ಕುಮಟಾ: ‘ಶಾಲೆ ಮತ್ತು ಸಮುದಾಯದಲ್ಲಿ ಬದಲಾವಣೆ ತರುವ ಕಾರ್ಯಕ್ರಮಗಳನ್ನು ಅರಿಯುವ, ಹೊಸ ಸಂಸ್ಕೃತಿ ಅನ್ವೇಷಿಸಿ, ಅಂತರಾಷ್ಟ್ರೀಯ ತಿಳುವಳಿಕೆಯನ್ನು ಉತ್ತೇಜಿಸುವ, ಸಮುದಾಯದಲ್ಲಿ ನಾಯಕನಾಗಿ ಆನಂದಿಸುವ ಮತ್ತು ಪ್ರಪಂಚದಾದ್ಯಂತ ಹೊಸ ಸ್ನೇಹಿತರನ್ನು ಗಳಿಸುವ ಅತ್ಯುತ್ತಮ ಅವಕಾಶ ಇಂಟರ್ಯಾಕ್ಟ್ ಕ್ಲಬ್ ಕಲ್ಪಿಸುತ್ತದೆ’ ಎಂದು ಕುಮಟಾ ರೋಟರಿ ಸಂಸ್ಥೆಯ ಇಂರ‍್ಯಾಕ್ಟ್ ಕ್ಲಬ್ ಚೇರಮನ್ ರೋಟೇರಿಯನ್ ಶಿಲ್ಪಾ ಜಿನರಾಜ್ ಅಭಿಪ್ರಾಯ ಪಟ್ಟರು.
ಅವರು ಇಲ್ಲಿಯ ಊರಕೇರಿಯ ಶ್ರೀ ರಾಮನಾಥ ಪ್ರೌಢಶಾಲೆಯಲ್ಲಿ ರೋಟರಿ ಪ್ರಾಯೋಜಿತ ‘ರಾಮನಾಥ ಇಂಟರಾಕ್ಟ್’ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡುತ್ತಿದ್ದರು. ಕರ‍್ಯಕ್ರಮವನ್ನು ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಎಂ.ಎನ್. ನಾಯ್ಕ ಉದ್ಘಾಟಿಸುತ್ತಾ ತಾನೂ ತಮ್ಮ ಶಿಕ್ಷಕತ್ವದ ಸೇವಾವಧಿಯಲ್ಲಿ ಇಂಟರ್ಯಾಕ್ಟ್ ಕ್ಲಬ್ ಸಲಹೆಗಾರನಾಗಿದ್ದು ಅನೇಕ ಸೇವಾಕಾರ್ಯಗಳನ್ನು ನಡೆಸಿದ್ದನ್ನು ಸ್ಮರಿಸಿಕೊಂಡರು.
ಇಂಟರ್ಯಾಕ್ಟ್ ಕ್ಲಬ್ ಪದಾಧಿಕಾರಿಗಳಾಗಿ ಪದಗ್ರಹಣ ಸ್ವೀಕರಿಸಿದ ಮಾನ್ಯ ಎಸ್. ನಾಯ್ಕ, ವಿಶ್ವ ಪಿ. ನಾಯ್ಕ, ಗಗನ ಜಿ.ಹೆಗಡೆ, ಹರ್ಷಿತಾ ಎನ್. ಗೌಡ ಮಾತನಾಡಿದರು. ರೋಟರಿ ಕಾರ್ಯದರ್ಶಿ ರಾಮದಾಸ ಗುನಗಿ, ರೋಟರಿ ಹಾಗೂ ಅದರ ಅಂಗ ಸಂಸ್ಥೆಗಳ ಕಾರ್ಯವ್ಯಾಪ್ತಿಯ ಕುರಿತು ಪ್ರಸ್ಥಾಪಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಅಧ್ಯಕ್ಷ ಎನ್.ಆರ್.ಗಜು ಓದಿನ ಜೊತೆಜೊತೆಗೇ ಹದಿವಯಸ್ಸಿನಲ್ಲಿ ಸಾಂಘಿಕ ಪ್ರವೃತ್ತಿ, ಸೇವಾ ಮನೋಭಾವ ಮೇಳೈಸಿಕೊಳ್ಳಲು ಇದೊಂದು ಪಠ್ಯಪೂರಕ ಚಟುವಟಿಕೆಯೇ ಆಗಿದ್ದು, ನಿಯಮಿತ ಪಾಠಪ್ರವಚನಗಳಿಗೆಂದೂ ಅಡ್ಡಿಯಾಗದೆಂದು ಭರವಸೆ ನೀಡಿದರು.
ಪ್ರಾರಂಭದಲ್ಲಿ ಶಾಲಾ ಮುಖ್ಯಾಧ್ಯಾಪಕ ಎಸ್.ಜಿ.ಭಟ್ಟ ಅಂತರಾಷ್ಟ್ರೀಯ ಮಟ್ಟದ ಸಂಘಟನೆ ಗ್ರಾಮೀಣ ಭಾಗದಲ್ಲಿ ತನ್ನ ಚಟುವಟಿಕೆಗಳನ್ನು ವಿಸ್ತರಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಾ ಸ್ವಾಗತಿಸಿದರು. ಇಂಟರ್ಯಾಕ್ಟ್ ಸಲಹೆಗಾರ ಶಿಕ್ಷಕ ಆರ್.ಡಿ.ನಾಯ್ಕ ಕಾರ್ಯಕ್ರಮ ನಿರೂಪಿಸಿದರೆ, ಹಿರಿಯ ಶಿಕ್ಷಕಿ ಸುಜಾತಾ ಎಚ್. ನಾಯ್ಕ ವಂದಿಸಿದರು. ಶಿಕ್ಷಕರಾದ ಕೃಷ್ಣ ಮೊಗೇರ, ಮಹಾಂತೇಶ್ ತಳವಾರ, ಆರ್.ಎಂ.ನಾಯ್ಕ, ಪ್ರಶಿಕ್ಷಣಾರ್ಥಿಗಳು ಸಹಕರಿಸಿದರು.