ಗೋಕರ್ಣ: ಸಮಾಜಕ್ಕೆ ಸೇವೆ ಸಲ್ಲಿಸಿದ ಹಿರಿಯರ ತ್ಯಾಗ, ಶ್ರದ್ಧೆ, ಸಾಧನೆಯನ್ನು ಮರೆಯಬಾರದು. ಮರೆತರೆ ನಾವು ಕೃತಘ್ನರು ಎನಿಸಿಕೊಳ್ಳುತ್ತೇವೆ. ಸಾಧಕರನ್ನು ಗುರುತಿಸಿ ಗೌರವಿಸುವುದು ಯುವ ಸಮುದಾಯಕ್ಕೆ ಪ್ರೇರಣೆಯಾಗುತ್ತದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.
ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಸ್ವಾಮೀಜಿ ಗುರುವಾರ ಕುಮಟಾ ಮಂಡಲದ ಕುಮಟಾ ಗುಡೇಅಂಗಡಿ, ಕೆಕ್ಕಾರು ಮತ್ತು ಗೋವಾ ವಲಯಗಳ ಶಿಷ್ಯಭಕ್ತರಿಂದ ಶ್ರೀಗುರುಭಿಕ್ಷಾ ಸೇವೆ ಸ್ವೀಕರಿಸಿ ಶ್ರೀಸಂದೇಶ ಅನುಗ್ರಹಿಸಿದರು.
“ಕೃತಘ್ನರ ಬಗ್ಗೆ ದಾನವರೂ ಜಿಗುಪ್ಸೆಪಡುತ್ತಾರೆ. ಹಸಿಮಾಂಸ ತಿನ್ನುವ ರಾಕ್ಷಸರು ಕೂಡಾ ಕೃತಘ್ನರ ಮಾಂಸ ಸೇವಿಸುವುದಿಲ್ಲ ಎಂದು ರಾಮ ಹೇಳಿರುವ ಉಲ್ಲೇಖ ರಾಮಾಯಣದಲ್ಲಿ ಇದೆ. ಆದ್ದರಿಂದ ನಾವು ಕೃತಘ್ನರಾಗದೇ, ಸಮಾಜ ಸೇವೆ ಮಾಡಿದವರಿಗೆ ಸದಾ ಕೃತಜ್ಞರಾಗಿರೋಣ” ಎಂದು ಸಲಹೆ ಮಾಡಿದರು.


ಅಪಾರ ಸೇವೆ ಸಲ್ಲಿಸಿ ಗತಿಸಿದ ಹಿರಿಯ ಚೇತನಗಳ ನೆನಪು ಮುಂದಿನ ಪೀಳಿಗೆಗೆ ಸ್ಫೂರ್ತಿ. ಉದಾಹರಣೆಗೆ ಇಸ್ರೋ ಚಂದ್ರಯಾನ ಮಿಷನ್‍ನ ಲ್ಯಾಂಡರ್‍ಗೆ ವಿಕ್ರಮ್ ಎಂಬ ಹೆಸರನ್ನು ಸಂಸ್ಥೆಯ ಸಂಸ್ಥಾಪಕ ವಿಕ್ರಮ್ ಸಾರಾಬಾಯಿ ಅವರ ನೆನಪಿನಲ್ಲಿ ಇಡಲಾಗಿದೆ ಎಂದು ಬಣ್ಣಿಸಿದರು.


ನಮ್ಮ ಪೀಠದ ಪರಂಪರೆ ಸಮಾಜದ ಜೀವರಾಶಿಗಳ ಕಷ್ಟ ಕಾರ್ಪಣ್ಯಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸುವುದು. ನಮ್ಮದು ಕಾರುಣ್ಯ ಪೀಠ. ಇದನ್ನು ಮೂಲವಾಗಿಟ್ಟುಕೊಂಡು ಮಠದ ಸಮಸ್ತ ಶಿಷ್ಯರು ಸಮಾಜದಲ್ಲಿ ಸಂಕಷ್ಟಕ್ಕೀಡಾದ ಜನತೆಗೆ ತ್ವರಿತವಾಗಿ ಸ್ಪಂದಿಸಬೇಕು. ಸಂಕಷ್ಟಕ್ಕೆ ಸ್ಪಂದಿಸುವುದು ಸಂಘಟನೆಯ ಮೂಲಮಂತ್ರ ಎಂದು ಅಭಿಪ್ರಾಯಪಟ್ಟರು.
ನಾವು ನಮ್ಮ ಜೀವನದಲ್ಲಿ ಅನಗತ್ಯ ಎನಿಸಿದ್ದನ್ನು ಖರೀದಿಸದೇ ನಮ್ಮ ‘ಬೇಕು’ಗಳಿಗೆ ಕಡಿವಾಣ ಹಾಕಿದಾಗ, ನಮಗೆ ಹೊರೆಯಾಗದಂತೆ ಸತ್ಕಾರ್ಯಗಳಿಗೆ ದೇಣಿಗೆ ನೀಡಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಕನಿಷ್ಠ ಶೇಕಡ 10ರಷ್ಟು ಮಂದಿ ನಮಗೆ ಅನಗತ್ಯ ಎನಿಸಿದ್ದನ್ನು ಖರೀದಿಸದೇ ಆ ಮೊತ್ತವನ್ನು ಒಳ್ಳೆಯ ಕಾರ್ಯಗಳಿಗೆ ವಿನಿಯೋಗಿಸಿದರೆ ಎಷ್ಟೋ ಮಂದಿಯನ್ನು ಕಷ್ಟದ ಕೂಪದಿಂದ ಮೇಲೆತ್ತಬಹುದು ಎಂದು ಹೇಳಿದರು.

RELATED ARTICLES  ಕಮಲಾಕರ ಹೆಗಡೆ ಹುಕ್ಲಮಕ್ಕಿ ಅವರಿಗೆ ಸನ್ಮಾನ


ಸೇವೆಯಲ್ಲಿ ನಾವು ಇಡೀ ವಿಶ್ವಕ್ಕೇ ಮೇಲ್ಪಂಕ್ತಿಯಾಗಬೇಕು. ನಾವು ಮಾಡುವ ಸಣ್ಣ ಸಣ್ಣ ಸೇವೆಗಳು ದೊಡ್ಡ ಪ್ರಯೋಜನ ನೀಡಬಲ್ಲದು. ‘ನನ್ನದು’ ಎಂಬ ಸ್ವಾರ್ಥ ಬಿಟ್ಟು, ‘ನಮ್ಮದು’ ಎಂಬ ವಿಶಾಲ ಮನೋಭಾವ ಬೆಳೆಸಿಕೊಂಡು ಸಂಕಷ್ಟಕ್ಕೀಡಾದವರ ಕಷ್ಟಗಳಿಗೆ ಸ್ಪಂದಿಸಿ ಎಂದು ಸೂಚಿಸಿದರು.


ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಮಾತನಾಡಿ, “ಸೇವೆಯ ಅವಕಾಶ ಸಿಗುವುದು ದುರ್ಲಭ. ಅದರಲ್ಲೂ ಶಂಕರಾಚಾರ್ಯರ ಅವಿಚ್ಛಿನ ಪರಂಪರೆಯ ಪೀಠದ ಸೇವೆ ಮಾಡುವ ಭಾಗ್ಯ ನಮಗೆ ಲಭಿಸಿರುವುದು ಪೂರ್ವ ಪುಣ್ಯದ ಫಲ. ಸೇವೆಯ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅವಕಾಶ ಸಿಕ್ಕಿದಾಗ ಅದನ್ನು ಬಳಸಿಕೊಂಡು ಪುಣ್ಯ ಸಂಪಾದಿಸಬೇಕು” ಎಂದು ಸಲಹೆ ಮಾಡಿದರು.
ರಾಘವೇಶ್ವರ ಶ್ರೀಗಳು ಹತ್ತು ಹಲವು ಸಮಾಜಮುಖಿ ಯೋಜನೆಗಳನ್ನು ನಮಗೆ ನೀಡಿದ್ದು, ಅದನ್ನು ಚೆನ್ನಾಗಿ ಮುಂದುವರಿಸಿಕೊಂಡು ಹೋಗುವುದು ಶಿಷ್ಯರಾದ ನಮ್ಮೆಲ್ಲರ ಕರ್ತವ್ಯ. ಶ್ರೀಸಂಸ್ಥಾನದವರು ನಮಗೆ ಮೂಲವಾಗಿ ಕರುಣಿಸಿದ ಮುಷ್ಟಿ ಭಿಕ್ಷೆ, ಬಿಂದು- ಸಿಂಧುವಿನಂಥ ಸಣ್ಣ ಯೋಜನೆಯಿಂದ ಹಿಡಿದು, ವಿಷ್ಣುಗುಪ್ತ ವಿಶ್ವವಿದ್ಯಾಪೀಠದಂಥ ಸಹಸ್ರಮಾನದ ಯೋಜನೆಗಳಿಗೆ ಕೈಜೋಡಿಸುವುದು ಶಿಷ್ಯರಾದ ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

RELATED ARTICLES  ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆ: ಬಹುಭಾಷಾ ಕಥಾ ಗೋಷ್ಠಿ


ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಉತ್ತರ ಕನ್ನಡ ಪ್ರಾಂತ ಉಪಾಧ್ಯಕ್ಷ ಜಿ.ಎಸ್.ಹೆಗಡೆ, ಕುಮಟಾ ಮಂಡಲದ ನೂತನ ಅಧ್ಯಕ್ಷ ಸುಬ್ರಾಯ ಭಟ್ ಮೂರೂರು, ಕಾರ್ಯದರ್ಶಿ ರವೀಂದ್ರ ಭಟ್ ಸೂರಿ ಮತ್ತಿತರರು ಉಪಸ್ಥಿತರಿದ್ದರು. ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಒಂಬತ್ತು ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಪುರಸ್ಕರಿಸಲಾಯಿತು.ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಆರ್.ಜಿ.ಭಟ್ ಕುಮಟಾ, ಡಾ.ಜಿ.ಜಿ.ಹೆಗಡೆ ಬಗ್ಗೋಣ, ಡಾ.ಗೋಪಾಲಕೃಷ್ಣ ಎಲ್.ಹೆಗಡೆ ಮಣಕಿ, ಡಾ.ಶ್ರೀಕಾಂತ ಪಿ.ಹೆಗಡೆ, ಸೀತಾರಾಮ ಅನಂತ ಭಟ್ಟ ದೇವಿಮಠ, ನಿವೃತ್ತ ಪ್ರಾಚಾರ್ಯ ಎಸ್.ಎಸ್.ಹೆಗಡೆ, ಶ್ರೀಧರ ಸತ್ಯನಾರಾಯಣ ಹೆಗಡೆ, ಕೊಂತ್ಲಮನೆ, ವೆಂಕಟ್ರಮಣ ಹರಿಹರ ಹೆಗಡೆ, ರಾಮಾ ಸೀತಾರಾಮ ಭಟ್ಟ, ಗೋಪಾಲಕೃಷ್ಣ ದೇವರು ಭಟ್ಟ, ಗಣೇಶ ರಾಮಕೃಷ್ಣ ಭಟ್ಟ, ಡಾ.ವೆಂಕಟಸುಬ್ಬ ವಿಶ್ವೇಶ್ವರ ಭಟ್ಟ, ಮಂಜುನಾಥ ರಾಮಕೃಷ್ಣ ಭಟ್ಟ, ಶ್ರೀಕೃಷ್ಣ ವೆಂಕಟರಮಣ ಭಟ್ಟ ಅವರನ್ನು ಸನ್ಮಾನಿಸಲಾಯಿತು.