ಕುಮಟಾ : ಇಲ್ಲಿನ ಕೊಂಕಣ ಎಜುಕೇಶನ್ ಟ್ರಸ್ಟಿನ ಸರಸ್ವತಿ ವಿದ್ಯಾ ಕೇಂದ್ರ ಪ್ರಾಥಮಿಕ ಶಾಲೆಯಲ್ಲಿ, ಶ್ರಾವಣ ಮಾಸದ ಶುಕ್ರವಾರದ ಪುಣ್ಯ ಪರ್ವ ಕಾಲದಲ್ಲಿ ಪುಟಾಣಿ ಮಕ್ಕಳು ಶ್ಲೋಕ, ಗೀತಗಳ ಮೂಲಕವಾಗಿ ಹಾಗೂ ಕೆಲವು ಪುಟಾಣಿ ಮಕ್ಕಳೇ ಮಡಿಯುಟ್ಟು ತಾಯಿ ಶಾರದೆಯನ್ನು ಆರಾಧಿಸುವ ಮೂಲಕ ಗಮನಸೆಳೆದರು.
ಶಾರದಾಂಬೆಯೆಂದರೆ ಜ್ಞಾನ, ಸಂಗೀತ, ಕಾವ್ಯ, ಮಾತು ಮೊದಲಾದ ಬೌದ್ಧಿಕ ವಿಚಾರಗಳನ್ನು ಪೋಷಿಸುವ ದೇವತೆ. ಆದ್ದರಿಂದ ತೊಡೆಯ ಮೇಲೆ ವೀಣೆಯನ್ನಿಟ್ಟುಕೊಂಡಿರುವ ಶಾರದಾಂಬೆಯ ಮೂರ್ತಿಯನ್ನೋ, ಚಿತ್ರವನ್ನೋ ಶಾರದಾಪೂಜೆಯ ದಿನದಂದು ಪೂಜಿಸುವುದು ವಾಡಿಕೆ. ಹೀಗಿದ್ದು, ಸಂಸ್ಥೆಯಲ್ಲಿ ಇದಾಗಲೇ ಇರುವ ಅಮೃತಶಿಲೆಯ ಭವ್ಯ ಮೂರ್ತಿಯನ್ನು ಮಕ್ಕಳೇ ಹೂವುಗಳಿಂದ ಅಲಂಕರಿಸಿ, ಶಿಕ್ಷಕರ ಸಹಾಯದೊಂದಿಗೆ ರಂಗವಲ್ಲಿ ಇನ್ನಿತರ ಅಲಂಕಾರ ನೆರವೇರಿಸಿ ಪೂಜೆ ಮಾಡಿದರು.
ಮಂತ್ರ ಪಠಣದೊಂದಿಗೆ ವಿದ್ಯಾರ್ಥಿಗಳೇ ಪೂಜಾ ಕೈಂಕರ್ಯ ನೆರವೇರಿಸಿದರು. ರಂಗಾ ದಾಸ ಶಾನಭಾಗ ಹೆಗಡೆಕರ ಬಾಲಮಂದಿರದ ವಿದ್ಯಾರ್ಥಿಗಳು ಹಾಗೂ ಸರಸ್ವತಿ ವಿದ್ಯಾ ಕೇಂದ್ರದ ಪುಟಾಣಿ ಮಕ್ಕಳು ಸೌದರ್ಯ ಲಹರಿ, ಶಾರದಾ ಸ್ತೋತ್ರ, ಭಗವದ್ಗೀತಾ ಶ್ಲೋಕಗಳು ಹಾಗೂ ಶಾರದಾ ಸ್ತುತಿಗಳನ್ನು ಭಕ್ತಿಗೀತೆಗಳನ್ನು ಹಾಡುವ ಮೂಲಕ ಪೂಜೆಗೆ ಕಳೆಗಟ್ಟಿದರು.
ಸಂಸ್ಥೆಯ ಮುಖ್ಯಶಿಕ್ಷಕರು, ಶಿಕ್ಷಕರು, ಹಲವು ಪಾಲಕರು, ಸಾವಿರಾರು ವಿದ್ಯಾರ್ಥಿಗಳು ಪೂಜಾ ಕಾರ್ಯವನ್ನು ಕಣ್ಣುತುಂಬಿಕೊಳ್ಳುವ ಜೊತೆಗೆ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.