ಕುಮಟಾ : ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೆ ತನ್ನ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುವವನಿಗೆ ಪುರಸ್ಕಾರಗಳು ಗೌರವಗಳು ಹುಡುಕಿ ಬರುತ್ತದೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ನಟ, ನಿರ್ಮಾಪಕ, ರಂಗಕರ್ಮಿ ಕಾಸರಗೋಡು ಚಿನ್ನಾ ಹೇಳಿದರು. ಅವರು ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನಲ್ಲಿ ಆದರ್ಶ ಶಿಕ್ಷಕಿ ವಿನಯಾ ಶಾನಭಾಗ ಅವರ ನೆನಪಿನಲ್ಲಿ ಕೊಡಮಾಡುವ ‘ವಿನಯಸ್ಮೃತಿ ಆದರ್ಶ ಶಿಕ್ಷಕ ಪುರಸ್ಕಾರ ಪ್ರದಾನ ಸಮಾರಂಭ’ ಹಾಗೂ ‘ಕೊಂಕಣಿ ಮಾನ್ಯತಾ ದಿವಸ’ ಕಾರ್ಯಕ್ರಮ ಉದ್ಘಾಟಿಸಿ ಗೋಕರ್ಣದ ಆಡುಕಟ್ಟಾದ ಹಿರಿಯ ಪ್ರಾಥಮಿಕ ಶಾಲೆ ನಂ – 2 ದ ಮುಖ್ಯ ಶಿಕ್ಷಕ
ಪರಮೇಶ್ವರ ಎಂ. ಮುಕ್ರಿ ಅವರಿಗೆ ಸಮರ್ಥ ಶಿಕ್ಷಕ ಪುರಸ್ಕಾರ ಪ್ರದಾನಮಾಡಿ ಅವರು ಮಾತನಾಡಿದರು.

ಯಾವುದೇ ಕಾರ್ಯವನ್ನು ಮಾಡುವಾಗಲೂ ಪ್ರತಿಫಲವನ್ನು ಅಪೇಕ್ಷಿಸಬಾರದು. ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ಎಂಬಂತೆ ಕಾರ್ಯ ಮಾಡಬೇಕು. ಆಗ ಎಲ್ಲವೂ ನಮಗೆ ಲಭ್ಯವಾಗುತ್ತದೆ. ಕೊರೋನಾದಂತಹ ಸಂಕಷ್ಟದ ಸ್ಥಿತಿಯಲ್ಲಿಯೂ ಶಾರದೆಯ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದ ಪಿ.ಎಂ ಮುಕ್ರಿ ಅವರಿಗೆ ಸಮರ್ಥ ಶಿಕ್ಷಕ ಪುರಸ್ಕಾರ ಸಂದಿರುವುದು ನಿಜವಾಗಿಯೂ ಶ್ಲಾಘನೀಯ ಎಂದ ಅವರು. ಪ್ರಶಸ್ತಿಗಾಗಿ ಅರ್ಜಿ ಹಾಕಿ, ಅಲೆದಾಡಿ, ಪ್ರಶಸ್ತಿ ಪಡೆಯುವವರ ನಡುವೆ ಸಮರ್ಥರನ್ನು ಗುರ್ತಿಸಿ ಪುರಸ್ಕಾರ ನೀಡುವ ಕಾರ್ಯ ಮೆಚ್ಚುವಂತಹುದು ಎಂದು ಅವರು ವಿವರಿಸಿದರು.

RELATED ARTICLES  ಸ್ವಚ್ಛತಾ ಕಾರ್ಯಕ್ರಮ ಸಂಪನ್ನ.

ಮಾತೃಭಾಷೆಯ ಬಗ್ಗೆ ನಮಗೆ ಎಂದಿಗೂ ಅಭಿಮಾನವಿರಬೇಕು. ಕೊಂಕಣಿ ಭಾಷಿಕರು ಕೊಂಕಣಿ ಕಲಿಯಲು ಮುಂದಾಗಬೇಕು. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಂಕಗಳಿಕೆಗೆ ಹೆಚ್ಚಿನ ಮಹತ್ವವಿದ್ದರೂ, ಜೀವನದಲ್ಲಿ ಒತ್ತಡದ ಓದು ಸರಿಯಲ್ಲ. ವಿದ್ಯಾರ್ಥಿಗಳು ಬೇಕಾದ ಆಯ್ಕೆಯತ್ತ ಮುಖ ಮಾಡಿ, ಬದುಕಿನಲ್ಲಿ ಗೆಲ್ಲಬೇಕು. ಮನೆಯಲ್ಲಿ ತಾಯಿ ತಂದೆಗಳನ್ನು ಗೌರವಿಸುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಸಂಸ್ಕಾರ ಜೀವನದಲ್ಲಿ ಬಹು ಮುಖ್ಯವಾದದ್ದು ಎಂದರು.

ಪ್ರಶಸ್ತಿ ಪುರಸ್ಕೃತ ಪಿ.ಎಂ ಮುಕ್ರಿ ಮಾತನಾಡಿ, ನನ್ನ ಕಾರ್ಯವನ್ನು ಗುರುತಿಸಿ ಸಂಸ್ಥೆಯವರು ನೀಡುತ್ತಿರುವ ಈ ಪುರಸ್ಕಾರ ರಾಜ್ಯ ರಾಷ್ಟ್ರಮಟ್ಟದ ಪ್ರಶಸ್ತಿಗಳಿಗಿಂತಲೂ ಮಿಗಿಲಾಗಿದೆ. ನಾನು ನನ್ನ ಕಾರ್ಯವನ್ನು ಯಾವುದೇ ಅಪೇಕ್ಷೆ ಇಲ್ಲದೆ ಮಾಡಿದ್ದೇನೆ. ಸಂಸ್ಥೆಯವರು ನನಗೆ ಗೊತ್ತಿಲ್ಲದಂತೆ ನನ್ನನ್ನು ಆಯ್ಕೆ ಮಾಡಿ ಈ ಗೌರವ ನೀಡಿರುವುದು ಹೆಮ್ಮೆ ತಂದಿದೆ. ಕೊಂಕಣ ಎಜುಕೇಶನ ಟ್ರಸ್ಟ್ ಒಂದು ಮಾದರಿ ಸಂಸ್ಥೆಯಾಗಿದ್ದು, ಇಲ್ಲಿಯ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ ಎಂದರು.

ಆತಿಥ್ಯವಹಿಸಿದ್ದ ಅಭಿವೃದ್ಧಿ ವಿಭಾಗದ ಉಪನಿರ್ದೇಶಕ ಎನ್‌.ಜಿ ನಾಯ್ಕ ಮಾತನಾಡಿ, ಕೊಂಕಣ ಸಂಸ್ಥೆ ರಾಜ್ಯ ಮಟ್ಟದಲ್ಲಿ ಹೆಸರುಗಳಿಸಿದೆ. ಆಡಳಿತ ಮಂಡಳಿಯವರು ನಿರಂತರವಾಗಿ ತೊಡಗಿಕೊಂಡು ಸಂಸ್ಥೆಯ ಏಳಿಗೆಗೆ ಶ್ರಮಿಸುತ್ತಿದ್ದಾರೆ. ವಿದ್ಯಾರ್ಥಿಗಳು ತಮ್ಮೊಳಗಿನ ವಿಷ ಬೀಜಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಉತ್ತಮ ವಿದ್ಯಾರ್ಥಿಗಳಾಗಿ ಸಾಧನೆ ಮಾಡಬೇಕು ಎಂದು ಅವರು ತಿಳಿ ಹೇಳಿದರು.

RELATED ARTICLES  ಸಾಧಕಿಯನ್ನು ಗುರ್ತಿಸಿ ಗೌರವಿಸಿದ ಸೇವಾಸಂಸ್ಥೆ

ಶೈಕ್ಷಣಿಕ ಸಲಹೆಗಾರರಾದ ಆರ್.ಎಚ್ ದೇಶಭಂಡಾರಿ ಅವರನ್ನೂ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಮುರಳಿಧರ ಪ್ರಭು ಪ್ರಸ್ತಾವಿಕವಾಗಿ ಮಾತನಾಡಿ, ಕೊಂಕಣಿ ಮಾನ್ಯತಾ ದಿವಸ್ ಆಚರಣೆಯ ಹಿನ್ನೆಲೆ ಹಾಗೂ ಗೀತಾ ಆರಾಧಕಿ ವಿನಯಾ ಶಾನಭಾಗ ಅವರ ಜೀವನ, ವೃತ್ತಿ ಜೀವನದ ಬಗ್ಗೆ ವಿವರಿಸಿದರು.

ಸಂಸ್ಥೆಯ ಅಧ್ಯಕ್ಷರಾದ ವಿಠಲ್ ನಾಯಕ ಅಧ್ಯಕ್ಷತೆ ವಹಿಸಿದ್ದರು. ವಿಶ್ವಸ್ಥರಾದ ಅನಂತ ಶಾನಭಾಗ ಸರ್ವರನ್ನೂ ಸ್ವಾಗತಿಸಿದರು. ರಮೇಶ ಪ್ರಭು ವಂದಿಸಿದರು. ಶಿಕ್ಷಕ ಗಣೇಶ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಚಿದಾನಂದ ಭಂಡಾರಿ ಪುರಸ್ಕೃತರ ಪರಿಚಯ ಮಾಡಿಕೊಟ್ಟರು. ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ ಉಪಸ್ಥಿತರಿದ್ದರು. ವೇದಿಕೆಯಲ್ಲಿ ವಿಧಾತ್ರಿ ಅಕಾಡೆಮಿಯ ಗುರುರಾಜ ಶೆಟ್ಟಿ, ಸಾವಿತ್ರಿ ಮುಕ್ರಿ, ಮುಖ್ಯೋಪಾಧ್ಯಾಯರಾದ ಸುಮಾ ಪ್ರಭು, ಸುಜಾತಾ ನಾಯ್ಕ, ಸಾವಿತ್ರಿ ಹೆಗಡೆ ಇದ್ದರು.