ಜೊಯಿಡಾ: ವಾರದಲ್ಲಿ ಕರು ಹಾಕಲಿದ್ದ ಗಬ್ಬದ ಆಕಳನ್ನು ಹುಲಿಯೊಂದು ಕೊಂದು ಅರ್ಧ ತಿಂದು ತೆರಳಿರುವ ಘಟನೆ ನಂದಿಗದ್ದಾ ಗ್ರಾಮ ಪಂಚಾಯತಿಯ ಕೊಂಬಾ ಹಳ್ಳಿಯಲ್ಲಿ ನಡೆದಿದೆ. ಶ್ರೀನಿವಾಸ ಭಟ್ಟರ ಬಿಳಿ ಬಣ್ಣದ ಆಕಳು ಮನೆ ಪಕ್ಕದ ಬೇಣದಲ್ಲಿ ಮೇಯಲು ಬಿಡಲಾಗಿತ್ತು. ಮಧ್ಯಾಹ್ನ ಮನೆಯವರೆಲ್ಲಾ ಊಟ ಮಾಡಿ ವಿಶ್ರಾಂತಿಯಲ್ಲಿದ್ದಾಗ ಆಕಳು ಕೂಗಿದ ಸದ್ದು ಕೇಳಿದ್ದು, ಆಕಳು ಕೊಟ್ಟಿಗೆಗೆ ಬರುತ್ತಿದೆ ಎಂದು ತಿಳಿದಿದ್ದರು. ಆದರೆ ಅರ್ಧ ಗಂಟೆ ಕಳೆದರೂ ಆಕಳು ಬಾರದೆ ಇದ್ದಾಗ ನೋಡಲು ಹೋದಾಗ, ಮನೆ ಪಕ್ಕದ ಸೊಪ್ಪಿನ ಬೆಟ್ಟದಿಂದ ಸುಮಾರು ಅರ್ಧ ಕಿಲೋ ಮೀಟರ್ ದೂರಕ್ಕೆ ಹುಲಿ ಆಕಳನ್ನು ಎಳೆದುಕೊಂಡು ಹೋಗಿದ್ದು ಕಂಡುಬಂದಿದೆ.
ಆಕಳನ್ನು ಅರ್ಧ ಸಿಗಿದ ಹುಲಿ ಹೊಟ್ಟೆಯಲ್ಲಿರುವ ಕರುವನ್ನು ಮುಟ್ಟಲಿಲ್ಲ. ಹೊಟ್ಟೆ ಒಡೆದು ಕರು ಅರ್ಧ ಹೊರ ಬಂದಿದ್ದು, ಮನೆಯವರಿಗೆ ಸಹಿಸಲಾರದ ದುಃಖವಾಗಿದೆ. ಅರಣ್ಯ ಇಲಾಖೆಯವರು ಸ್ಥಳಕ್ಕೆ ಬಂದು ಪರಿಶೀಲಿಸಿ ಹೋಗಿದ್ದಾಗಿ ಶ್ರೀನಿವಾಸ ಭಟ್ಟ ತಿಳಿಸಿದ್ದಾರೆ. 2 ದಿನಗಳ ಹಿಂದೆ ಶ್ರೀನಿವಾಸ ಭಟ್ಟರ 4 ವರ್ಷದ ಆಕಳ ಕರು ಹುಲಿ ಬಾಯಿಂದ ತಪ್ಪಿಸಿಕೊಂಡು ಬಂದಿತ್ತು.