ಕುಮಟಾ :  ಹುರುಪಿನಿಂದ ತಮ್ಮ ತಂಡದವರ ಉತ್ಸಾಹ ಹೆಚ್ಚಿಸುತ್ತಿರುವ ಮಕ್ಕಳು, ಇನ್ನೊಂದೆಡೆ ಚಪ್ಪಾಳೆಗಳ ಸದ್ದು,   ಮತ್ತೊಂದೆಡೆ ಪುಟಾಣಿಗಳ ಜಯಘೋಷಗಳು. ಇವೆಲ್ಲವೂ ಕಂಡು ಬಂದಿದ್ದು ತಾಲೂಕಿನ ಕೊಂಕಣ ಎಜುಕೇಶನ್ ಟ್ರಸ್ಟಿನ ಸರಸ್ವತಿ ವಿದ್ಯಾ ಕೇಂದ್ರದಲ್ಲಿ.

ಇಲ್ಲಿ ಶನಿವಾರದ  ಬ್ಯಾಗ್  ರಹಿತ ದಿನವನ್ನು  ಮನರಂಜನಾ  ಆಟದ ದಿನವಾಗಿ ಪರಿವರ್ತಿಸಿ ಮಕ್ಕಳನ್ನು ವಿಶೇಷ ಚಟುವಟಿಕೆಗಳಲ್ಲಿ ತೊಡಗಿಸಲಾಗಿತ್ತು. ವಿದ್ಯಾರ್ಥಿಗಳ ನಾಲ್ಕು ತಂಡಗಳು ಹಾಗೂ ವಿದ್ಯಾರ್ಥಿನಿಯರ ನಾಲ್ಕು ತಂಡಗಳನ್ನು ಸಂಯೋಜಿಸಿ, ಈ ತಂಡಗಳ ನಡುವೆ ವಿವಿಧ ಮನೋರಂಜನಾ ಆಟದ ಸ್ಪರ್ಧೆ ಏರ್ಪಡಿಸುವ ಮೂಲಕ  ಬಹುಮಾನಗಳನ್ನು ಘೋಷಿಸಲಾಯಿತು.

ಎದುರಿಗೆ ಮುಖ ಮಾಡಿ ಕೈಗಳಿಂದ ಹಿಂಗಡೆಗೆ  ಚೆಂಡನ್ನು ಪಾಸ್ ಮಾಡುತ್ತಾ, ಸರತಿಯ ಕೊನೆಯಲ್ಲಿರುವ ವಿದ್ಯಾರ್ಥಿಯವರೆಗೆ ಚೆಂಡು ದಾಟಿಸಿ ಆ ವಿದ್ಯಾರ್ಥಿ ಓಡಿಬಂದು ಗುರುತಿಸಿದ ಜಾಗ ಸುತ್ತುಹಾಕಿ ಪುನಃ ಮೊದಲ ವಿದ್ಯಾರ್ಥಿಗೆ  ಚೆಂಡು ಹಸ್ತಾಂತರಿಸುವುದು. ಹೂಪ್ಸ್ ಗಳನ್ನು ತಲೆಯಿಂದ  ಕಾಲಿನವರೆಗೆ ದಾಟಿಸುತ್ತಾ ಓಡಿ ಗುರಿ ಸೇರುವುದು. ಇತ್ಯಾದಿಗಳು ಸ್ಪರ್ಧೆಯ ಆಟಗಳಾಗಿದ್ದವು.

RELATED ARTICLES  How To Avoid Failure When Outsourcing Software Development

ಆಟದ ಜೊತೆ ಹಲವಾರು ಹಾಸ್ಯದ ನಗೆ ಜೋಕುಗಳು ಮಕ್ಕಳಿಂದ ಹೇಳಿಸಿ ನಗುವಿನ ರಸದೌತಣ ನೀಡಲಾಯಿತು. ಜೊತೆಗೆ ದೇಶಾಭಿಮಾನ  ಪ್ರೇರೇಪಿಸುವ  ವಿವಿಧ ಚಟುವಟಿಕೆಗಳನ್ನು ಮಾಡಿಸಲಾಯಿತು. ಗೀತ ಗಾಯನ, ಕ್ರೀಡೆಯ ಮಹತ್ವ ತಿಳಿಸುವ ಮಾತುಗಳು ಈ ದಿನದ ಸಂತಸ ಹೆಚ್ಚಿಸಿತ್ತು.

ದೈಹಿಕ ಶಿಕ್ಷಕಿ ಸುಮಂಗಲಾ ನಾಯ್ಕ ಮನೋರಂಜನಾ ಆಟಗಳನ್ನು ಆಡಿಸಿದರು. ಮಕ್ಕಳು ಉತ್ಸಾಹದಿಂದ ಭಾರತ ಮಾತೆಗೆ ಜಯವಾಗಲಿ, ಜೈ ಹಿಂದ್, ನಮ್ಮ ಕೊಂಕಣ ನಮ್ಮ ಹೆಮ್ಮೆ, ಎಸ್.ವಿ.ಕೆ ಮುಂತಾದ ಘೋಷಣೆಗಳನ್ನು ಕೂಗಿದರು.

ಆರನೇ ವರ್ಗದ ವಿದ್ಯಾರ್ಥಿನಿ ವೈಷ್ಣವಿ ಗುನಗಾ ಈ ಸಂದರ್ಭದಲ್ಲಿ ಮಾತನಾಡಿ, ನಮ್ಮ ಶಾಲೆಯಲ್ಲಿ ಪ್ರತಿ ಶನಿವಾರ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಈ ವಾರ ‘ಫನ್ನಿ ಗೇಮ್ಸ್ ಡೇ’ ಹಮ್ಮಿಕೊಂಡಿದ್ದರು. ನಾವು ತುಂಬಾ ಸಂತೋಷದಿಂದ ಈ ಆಟದಲ್ಲಿ ಭಾಗವಹಿಸಿದವು. ನಡುನಡುವೆ ಹಾಸ್ಯದ ಮಾತುಗಳು ಹಾಗೂ ಮನರಂಜನಾ ಆಟದ ಸಂದರ್ಭದಲ್ಲಿ ಉಳಿದ ಮಕ್ಕಳ ಪ್ರೋತ್ಸಾಹದ ಘೋಷಣೆಗಳು ನಮಗೆ ಕ್ರೀಡಾಸ್ಪೂರ್ತಿ ಹೆಚ್ಚಿಸಿತು. ನಮ್ಮ ಶಾಲೆಯ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಕಾರ್ಯಕ್ರಮ ಸಂಯೋಜಿಸುವ ಭರವಸೆ ಇದೆ ಎಂದಳು.

RELATED ARTICLES  ಸಿದ್ಧಗೊಂಡಿದೆ ಮುಂದಿನ ಏಳು ವರ್ಷದ ಅಭಿವೃದ್ಧಿಗೆ ರೂಪುರೇಷೆ

ಶಾಲಾ ಮುಖ್ಯ ಶಿಕ್ಷಕಿ ಸುಜಾತ ನಾಯ್ಕ,  ಶಿಕ್ಷಕ ವೃಂದದವರು, ಕೆಲವು ಪಾಲಕರು ನೂರಾರು ವಿದ್ಯಾರ್ಥಿಗಳು, ಶಾಲಾ ಬಸ್ ಚಾಲಕ ನಿರ್ವಾಹಕರು ಈ ಸಂದರ್ಭದಲ್ಲಿ ಹಾಜರಿದ್ದು ಕಾರ್ಯಕ್ರಮದ ಸವಿ ಸವಿದರು.