ಕುಮಟಾ : ನಮ್ಮ ವೇದಗಳಲ್ಲಾಗಲೀ, ಪುರಾಣಗಳಲ್ಲಾಗಲಿ, ‘ಸಂಸ್ಕೃತಿ’ ಎಂಬ ಪದ ಇಲ್ಲ. ಅಲ್ಲಿ ‘ಸಂಸ್ಕಾರ’ ಎಂಬ ಪದ ಬಳಕೆಯಲ್ಲಿರುವುದನ್ನು ನಾವು ಕಾಣಬಹುದು. ಸಂಸ್ಕೃತಿ ಎನ್ನುವ ಪದವನ್ನು   ಇತ್ತೀಚೆಗೆ ಬಳಸಲಾಗುತ್ತಿದೆ. ಇಲ್ಲಿ ಸಂಸ್ಕೃತಿ ಎಂಬುದು ಬೇರೇನೂ ಅಲ್ಲ, ಸಂಸ್ಕಾರವೇ ಸಂಸ್ಕೃತಿ. ಸಂಸ್ಕಾರವೇ ಸಂಸ್ಕೃತಿಯ ಆಧಾರ. ಎಂದು ವಿಶ್ರಾಂತ ಉಪನ್ಯಾಸಕ ಡಾ.ಮಹೇಶ ಅಡ್ಕೊಳಿ ಹೇಳಿದರು. ಅವರು ಕುಮಟಾದ ಮಾಧವಕುಂಜ ಸಭಾಭವನದಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷತ್ ಇವರ ವತಿಯಿಂದ ನಡೆದ ‘ಮಾಸದ ಬೆಳಕು’ ಕಾರ್ಯಕ್ರಮ ಉದ್ಘಾಟಿಸಿ, ಡಿ.ವಿ.ಜಿಯವರ “ಸಂಸ್ಕೃತಿ” ಹಾಗೂ “ಋತ-ಸತ್ಯ-ಧರ್ಮ” ಎಂಬ ಪುಸ್ತಕದ ಕುರಿತು ಉಪನ್ಯಾಸ ನೀಡಿದರು.
‘ಋತ ಸತ್ಯ ಧರ್ಮ’ ಡಿ.ವಿ.ಜಿ ಅವರ ಪ್ರಬಂಧ ಸಂಕಲನ. ಋತ, ಸತ್ಯ ಮತ್ತು ಧರ್ಮ ಇವುಗಳ ಸ್ವರೂಪ ಹಾಗೂ ಅನ್ಯೋನ್ಯ ಸಂಬಂಧವನ್ನು ವಿವರಿಸುವುದು ಈ ಪುಸ್ತಕದ ಉದ್ದೇಶ. ದೇವರು ಎಂಬ ಮಹಾ ಚೈತನ್ಯದಲ್ಲಿರುವ ಮೂಲ ನಂಬಿಕೆಯೇ ಋತ. ಋತದಿಂದ ಸತ್ಯದ ವಿವೇಚನೆ, ಸತ್ಯಾನುಸರಣೆಯಿಂದ ಹೊರಡುವ ಕ್ರಿಯೆಯೇ ಧರ್ಮ, ಆತ್ಮೋದ್ದಾರಕ್ಕೂ ಜಗತ್ತಿನ ಹಿತಸಾಧನೆಗೂ ಸಾಧಕವಾದ ವರ್ತನೆಯೇ ಧರ್ಮ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ. ಎ.ವಿ.ಬಾಳಿಗಾ ಕಾಲೇಜಿನ ನಿವೃತ್ತ ಇಂಗ್ಲೀಷ್ ಉಪನ್ಯಾಸಕರು ಹಾಗೂ ಅಖಿಲ ಭಾರತ ಸಾಹಿತ್ಯ ಪರಿಷತ್ ನ ಮಾರ್ಗದರ್ಶಕ ಟಿ. ಜಿ. ಭಟ್ಟ ಹಾಸಣಗಿ ಮಾತನಾಡಿ, ತಿಂಗಳಿಗೊಂದು ಇಂತಹ ಕಾರ್ಯಕ್ರಮ ಮಾಡುವುದು ನಮ್ಮ ಉದ್ದೇಶ. ಇದರಿಂದ ಜ್ಞಾನದ ಜೊತೆ, ನಮ್ಮ ಭಾರತದ ಸಾಹಿತ್ಯ ಪರಂಪರೆಯ ಪರಿಚಯವೂ ಎಲ್ಲರಿಗೂ ಆಗುತ್ತದೆ. ಇದರೊಂದಿಗೆ ಉತ್ತಮ ವಾಗ್ಮಿಗಳಿಗೂ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇದಕ್ಕಾಗಿ ನಿಮ್ಮೆಲ್ಲರ ಸಹಕಾರ ಮುಖ್ಯ ಎಂದರು.
ಸಾಹಿತ್ಯ ಪರಿಷತ್ತಿನ ಸಹ ಕಾರ್ಯದರ್ಶಿ ಪ್ರಿಯಾ ಎಂ ಕಲ್ಲಬ್ಬೆ ಕಾರ್ಯಕ್ರಮ ನಿರೂಪಿಸಿದರು. ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಗಣೇಶ ಭಟ್ಟ ವಂದಿಸಿದರು.
RELATED ARTICLES  ಭತ್ತದ ಭಕ್ತಿ ರಾಮನೈವೇದ್ಯ