ಕುಮಟಾ : ಸಂಪ್ರದಾಯಿಕ ಪವಿತ್ರ ಆಚರಣೆ, ಅಣ್ಣ-ತಂಗಿಯರ ಬಾಂಧವ್ಯದ ಪ್ರತೀಕವಾದ ರಕ್ಷಾ ಬಂಧನ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ರಕ್ಷಾ ಬಂಧನ (ರಾಖಿ) ಖರೀದಿ ಭರಾಟೆ ಜೋರಾಗಿದೆ‌.
ಶಾಲಾ-ಕಾಲೇಜು ವಿದ್ಯಾರ್ಥಿನಿಯರು, ಯುವತಿಯರು, ಗೃಹಿಣಿಯರು ಸಹೋದರರಿಗೆ ಕಟ್ಟಲು ನಾನಾ ಬಗೆಯ ರಾಖಿ ಖರೀದಿಸುವಲ್ಲಿ ಮಗ್ನರಾಗಿದ್ದ ದೃಶ್ಯ ಮಾರುಕಟ್ಟೆಯಲ್ಲಿ ಕಾಣಸಿಗುತ್ತಲಿದೆ. ಇನ್ನು  ಅಕ್ಕ-ತಂಗಿಯರ ಒತ್ತಾಸೆಯಂತೆ ಹಲವು ಹುಡುಗರೂ ಸಹ ರಾಖಿ ಖರೀದಿಗೆ ಅವರೊಂದಿಗೆ ಸಾಥ್‌ ನೀಡುತ್ತಿದ್ದ ದೃಶ್ಯಾವಳಿಗಳು ಪಟ್ಟಣದಲ್ಲಿ ಕಾಣಸಿಗುತ್ತಿತ್ತು.
ಪ್ರಸಕ್ತ ವರ್ಷವೂ ಮಾರುಕಟ್ಟೆಗೆ ನಾನಾ ಬಗೆಯ ರಾಖಿಗಳು ಲಗ್ಗೆ ಇಟ್ಟಿವೆ. ಸ್ಟೋನ್‌, ಶ್ರೀರಕ್ಷಾ, ಶುಭ, ಕ್ರೇಜಿ, ತಾರಾ ಹಾಗೂ ಡೈಮಂಡ್‌ ಹೆಸರಿನ ರಾಖಿಗಳು ಎಲ್ಲರನ್ನು ಆಕರ್ಷಿಸುತ್ತಿವೆ. ರಾಖಿಯೊಂದಕ್ಕೆ ಕನಿಷ್ಠ 5 ರಿಂದ ಗರಿಷ್ಠ 1,000 ರೂ.ಗಳವರೆಗೆ ಮಾರುಕಟ್ಟೆಯಲ್ಲಿ ದರ ಕಂಡುಬರುತ್ತಿದೆ.
ಸಾಂಪ್ರದಾಯಿಕ ಶೈಲಿಯ ರೇಷ್ಮೆ ರಾಖಿಗೆ ಬೇಡಿಕೆ ಹೆಚ್ಚಿದ್ದು, ಸಹಜವಾಗಿಯೇ ಅವುಗಳ ಬೆಲೆಯೂ ದುಬಾರಿಯಾಗಿದೆ. ಸ್ಪಂಜ್‌ಗಳು ಹಾಗೂ ವಿವಿಧ ಬಗೆಯ ದಾರ, ರುದ್ರಾಕ್ಷಿ, ಮಣಿ, ಹರಳು ಪೋಣಿಸಿರುವ ರಾಖಿಗಳು ಹೆಚ್ಚಾಗಿ ಕಾಣುತ್ತಿವೆ. ಮಕ್ಕಳಿಗೆ ಇಷ್ಟವಾಗುವ ನಕ್ಷತ್ರಾಕಾರಾದ ರಾಖಿಗಳು ಪುಟಾಣಿಗಳನ್ನು ತನ್ನತ್ತ ಸೆಳೆಯುತ್ತಿದೆ.
ಭಾರತೀಯ ಕಾರ್ಟೂನ್ ಪಾತ್ರಗಳಾದ ಮೋಟು ಪಟ್ಲು, ಬಜರಂಗಿ, ಲಿಟಲ್ ಸಿಂಗಮ್, ಫುಕ್ರೆ ಬಾಯ್ಸ್, ಬದ್ರಿ ಬುದ್ಧ್ ಮಕ್ಕಳ ರಾಖಿಗಳಲ್ಲಿ ಬಹಳಷ್ಟು ಇಷ್ಟವಾಗುತ್ತಿವೆ. ಇವುಗಳಲ್ಲದೆ ಡೋರೇಮಾನ್, ಸ್ಪೈಡರ್ ಮ್ಯಾನ್, ಬೆನ್ 10, ಮಸ್ಸಾ ಮತ್ತು ಬೇರ್, ಪೆಪಾ ಪಿಗ್ ಸೇರಿದಂತೆ ಚಾಕೊಲೇಟ್ ರಾಖಿಗಳೂ ಮಾರುಕಟ್ಟೆಯಲ್ಲಿ ಮಕ್ಕಳನ್ನು ತನ್ನತ್ತ ಸೆಳೆಯುತ್ತಿದೆ.
ವಿಶೇಷವೆಂದರೆ ಈಗ ಎಲೆಕ್ಟ್ರಾನಿಕ್ ರಾಖಿಗಳೂ ಬಂದಿವೆ. ಇದರಲ್ಲಿ ಎಲ್ಇಡಿ ದೀಪಗಳ ಹೊರತಾಗಿ ಹಲವು ರೀತಿಯ ಆಟಿಕೆಗಳಿವೆ. ಮತ್ತೊಂದೆಡೆ, ಯುವ ಸಹೋದರರಿಗೆ ಮರದ, ಬಳೆ ಶೈಲಿ, ಮುತ್ತುಗಳ ವಿನ್ಯಾಸದ ರಾಖಿಗಳನ್ನು ಆದ್ಯತೆ ನೀಡಲಾಗುತ್ತಿದೆ. ಬೆಳ್ಳಿ ರಾಖಿಗಳು, ಕಾರ್ಟೂನ್ ರಾಖಿಗಳು, ಫೋಟೋ ರಾಖಿಗಳು, ಪರಿಸರ ಸ್ನೇಹಿ ರಾಖಿಗಳು, ಲುಂಬಾ ರಾಖಿಗಳು, ಬೀಜ ರಾಖಿ, ಆಭರಣ ರಾಖಿಗಳು, ಚಿನ್ನದ ರಾಖಿಗಳು, ಕುಂದನ್ ರಾಖಿಗಳು, ಮುತ್ತು ರಾಖಿಗಳು, ಕಲ್ಲಿನ ರಾಖಿಗಳು, ದೈವಿಕ ರಾಖಿಗಳು, ಮಣ್ಣಿನ ರಾಖಿ, ಮರದ ರಾಖಿಗಳು, ಅಕ್ರಿಲಿಕ್ ರಾಖಿಗಳು, ಲೋಹದ ರಾಖಿಗಳು, ಡಿಸೈನರ್ ಮತ್ತು ಅಲಂಕಾರಿಕ ರಾಖಿಗಳು ಪೇಟೆಯಲ್ಲಿ ಬರಪೂರ ಮಾರಾಟ ಕಾಣುತ್ತಿದೆ.
ಇನ್ನು ಎರಡು ದಿನಗಳಲ್ಲಿ ಹಬ್ಬ ಸಮೀಪಿಸಿದ್ದು, ಹಬ್ಬದ ಖರೀದಿಯ ಜೊತೆಗೆ ರಾಖಿ ಖರೀದಿಯೂ ಬಹಳ ವಿಶೇಷವಾಗಿ ನಡೆಯುತ್ತದೆ. ಇದರಿಂದ ಹಬ್ಬದ ರಂಗು ಹೆಚ್ಚುತ್ತಲಿದೆ.
ಕೋಟ್
ಪ್ರತಿ ವರ್ಷವೂ ನಮ್ಮ ಅಣ್ಣನಿಗಾಗಿ ರಾಖಿ ಖರೀದಿಸುವುದು ಹಾಗೂ ಸಿಹಿ ತಿನಿಸು ಖರೀದಿಸುವುದು ನಮ್ಮ ರೂಢಿ. ಬಗೆ ಬಗೆಯ ರಾಖಿಗಳು ಪೇಟೆಗೆ ಬಂದಿದ್ದು ವಿಶೇಷವಾದ ರಾಖಿಯನ್ನು ಖರೀದಿಸಿ ಅಣ್ಣನಿಗೆ ಕಟ್ಟಿ ಸಂಭ್ರಮ ಪಡುತ್ತೇನೆ. – ನಯನಾ ನಾಯಕ, ರಾಖಿ ಖರೀದಿಗೆ ಬಂದ ವಿದ್ಯಾರ್ಥಿನಿ.
——-
ಹಬ್ಬಕ್ಕೆ ಇನ್ನು ಕೇವಲ ಎರಡು ದಿನಗಳಿರುವುದರಿಂದ ರಾಖಿ ಖರೀದಿ ಜೋರಾಗಿದೆ. ಎಲ್ಲ ಗ್ರಾಹಕರಿಗೆ ಅವರವರ ಬಜೆಟ್ ಗೆ ಹೊಂದುವ ರಾಖಿಗಳು ಲಭ್ಯವಿದೆ. ಈ ವರ್ಷ ಗ್ರಾಹಕರಿಂದ ಉತ್ತಮ ಸ್ಪಂದನೆ ಇದೆ. – ಪರಶುರಾಮ , ರಾಖಿ ಮಾರಾಟ ಮಾಡುವ ಅಂಗಡಿಕಾರ.
RELATED ARTICLES  ಕರಾವಳಿಯ ರವಿ ಗೆ ರಾಜ್ಯ ಮಟ್ಟದ ಗರಿ