸಂಸ್ಕೃತಿಗಳ ಉಳಿವು ನಮ್ಮ ಕೈಲಿದೆ. ನಾವು ಮೈ ಮರೆತರೆ ಬೇರೆಯವರು ನಮ್ಮನ್ನು ಆಳುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಧಾನ ಕಾರ್ಯದರ್ಶಿ ಆರ್.ಎನ್ ಹೆಗಡೆ ಸಂಘಟನೆಯ ಬಗ್ಗೆ ತಿಳಿಸಿ, ಎಲ್ಲರ ಸಹಕಾರ ಕೋರಿದರು. ಆರ್. ಎಸ್ ಭಟ್ಟ ಕೋಟಿ ಹಾಗೂ ಯಕ್ಷಸಂಪದದ ಅಧ್ಯಕ್ಷರಾದ ಎನ್.ಆರ್ ಭಟ್ಟಕೆರೆ ದಿ. ಕೆ. ಟಿ. ಭಟ್ಟ ಮತ್ತು ದಿ. ಎನ್. ಎಸ್. ಭಟ್ಟ ಅವರ ಕುರಿತಾಗಿ ಸಂಸ್ಮರಣಾ ನುಡಿಗಳನ್ನು ಆಡಿದರು. ವಸಂತ ಭಟ್ಟ ವಂದಿಸಿದರು.