ಕುಮಟಾ : ಕಾಲೇಜು ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬನನ್ನು, ನಿಮ್ಮ ತಂದೆ ಕರೆಯುತ್ತಿದ್ದಾರೆಂದು ಸುಳ್ಳು ಹೇಳಿ ಕಾಲೇಜಿನಿಂದ ಹೊರಗೆ ಕರೆದುಕೊಂಡು ಬಂದು, ನಾಲ್ವರು ಆರೋಪಿತರು ಬಲವಂತವಾಗಿ ಕಾರಿನೊಳಗೆ ವಿದ್ಯಾರ್ಥಿಯನ್ನು ಕೂರಿಸಿ ಅಪಹರಿಸಿಕೊಂಡು ಹೋಗಿದ್ದಲ್ಲದೆ, ವಿದ್ಯಾರ್ಥಿಯನ್ನು ಅಕ್ರಮವಾಗಿ ಬಂಧನದಲ್ಲಿರಿಸಿ, ಕಾರಿನಲ್ಲಿ ಅನತಿ ದೂರಕ್ಕೆ ಕರೆದೊಯ್ದು, ವಿದ್ಯಾರ್ಥಿಗೆ ಥಳಿಸಿ ಗಾಯಗೊಳಿಸುವ ಜೊತೆಗೆ, ಕೆಟ್ಟ ಶಬ್ದಗಳಿಂದ ಆತನನ್ನು ಬೈದು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ ಪ್ರಕರಣ ಕುಮಟಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಘಟನೆ ಕುಮಟಾ ಪಾಲಿಟೆಕ್ನಿಕ್ ಕಾಲೇಜು ಸಮೀಪ ನಡೆದಿದ್ದು, ಕಾಲೇಜಿನಲ್ಲಿ ಕಲಿಯುತ್ತಿದ್ದ ಚಿತ್ರಗಿಯ ಚಂದನ ದಯಾನಂದ ನಾಯ್ಕ (೧೯) ಹಲ್ಲೆಗೊಳಗಾದ ವಿದ್ಯಾರ್ಥಿ. ಆ.25 ರಂದು ಬೆಳಗಿನ ಅವಧಿಯಲ್ಲಿ ವಿದ್ಯಾರ್ಥಿ ಕಾಲೇಜಿನಲ್ಲಿರುವಾಗ ನಾಲ್ವರು ಆರೋಪಿಗಳು ಕಾರಿನ ಮೂಲಕ ಬಂದು ಈ ಕೃತ್ಯ ಎಸಗಿರುವುದಾಗಿ ವಿದ್ಯಾರ್ಥಿ ಲಿಖಿತ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿಲೇಶ ಭಂಡಾರಿ ಕತಗಾಲ (32), ನವೀನ ಮಂಜುನಾಥ ಹರಿಕಾಂತ ನಾಗೂರು (32), ಶರತ್ ವಿನಾಯಕ ನಾಯ್ಕ ಮಿರ್ಜಾನ (26), ಅರುಣ ಮಿರ್ಜಾನ(25) ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ. ಪ್ರಕರಣದ ಸಂಬಂಧ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿದ್ದಾರೆ. ಯಾವ ಕಾರಣಕ್ಕಾಗಿ ಈ ಘಟನೆ ನಡೆದಿದೆ ಎಂಬ ಬಗ್ಗೆ ಪೊಲೀಸ್ ತನಿಖೆಯ ನಂತರದಲ್ಲಿಯೇ ವಿವರಗಳು ಲಭ್ಯವಾಗಲಿದೆ.