ಗೋಕರ್ಣ: ದೇಶಭಂಡಾರಿ ಸಮಾಜ ಪ್ರಾಮಾಣಿಕತೆಗೆ ಹೆಸರಾಗಿದ್ದು, ಸಮಾಜದ ಮೇಳೆ ಶ್ರೀಪೀಠದ ಅನುಗ್ರಹ ಸದಾ ಇರುತ್ತದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಶ್ವಾಮೀಜಿ ಅಭಯ ನೀಡಿದರು. ಶ್ರೀಗಳ ಚಾತುರ್ಮಾಸ್ಯ ಸಂದರ್ಭದಲ್ಲಿ ಸಮಾಜದ ವತಿಯಿಂದ ನಡೆದ ಪಾದಪೂಜನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ದೇಶಭಂಡಾರಿ ಸಮಾಜ ಶೈಕ್ಷಣಿಕವಾಗಿ ಮುಂದೆ ಬರಬೇಕು. ಶಿಕ್ಷಣ ಉನ್ನತಿಯ ಸಾಧನ. ಸಮಾಜದಲ್ಲಿ ಪ್ರತಿಯೊಬ್ಬರೂ ಸುಶಿಕ್ಷಿತರಾಗಿ ಮಾಡುವಲ್ಲಿ ಸಮಾಜದ ಪ್ರಮುಖರು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಸಲಹೆ ಮಾಡಿದರು.
ಸಮಾಜದ ಪರವಾಗಿ ಉತ್ತರಕನ್ನಡ ಭಂಡಾರಿ ಸಮಾಜೋನ್ನತಿ ಸಂಘದ ಉಪಾಧ್ಯಕ್ಷರಾದ ಚಿದಾನಂದ ಹರಿ ಭಂಡಾರಿ ದಂಪತಿ ಪಾದಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಕೇಶವ ಪೆಡ್ನೇಕರ್, ಉಪಾಧ್ಯಕ್ಷ ಸದಾನಂದ ಮಾಂಜ್ರೇಕರ್, ದೀಪಕ ವೈಂಗಣಕರ್, ಶ್ರೀಧರ ಆರ್ ಬೀರಕೋಡಿ, ಅರುಣ ಮಣಕೀಕರ್, ಪಾಂಡುರಂಗ ಭಂಡಾರಿ, ಸುಷ್ಮಾ ಗಾಂವ್ಕರ್ ಬಾಬು ಭಂಡಾರಿ, ಪ್ರಭಾಕರ ಮಣಕೀಕರ್ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.
ಮುಂದಿನ ದಿನಗಳಲ್ಲಿ ಶ್ರೀಸಂಸ್ಥಾನದ ಸಮ್ಮುಖದಲ್ಲಿ ಬೃಹತ್ ಸಮಾವೇಶ ನಡೆಸಿ, ಸರ್ಕಾರದ ಗಮನ ಸೆಳೆಯಲು ಸಮಾಜದ ಪ್ರಮುಖರು ಉದ್ದೇಶಿಸಿದ್ದು,ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರೀಗಳು ಮಾರ್ಗದರ್ಶನ ನೀಡಬೇಕು ಎಂದು ಸಮಾಜ ಪ್ರಮುಖರು ಮನವಿ ಮಾಡಿಕೊಂಡರು.
ಉತ್ತರ ಕನ್ನಡ ಜಿಲ್ಲಾ ದೇಶಭಂಡಾರಿ ಸಮಾಜದ ಅಧ್ಯಕ್ಷ ಕೇಶವ ದತ್ತಾ ಪೆಡ್ನೇಕರ್, ನಂದನಗದ್ದಾ ಸಮಾದೇವಿ ದೇವಸ್ಥಾನ/ಮಂಗಲ ಕಾರ್ಯಾಲಯ ಸಮಿತಿಯ ದೀಪಕ್ ದತ್ತಾ ವೈಗಣ್ಕರ, ಕುಮಟಾ ದೇಶಭಂಡಾರಿ ಸಮಾಜದ ಅಧ್ಯಕ್ಷ ಶ್ರೀಧರ ರಾಮ ಬೀರಕೋಡಿ, ಕೆಕ್ಕಾರು ಹಾರಗೋಳಿ ದೇವಸ್ಥಾನದ ಸದಸ್ಯ ಹೆಬ್ಬನಕೇರಿ ಮಂಜುನಾಥ ಗೋವಿಂದ ದೇಶಭಂಡಾರಿ, ಹೆಬ್ಬನಕೇರಿ, ಹಾರಗೋಳಿ ದೇವಸ್ಥಾನ ಸಮಿತಿ ಉಪಾಧ್ಯಕ್ಷ ಪಾಂಡುರಂಗ ಬಾಬು ದೇಶಭಂಡಾರಿ ಅವರು ಸಮಾಜಕ್ಕೆ ಸಲ್ಲಿಸಿದ ಗಣನೀಯ ಕೊಡುಗೆಯನ್ನು ಪರಿಗಣಿಸಿ ಶ್ರೀಮಠದ ವತಿಯಿಂದ ಸಾಧಕ ಸನ್ಮಾನ ನೀಡಿ ಗೌರವಿಸಲಾಯಿತು.