ಗೋಕರ್ಣ: ಮಾತೃತ್ವ ಎನ್ನುವುದು ಮನುಕುಲದ ಉದ್ಧಾರಕ್ಕೆ ದೇವರು ನೀಡಿದ ದೊಡ್ಡ ವರ. ಮಾತೃತ್ವ ಬಗೆಗಿನ ತಿರಸ್ಕಾರದ ಭಾವನೆ ಅಪಾಯಕಾರಿ ಬೆಳವಣಿಗೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು. ಅಶೋಕೆಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ಶುಕ್ರವಾರ ನಡೆದ ಮಾತೃ ಸಮಾವೇಶದಲ್ಲಿ ಆಶೀರ್ವಚನ ನೀಡಿ, ಮಾತೃತ್ವ ಇಂದು ಅಪಾಯದಲ್ಲಿದೆ. ಆದರೆ ಇದು ಅಪೇಕ್ಷಿತವಾಗಬೇಕು. ಜನಸಂಪತ್ತು ಎಂದೂ ದೇಶಕ್ಕೆ ಹೊರೆಯಲ್ಲ. ಸಮಾಜ ಸಂಪೂರ್ಣವಾಗಿ ಕ್ಷಯಿಸುವ ಮುನ್ನ ನಾವು ಎಚ್ಚೆತ್ತುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. “ಮಾತೃತ್ವ ಎನ್ನುವುದು ಬಂಧನ ಎಂಬ ಭಾವನೆ ಯುವತಿಯರಲ್ಲಿ ಬೆಳೆಯುತ್ತಿದೆ. ವಿವಾಹದ ಬಳಿಕವೂ ಮಕ್ಕಳು ಬೇಡ ಎಂಬ ತೀರ್ಮಾನಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ವಾಸ್ತವವಾಗಿ ಮಗುವನ್ನು ಹೊತ್ತು ಹೆತ್ತು ಉತ್ತಮ ವ್ಯಕ್ತಿಯಾಗಿ ರೂಪಿಸುವ ಜವಾಬ್ದಾರಿಗಿಂತ ಹೆಚ್ಚಿನ ದೊಡ್ಡ ಉದ್ಯೋಗ ಯಾವುದೂ ಅಲ್ಲ. ಉದ್ಯೋಗದ ಭರದಲ್ಲಿ ಮನೆ, ಮಕ್ಕಳನ್ನು ಮರೆತರೆ ಮನೆ ಅನಾಥವಾಗುತ್ತದೆ. ಕುಟುಂಬ ವ್ಯವಸ್ಥೆ ಶಿಥಿಲವಾಗುತ್ತದೆ. ಮನೆ ಶೋಭೆ ಕಳೆದುಕೊಳ್ಳುತ್ತದೆ ಎಂದು ಎಚ್ಚರಿಸಿದರು.


ಇಡೀ ಸಮಾಜಕ್ಕೆ ಮಾರ್ಗದರ್ಶನದ ಹೊಣೆ ಹೊಂದಿರುವ ಸಮುದಾಯಗಳು ಇಂದು ಮಿತ ಸಂತತಿಯ ಸೂತ್ರಕ್ಕೆ ಕಟ್ಟುಬಿದ್ದ ಪರಿಣಾಮವಾಗಿ ಇಡೀ ಸಮಾಜ ಕ್ಷಯಿಸುತ್ತಿದೆ. ವಾಸ್ತವವಾಗಿ ಎಷ್ಟೇ ದೊಡ್ಡ ಜನಸಂಖ್ಯೆಯೂ ಭೂಮಿತಾಯಿಗೆ ಹೊರೆಯಲ್ಲ. ಪ್ರತಿಯೊಬ್ಬರ ಅಪೇಕ್ಷೆಯನ್ನು ಪೂರೈಸುವ ಶಕ್ತಿ ಭೂಮಾತೆಗಿದೆ. ಆದರೆ ನಮ್ಮ ಒಂದೇ ಒಂದು ದುರಾಸೆಯನ್ನೂ ಭೂಮಾತೆ ಸಹಿಸಲಾರಳು. ಆದ್ದರಿಂದ ಮಾತೆಯರೆಲ್ಲ ಸಂತತಿ ಮಂಗಲದತ್ತ ಚಿತ್ತ ಹರಿಸಬೇಕು ಎಂದು ಆಶಿಸಿದರು.
ಮಕ್ಕಳನ್ನು ಎಳವೆಯಲ್ಲೇ ವಸತಿ ಶಾಲೆಗಳಿಗೆ ಕಳುಹಿಸಿದಲ್ಲಿ, ಮಕ್ಕಳು ಬೆಳೆದು ದೊಡ್ಡವರಾಗುವ ವೇಳೆಗೆ ವೃದ್ಧಾಪ್ಯ ತಲುಪುವ ಪೋಷಕರನ್ನು ಅವರು ವೃದ್ಧಾಶ್ರಮಗಳಿಗೆ ಸೇರಿಸುವ ಪರಿಸ್ಥಿತಿ ಬರುತ್ತದೆ. ತಾಯಿಯ ಪ್ರೀತಿ, ಮಮತೆ ಸಿಕ್ಕಿದಾಗ ಮಾತ್ರ ಮಗು ಸಂಸ್ಕಾರದಿಂದ ಬೆಳೆಯುತ್ತದೆ. ಇಂಥ ಸಂಸ್ಕಾರವಂತ ಆರ್ಯ- ಆರ್ಯೆಯರ ಸಮಾಜ ನಿರ್ಮಾಣ ನಮ್ಮ ಗುರಿಯಾಗಬೇಕು ಎಂದು ಸಲಹೆ ಮಾಡಿದರು.

RELATED ARTICLES  ಹಿಂದೂ ಸಮಾಜಕ್ಕೆ ಧರ್ಮಶಿಕ್ಷಣವನ್ನು ನೀಡಿ, ಹಿಂದೂಗಳಲ್ಲಿ ಧರ್ಮಜಾಗೃತಿ ಮೂಡಿಸುವ ಹಿಂದೂ ಧರ್ಮ ಜಾಗೃತಿ ಸಭೆ.


ಸಮಾಜದ ಎಲ್ಲ ಮಕ್ಕಳೂ ಗುರುಕುಲ ವಾತಾವರಣದಲ್ಲಿ ಬೆಳೆದು ಸಂಸ್ಕಾರವಂತ ಜೀವನ ನಡೆಸುವಂತಾಗಬೇಕು. ಈ ಉದ್ದೇಶದಿಂದಲೇ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪರಿಕಲ್ಪನೆ ಹುಟ್ಟಿಕೊಂಡಿದ್ದು, ಮುಂದಿನ ದಿನಗಳಲ್ಲಿ ತಾಯಿ- ಮಗುವಿನ ಬಂಧವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮಾತೃಪೂಜನ- ಛಾತ್ರಭಿಕ್ಷೆ ಕಾರ್ಯಕ್ರಮ ನಡೆಯಲಿದೆ. ಪ್ರತಿ ಮಂಡಲಗಳಿಂದ ಆಗಮಿಸುವ ಮಾತೆಯರು ಇಲ್ಲಿನ ಮಕ್ಕಳಿಂದ ಪೂಜೆ ಪಡೆದು, ಮಕ್ಕಳಿಗೆ ಭಿಕ್ಷೆ ನೀಡಿ ಆಶೀರ್ವದಿಸುವ ಅಪೂರ್ವ ಕಾರ್ಯಕ್ರಮ ಪ್ರತಿ ತಿಂಗಳು ನಡೆಯಲಿದೆ ಎಂದು ಪ್ರಕಟಿಸಿದರು.


ನಾರಿಯರ ರಕ್ಷೆ ಸಮಾಜದ ಕರ್ತವ್ಯ. ಶಾಸ್ತ್ರಾರ್ಥವನ್ನು ತಪ್ಪಾಗಿ ಗ್ರಹಿಸಿಕೊಂಡು ಸನಾತನ ಧರ್ಮ ಮಾತೆಯರಿಗೆ ಸ್ವಾತಂತ್ರ್ಯ ನೀಡಿಲ್ಲ ಎಂಬ ತಪ್ಪುಭಾವನೆಯನ್ನು ವ್ಯವಸ್ಥಿತವಾಗಿ ಬಿತ್ತಲಾಗುತ್ತಿದೆ. ಆದರೆ ಬಾಲ್ಯದಲ್ಲಿ ತಂದೆಯಿಂದ, ಯೌವನದಲ್ಲಿ ಪತಿಯಿಂದ, ವೃದ್ಧಾಪ್ಯದಲ್ಲಿ ಮಕ್ಕಳಿಂದ ರಕ್ಷೆಯನ್ನು ಪಡೆಯುವ ಮೂಲಕ ನಮ್ಮ ಸಮಾಜದಲ್ಲಿ ಮಾತೆಯರು ಎಂದೂ ಅನಾಥೆಯಲ್ಲ. ಅವರ ರಕ್ಷಣೆ ಸಮಾಜದ, ಮಠಮಾನ್ಯಗಳ ಹೊಣೆ. ಆಪತ್ತು ಇರುವ ಮಾತೆಯರಿಗೆ ಅಭಯ ನೀಡಿದಾಗ ಮಾತ್ರ ಸಮಾಜದ ಉನ್ನತಿ ಸಾಧ್ಯ ಎಂದು ವಿಶ್ಲೇಷಿಸಿದರು.


ಗೃಹಿಣಿಯರು ಸಂತೋಷವಾಗಿದ್ದು, ಮನೆ ಮತ್ತು ಸಮಾಜವನ್ನು ಬೆಳಗುವಂತಾಗಬೇಕು. ಈ ನಿಟ್ಟಿನಲ್ಲಿ ಶ್ರೀಮಠದ ಮಾತೃತ್ವಮ್ ಸಂಘಟನೆ ಬಹುದೊಡ್ಡ ಕಾರ್ಯ ಮಾಡುತ್ತಿದೆ. ಗೋಮಾತೆಯ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಸುಮಾರು ಆರು ಕೋಟಿ ರೂಪಾಯಿ ಮೊತ್ತವನ್ನು ಗೋವಿಗಾಗಿ ಸಮಾಜದಿಂದ ಸಂಗ್ರಹಿಸಿದ ಮಾತೆಯರು ಮುಂದಿನ ದಿನಗಳಲ್ಲಿ ಗೋಸೇವೆಯ ಜತೆಗೆ ಸ್ವಾಸ್ಥ್ಯ ಮಂಗಲ, ಸಂತತಿ ಮಂಗಲದಂಥ ವಿಶಿಷ್ಟ ಯೋಜನೆಗಳ ಮೂಲಕ ಸಮಾಜಹಿತ ಕಾರ್ಯಗಳನ್ನು ಮಾತೆಯರು ಕೈಗೊಳ್ಳಲಿದ್ದಾರೆ ಎಂದು ವಿವರಿಸಿದರು.

RELATED ARTICLES  ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ಶ್ರೀ ಮಾರಿಜಾತ್ರಾ ಮಹೋತ್ಸವ ಪ್ರಾರಂಭ.


ದಕ್ಷಿಣ ಕನ್ನಡ ಜಿಲ್ಲೆ ಮಾಣಿ ಮಠದಲ್ಲಿ ಈ ವರ್ಷದ ನವರಾತ್ರಿ ಉತ್ಸವದ ಸಂದರ್ಭದಲ್ಲಿ ರಾಜರಾಜೇಶ್ವರಿಯ ವೈಭವೋಪೇತ ಉತ್ಸವ ನಡೆಯಲಿದೆ. ಒಂಬತ್ತು ದಿನಗಳ ಕಾಲ ಉಪವಾಸ ವ್ರತ ಕೈಗೊಂಡು ರಾಜರಾಜೇಶ್ವರಿಯ ಪೂಜೆ ನೆರವೇರಿಸಿ ದಶಮಿಯಂದು ಭಿಕ್ಷೆ ಸ್ವೀಕರಿಸುವ ಈ ಕಾರ್ಯಕ್ರಮವನ್ನು ಸಮಾಜದಲ್ಲಿ ಮಹಿಳೆಯರಿಗೆ ಯಥೋಚಿತ ರಕ್ಷೆ ದೊರೆಯಬೇಕು ಎಂಬ ಸದ್ಭಾವದಿಂದ ನಿರ್ವಹಿಸಲಾಗುತ್ತಿದೆ ಎಂದರು.


ಗೋಮಾತೆಯ ಸೇವೆಗಾಗಿ ಒಂದು ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದ ಮಾತೆಯರಿಗೆ ಲಕ್ಷಭಾಗಿನ ನೀಡಿ ಗೌರವಿಸಲಾಯಿತು. ಮೂರಕ್ಕಿಂತ ಹೆಚ್ಚು ಗೋವುಗಳ ನಿರ್ವಹಣೆ ಹೊಣೆ ಹೊತ್ತ 69 ಸಾಧಕಿಯರಿಗೆ ಶ್ರೀಗಳು ವಿಶೇಷ ಪುರಸ್ಕಾರ ನೀಡಿದರು. ಗೋಸೇವೆಯಲ್ಲಿ ನಿರತ ಶ್ರೀಮಾತೆಯರ ಸೇವೆಯನ್ನು ಗುರುತಿಸಲು ಈ ವರ್ಷದಿಂದ ತಾರೆ, ಸುತಾರೆ, ಮಹಾತಾರೆ ಬಿರುದು ನೀಡಿ ಗೌರವಿಸಲಾಗುತ್ತದೆ ಎಂದು ಹೇಳಿದರು.


ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಹವ್ಯಕ ಮಹಾಮಂಡಲದ ನಿಕಟಪೂರ್ವ ಮಾತೃಪ್ರಧಾನರಾದ ದೇವಿಕಾ ಶಾಸ್ತ್ರಿ ಮಾತನಾಡಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಹಿಳಾ ಅಧ್ಯಕ್ಷೆ ಶುಭಮಂಗಳ, ಗಾಯಕಿ ವಸುಧಾ ಶರ್ಮಾ, ಹವ್ಯಕ ಮಹಾಮಂಡಲ ಮಾತೃಪ್ರಧಾನರಾದ ವೀಣಾ ಗೋಪಾಲಕೃಷ್ಣ ಉಪಸ್ಥಿತರಿದ್ದರು. ಹವ್ಯಕ ಮಹಾಮಂಡಲದ ಹನ್ನೊಂದು ಮಂಡಲಗಳಿಂದ ಆಗಮಿಸಿದ ಸಾವಿರಾರು ಮಾತೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.