ಕಾರವಾರ : ಬೇರೆ ಬೇರೆ ಪಕ್ಷದ ಪ್ರಮುಖರು ಹಾಗೂ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರುವ ಬಗ್ಗೆ ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದ್ದು, ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಬಿಜೆಪಿಯ ದಿನಕರ ಶೆಟ್ಟಿ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದು, ಸುದ್ದಿ ಸಾಮಾಜಿಕ ಜಾಲತಾಣದಲ್ಲಿಯೂ ಹರಿದಾಡುತಿದ್ದು ಕುಮಟಾ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗುವಂತೆ ಮಾಡಿತ್ತು. ಈ ಕುರಿತು ಮಾಧ್ಯಮ ಹೇಳಿಕೆ ನೀಡಿದ ಕುಮಟಾ ಬಿಜೆಪಿ ಶಾಸಕ ದಿನಕರ ಶೆಟ್ಟಿಯವರು ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ.
ನನ್ನ ತೇಜೋವಧೆ ಮಾಡಬೇಕು ಎಂದು ಚುನಾವಣಾ ಪೂರ್ವದಿಂದಲೂ ವ್ಯವಸ್ಥಿತವಾಗಿ ಷಢ್ಯಂತ್ರ ವನ್ನು ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಬಿತ್ತರಿಸುವ ಮೂಲಕ ಕ್ಷೇತ್ರದ ಜನರಲ್ಲಿ ಗೊಂದಲ ಉಂಟುಮಾಡುತ್ತಿದ್ದಾರೆ. ನನಗೆ ಜಗತ್ತೇ ಪ್ರೀತಿಸುವ ನಮ್ಮ ಪ್ರಧಾನಿ ಮೋದಿಯವರ ಬಗ್ಗೆ ಅಪಾರ ಗೌರವ ಪ್ರೀತಿ ಇದೆ. ನನಗೆ ಪಕ್ಷವೇ ಮುಖ್ಯ. ಕಾರ್ಯಕರ್ತರು ಮುಖ್ಯ. ಬಿಜೆಪಿ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಪಕ್ಷಕ್ಕೆ ನಿಷ್ಟನಾಗಿದ್ದೇನೆ,ಮುಂದೆಯೂ ನಿಷ್ಟನಾಗಿ ಕಾರ್ಯನಿರ್ವಹಿಸುತ್ತೇನೆಯೇ ಹೊರತು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರುವ ಪ್ರಶ್ನೆಯಿಲ್ಲ ಎಂದು ದಿನಕರ ಶೆಟ್ಟಿ ಸ್ಪಷ್ಟೀಕರಣ ನೀಡಿದ್ದಾರೆ. ಸದ್ಯ ಕೆಲವು ದಿನಗಳಿಂದ ದಿನಕರ ಶಟ್ಟಿಯವರು ವಿದೇಶಿ ಪ್ರವಾಸದಲ್ಲಿದ್ದು ಈ ಕಾರಣದಿಂದ ಅವರಿಗೆ ಕ್ಷೇತ್ರದ ಜನರು ಕರೆಮಾಡಿದಾಗ ನೆಟ್ಟರ್ಕ ಇಲ್ಲದೇ ಸಂಪರ್ಕಕ್ಕೆ ಸಿಗುತ್ತಿಲ್ಲ.
ಈ ವಿಷಯವನ್ನೇ ಹಿಡಿದುಕೊಂಡು ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳುತಿದ್ದಾರೆ ಹೀಗಾಗಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅವರ ಆಪ್ತ ವಲಯ ಮಾಹಿತಿ ನೀಡಿದೆ. ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ನಾನು ಬಿಜೆಪಿಯಲ್ಲಿಯೇ ಮುಂದುವರೆಯುವವನು. ಅನ್ಯ ಮಾತುಗಳು ಹಾಗೂ ಗಾಳಿ ಸುದ್ದಿಗಳಿಗೆ ಯಾರೂ ಕಿವಿಗೊಡುವ ಅಗತ್ಯತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.