ಕುಮಟಾ : ಅಂಗನವಾಡಿ ಕಟ್ಟಡ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಇದರಿಂದ ಇಲ್ಲಿನ ಮಕ್ಕಳು ಅಂಗನವಾಡಿಯ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ವಂಚಿತವಾಗುವ ಭಯ ಎದುರಾಗಿದೆ‌ ಎಂದು ತಾಲೂಕಿನ ಬರ್ಗಿಯ ಸೋಡಿಗದ್ದೆಯಲ್ಲಿ ಹೊಸ ಅಂಗನವಾಡಿ ಕಟ್ಟಡ ನಿರ್ಮಿಸುವಂತೆ ಆಗ್ರಹಿಸಿ ಮಕ್ಕಳು ಮತ್ತು ಪಾಲಕರು ಬರ್ಗಿ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ.

ಪ್ರತಿಭಟನಾ ಸ್ಥಳಕ್ಕಾಗಮಿಸಿದ ತಾಲೂಕಾ ಪಂಚಾಯತಿಯ ಕಾರ್ಯನಿರ್ವಹಣಾಧಿಕಾರಿ ನಾಗರತ್ನ ನಾಯಕ ಮತ್ತು ಜಿಲ್ಲಾ ಪಂಚಾಯತಿಯ ಇಂಜಿನೀಯರಿಂಗ್ ವಿಭಾಗದ ಸಂಜೀವ ನಾಯಕ ಅವರು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಿದರಾದರೂ, ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರು, ಸ್ಥಳೀಯರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

ನಂತರ ಅಧಿಕಾರಿಗಳು ನಾವು ಈಗಾಗಲೇ ಅಂಗನವಾಡಿಯ ಕಟ್ಟಡ ಪರಿಶೀಲಿಸಿ ವರದಿ ನೀಡಿದ್ದೇವೆ. ಸ್ಥಳೀಯರ ಹೇಳಿಕೆಗಳ ಬಗ್ಗೆಯೂ ಇದರಲ್ಲಿ ವಿವರಿಸಿದ್ದೇವೆ. ಕಟ್ಟಡವನ್ನು ದುರಸ್ತಿಗೊಳಿಸಲು ಮೇಲಾಧಿಕಾರಿಗಳು ಸೂಚಿಸಿದ್ದಾರೆ. ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಮುಂದುವರೆಸುವ ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES  ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಪಲ್ಟಿ..!

ಪ್ರತಿಭಟನೆಯಲ್ಲಿ ಬರ್ಗಿ ಗ್ರಾಪಂ ಅಧ್ಯಕ್ಷ ಸಂತೋಷ ಹರಿಕಂತ್ರ, ಉಪಾಧ್ಯಕ್ಷರಾದ ಮಹಾಲಕ್ಷ್ಮೀ ಶೆಟ್ಟಿ, ಸದಸ್ಯರಾದ ರವಿ ನಾಯ್ಕ, ನವೀನ ಪಟಗಾರ, ಈಶ್ವರ ಪಟಗಾರ, ವಿಠೋಬ ಗಾವಡಿ, ಇಸಾಕ್ ಕೊತ್ಬಾಲ್, ವಿಶಾಲಾಕ್ಷಿ ಪಟಗಾರ, ಪ್ರಮುಖರಾದ ಸುಲೋಚನಾ, ಸಂಗೀತ ಹರಿಕಂತ್ರ, ಸುಮಿತ್ರಾ ನಾಯ್ಕ, ಹನುಮಂತ ನಾಯ್ಕ, ನಾಗೇಂದ್ರ ಹರಿಕಂತ್ರ, ಪ್ರಕಾಶ ಗುನಗಾ, ಪೂರ್ಣಿಮಾ ಪಟಗಾರ, ಸವಿತಾ ನಾಯ್ಕ ಇತರರು ಇದ್ದರು.

  • ಪ್ರತಿಭಟನಾಕಾರರ ಅಹವಾಲು ಏನು?

* 9.17 ಲಕ್ಷ ರೂ ವೆಚ್ಚದಲ್ಲಿ, 2016-17ನೇ ಸಾಲಿನಲ್ಲಿ ತಾಲೂಕಿನ ಬರ್ಗಿ ಗ್ರಾಪಂ ವ್ಯಾಪ್ತಿಯ ಸೋಡಿಗದ್ದೆಯಲ್ಲಿ ನಡೆದ ಅಂಗನವಾಡಿ ಕಟ್ಟಡ ಕಾಮಗಾರಿ  ಸಂಪೂರ್ಣ ಕಳಪೆಯಾಗಿದೆ. ಇದಕ್ಕೆ ಹೊಣೆ ಯಾರು?

* ಹೊಸ ಕಟ್ಟಡದಲ್ಲಿ ಸಾಕಷ್ಟು ಬಿರುಕುಗಳು ಕಾಣಿಸಿಕೊಂಡು ಈ ಕಟ್ಟಡ ಕುಸಿಯುವ ಆತಂಕ ಎದುರಾಗಿದೆ. ಇದರಿಂದ ಸಮಸ್ಯೆಯಾದರೆ ಯಾರು ಜವಾಬ್ದಾರರು?

* 1.5 ಲಕ್ಷ ರೂ. ನಿರ್ಮಿತಿ ಕೇಂದ್ರದ ಹಣ ಮತ್ತು ತಾಲೂಕು ಪಂಚಾಯತ್‍ನಿಂದ 50 ಸಾವಿರ ರೂ. ಖರ್ಚು ಮಾಡಿ, ಕಳಪೆ ಕಟ್ಟಡಕ್ಕೆ ಮತ್ತೆ ಹಣ ಹಾಕುವ ಅನಿವಾರ್ಯತೆ ಏನಿತ್ತು?

RELATED ARTICLES  ಟಿಪ್ಪರ್ ಹರಿದು ಪಾದಚಾರಿ ಸಾವು.

* ಅಂಗನವಾಡಿ ಕಟ್ಟಡ ಇನ್ನೂ ಏಕೆ ಉದ್ಘಾಟನೆಯಾಗಿಲ್ಲ?

* ಇಂದಿಗೂ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ನಡೆಯುವಂತಾಗಿದೆ. ಪಂಚಾಯತ್‍ನಿಂದ ಜಾಗ ನೀಡಿದ್ದರೂ, ಸೂಕ್ತ ಕಟ್ಟಡ ನಿರ್ಮಿಸಿಕೊಡಬೇಕಾದ ಸಂಬಂಧಪಟ್ಟ ಇಲಾಖೆ ಎಡವಿದೆಯೇ?

* ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ನಡೆಯುತ್ತಿದ್ದರೂ, ಬಾಡಿಗೆ ಕಟ್ಟಡ ಸೋರುತ್ತಿದೆ. ಇದಕ್ಕಾರು ಹೊಣೆ?

* ಸೋಡಿಗದ್ದೆ ಅಂಗನವಾಡಿಯನ್ನು ಬರ್ಗಿ ನಂಬರ್- 1 ಅಂಗನವಾಡಿಗೆ ವಿಲೀನಗೊಳಿಸಿದ್ದಾರೆ. ಆದರೆ ಸೋಡಿಗದ್ದೆಯ ಮಕ್ಕಳಿಗೆ ಬರ್ಗಿಗೆ ಬರಲು ಸಾಧ್ಯವೇ?

 

ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮ ಆಗಬೇಕು. ಪಂಚಾಯತ್ ಅಂಗನವಾಡಿ ಕಟ್ಟಡಕ್ಕೆ ನೀಡಿದ ಜಾಗದಲ್ಲಿ ಹೊಸ ಗುಣಮಟ್ಟದ ಅಂಗನವಾಡಿ ನಿರ್ಮಿಸಬೇಕು. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತನೆ ನಡೆಯಬೇಕು. – ರಾಮ ಪಟಗಾರ, ಬರ್ಗಿ ಗ್ರಾಪಂ ಸದಸ್ಯ