ಕುಮಟಾ : ಇತ್ತೀಚಿನ ದಿನಗಳಲ್ಲಿ ಸಮಾಜ ಸಂಘಟನೆಗಳು ಪ್ರತಿಭಾನ್ವಿತರನ್ನು ಪುರಸ್ಕರಿಸುವ ಹಾಗೂ ಅವರ ಬೆಂಬಲಕ್ಕೆ ನಿಲ್ಲುವ ಕೆಲಸ ಮಾಡುತ್ತಿದೆ. ಪ್ರತಿಭಾವಂತ ಮಕ್ಕಳು ಆರ್ಥಿಕ ಸಮಸ್ಯೆಯಿಂದ, ತಮ್ಮ ಶೈಕ್ಷಣಿಕ ಗುರಿಯಿಂದ, ಅವಕಾಶಗಳಿಂದ ವಂಚಿತರಾಗಬಾರದು ಎಂಬ ಕಳಕಳಿ ತೋರುತ್ತಿದೆ. ಹೀಗಾಗಿ ಸಮಾಜದ ಪುರಸ್ಕಾರಕ್ಕೆ ಪಾತ್ರರಾದವರು ನಿಜವಾಗಿಯೂ ಪುಣ್ಯವಂತರು ಎಂದು ಮೀನುಗಾರಿಕೆ ಬಂದರು ಮತ್ತು ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು. ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಶನಿವಾರ ತಾಲೂಕು ನಾಮಧಾರಿ ಆರ್ಯ ಈಡಿಗ ಸಂಘದಿಂದ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳು ಯಾವುದೇ ಉನ್ನತ ಶಿಕ್ಷಣ ಪಡೆಯಲು ಹಿಂಜರಿಯಬೇಡಿ. ನಿಮಗೆ ಸದೃಢ ಸಮಾಜದ ಹಾಗೂ ನಮ್ಮೆಲ್ಲರ ಸಹಕಾರ, ಬೆಂಬಲ ಇದೆ ಎಂದ ಅವರು, ದಿ. ಡಾ. ಎಂ ಡಿ ನಾಯ್ಕರ ಮಾರ್ಗದರ್ಶನದಲ್ಲಿ ಆರಂಭವಾದ ನಾಮಧಾರಿ ಸಂಘ ಸದೃಢವಾಗಿ ಬೆಳೆದಿದೆ. ಡಾ. ಎಂ. ಡಿ ನಾಯ್ಕರು ಭೌತಿಕವಾಗಿ ನಮ್ಮ ಜೊತೆ ಇಲ್ಲದಿದ್ದರೂ ನಮ್ಮೆಲ್ಲರ ಮನಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಇದಕ್ಕೆ ಅವರು ನೀಡಿದ ಸಾಮಾಜಿಕ ಸೇವೆಯೇ ಕಾರಣ. ಹಾಗಾಗಿ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದು ಸಮಾಜಕ್ಕೆ ಮಾದರಿಯಾಗುವ ಜೊತೆಗೆ ಇತರರಿಗೆ ಸಹಾಯ, ಸಹಕಾರ ಮಾಡುವ ಮನೋಭಾವ ರೂಢಿಸಿಕೊಳ್ಳುವಂತೆ ಕರೆ ನೀಡಿದರು.
ಹಿಂದೆ ಶಿಕ್ಷಣ ಕಷ್ಟವಿತ್ತು ಆದರೆ ವ್ಯವಸ್ಥೆಗಳಿರಲಿಲ್ಲ, ಈಗ ಪರಿಸ್ಥಿತಿ ಉತ್ತಮವಾಗಿದೆ. ಪ್ರತಿಭೆಗಳು ಗುರುತಿಸಲ್ಪಡುತ್ತಿದೆ. ಮಕ್ಕಳ ಪಾಲಕರು ಮಾತ್ರವಲ್ಲ, ಸಮಾಜವೂ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿವೆ. ಕುಮಟಾದಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ಇದೆ ಎಂದರು.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕುರಿತು ಪ್ರಸ್ತಾಪಿಸಿದ ಸಚಿವ ವೈದ್ಯ, ಈ ವಿಚಾರದಲ್ಲಿ ಈ ಹಿಂದಿನವರು ಏನು ಮಾಡಿ ಹೋದರು, ನಂತರ ಏನಾಗಿದೆ ಎಂದು ತಿಳಿಯಿರಿ. ಇದರಲ್ಲಿ ರಾಜಕೀಯ ಮಾಡುವುದಿಲ್ಲ. ಆಸ್ಪತ್ರೆ ನಿರ್ಮಾಣಕ್ಕೆ ಪ್ರಯತ್ನ ಮಾಡುತ್ತೇನೆ ಎಂದರು.
ಶಿರಸಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಶಿಕ್ಷಣವೇ ಸಮಗ್ರ ಏಳಿಗೆಗೆ ಮೂಲ. ಉನ್ನತ ಸ್ಥಾನ ಮಾನಗಳಿಕೆಗೆ ಉನ್ನತ ಶಿಕ್ಷಣ ಬೇಕು.  ಈ ನಿಟ್ಟಿನಲ್ಲಿ ಸಮಾಜದ ಪಾತ್ರ ಮಹತ್ವದ್ದಿದೆ.  ಯುವ ಪೀಳಿಗೆ ಜವಾಬ್ದಾರಿ ಹೊರಬೇಕು. ಹಿರಿಯರು ಸಮಾಜದಲ್ಲಿನ ನ್ಯೂನ್ಯತೆಯನ್ನು ಕಂಡುಕೊಂಡು ಅದನ್ನೆಲ್ಲ ಸರಿಪಡಿಸಿಕೊಂಡು ಸಮಾಜವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಕಾರ್ಯವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಚಿವ ಮಂಕಾಳು ವೈದ್ಯ, ಶಿರಸಿ ಶಾಸಕ ಭೀಮಣ್ಣ ನಾಯ್ಕರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿಶೇಷ ಒಲಂಪಿಕ್ಸನಲ್ಲಿ ಚಿನ್ನದ ಪದಕ ವಿಜೇತ ವಿಘ್ನೇಶ ಆರ್. ನಾಯ್ಕ, ಸಾಂಸ್ಕೃತಿಕ ಕ್ಷೇತ್ರದ ಸಾಧಕ ಬಾಬು ಶಿವಪ್ಪ ನಾಯ್ಕ, ಯಕ್ಷಗಾನ ಭಾಗವತ ಕೋಡ್ಕಣಿಯ ಗಣಪತಿ ನಾಯ್ಕ ಹಾಗೂ ಪ್ರತಿಭಾವಂತ ಸಾಧಕ ವಿದ್ಯಾರ್ಧಿಗಳಿಗೆ ಪುರಸ್ಕರಿಸಲಾಯಿತು.
ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ  ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳು ಸಮಾಜ ಆಸ್ತಿ. ಸಮಾಜದಿಂದ ಸಹಕಾರ ಪಡೆದ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರಿದ ಬಳಿಕ ಸಮಾಜವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಸಹಕಾರ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ಇದರಿಂದ ಸಮಾಜದ ಜೊತೆಗೆ ಈ ದೇಶದ ಅಭಿವೃದ್ಧಿಯಲ್ಲೂ ನಮ್ಮ ಯೋಗದಾನ ನೀಡಿದಂತಾಗುತ್ತದೆ ಎಂದರು.
ನಮ್ಮ ಸಂಘದಿಂದ ವಸತಿ ನಿಲಯ ಮತ್ತು ಶಾಲೆ ನಿರ್ಮಿಸುವ ಯೋಜನೆಗೆ ಕೈ ಹಾಕಿದ್ದೇವೆ. ಇದಕ್ಕೆ ಸಮಾಜ ಬಾಂಧವರು ಕೈಲಾದ ಸಹಕಾರ ನೀಡಬೇಕೆಂದು ಎಚ್. ಆರ್. ನಾಯ್ಕ ಮನವಿ ಮಾಡಿದರು.
ವೇದಿಕೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ನಾಮಧಾರಿ ತಾಲೂಕಾಧ್ಯಕ್ಷ ಮಂಜುನಾಥ ಆರ್. ನಾಯ್ಕ, ಉಡುಪಿ ಉಪಕೃಷಿ ನಿರ್ದೇಶಕ ಚಂದ್ರಶೇಖರ ನಾಯ್ಕ, ಬೆಣ್ಣೆ ಸರ್ಕಾರಿ ಕಾಲೇಜು ಪ್ರಭಾರಿ ಪ್ರಾಚಾರ್ಯ ಆರ್. ಎಚ್. ನಾಯ್ಕ, ನಿವೃತ್ತ ಪ್ರೊ. ಎಂ.ಜಿ.ನಾಯ್ಕ, ವಕೀಲರ ಸಂಘದ ಅಧ್ಯಕ್ಷೆ ಮಮತಾ ನಾಯ್ಕ, ಮಾಜಿ  ಜಿಪಂ ಸದಸ್ಯ ರತ್ನಾಕರ ನಾಯ್ಕ, ಆರ್ಯ ಈಡಿಗ  ನಾಮಧಾರಿ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಎಲ್. ನಾಯ್ಕ, ತಾಲೂಕು ನಾಮಧಾರಿ ನೌಕರರ ಸಂಘದ ಅಧ್ಯಕ್ಷ ಎನ್. ಆರ್. ನಾಯ್ಕ, ನಾಮಧಾರಿ ಮಹಿಳಾ ಸಂಘದ ಅಧ್ಯಕ್ಷೆ ಭಾರತಿ ನಾಯ್ಕ, ಮುಕ್ತಾ ನಾಯ್ಕ, ಯುವ ನಾಮಧಾರಿ ಅಧ್ಯಕ್ಷ ರಾಜೇಶ ನಾಯ್ಕ ಇದ್ದರು.
ಶಿಕ್ಷಕ ಮಂಜುನಾಥ ನಾಯ್ಕ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಅರುಣ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ನಾಮಧಾರಿ ಸಂಘದಿಂದ ಶೈಕ್ಷಣಿಕ ಉದ್ದೇಶಕ್ಕಾಗಿ ಕೇಳಲಾದ ೩ ಎಕರೆ ಜಾಗವನ್ನು ಸರ್ಕಾರದಿಂದ ಮಂಜೂರಿ ಮಾಡಿಕೊಡುತ್ತೇನೆ. ಉದ್ದೇಶಿತ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೂ ೫೦ ಲಕ್ಷ ಕೊಡಿಸುವ ಪ್ರಯತ್ನ ಮಾಡುತ್ತೇನೆ – ಮಂಕಾಳು ವೈದ್ಯ, ಉಸ್ತುವಾರಿ ಸಚಿವ
RELATED ARTICLES  ಸಹಕಾರಿ ಸಂಘಗಳ ನೌಕರರಿಗೂ ಲಸಿಕೆಗೆ ಮೊದಲ ಆದ್ಯತೆ ನೀಡಿ ಎಂ ಪಿ ಹೆಗಡೆ