ಕುಮಟಾ : ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಬಹುಕೋಟಿ ವೆಚ್ಚದ, ತಾಲೂಕಿನ ಬಹುಗ್ರಾಮಗಳ ಮನೆ ಮನೆಗೆ ನೀರು ಕೊಡುವ ಯೋಜನೆಯ ಕಾಮಗಾರಿ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎಂಬ ಗುರುತರ ಆರೋಪ ಕೇಳಿಬಂದಿದೆ. ಈ ಯೋಜನೆಗೆ ಕೋಟ್ಯಾಂತರ ರೂಪಾಯಿ ಹಣ ಮಂಜೂರಾಗಿದ್ದು, ಕಾಮಗಾರಿ ಮಾತ್ರ ಸೂಕ್ತ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ಕೆಪಿಸಿಸಿ ಸಂಯೋಜಕ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಆರೋಪಿಸಿದ್ದಾರೆ. 

ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೀರು ಸರಬರಾಜು ಮಾಡುವ ಉದ್ದೇಶದಿಂದ ಅಂದಾಜು 160 ಕೋಟಿ ವೆಚ್ಚದಲ್ಲಿ ಜಲ ಜೀವನ ಮಿಷನ್ ನ ಜೆ.ಜೆ.ಎಂ ಯೋಜನೆಯ ಅಡಿಯಲ್ಲಿ ಸುಪ್ರತ ಕನ್ಸ್ಟ್ರಕ್ಷನ್ ಎಂಬುವರಿಗೆ ಕಾಮಗಾರಿ ಗುತ್ತಿಗೆ ನೀಡಿದ್ದಾರೆ. ಆದರೆ ಕಾಮಗಾರಿ ಪ್ರಗತಿಯಲ್ಲಿರುವ ಸ್ಥಳದಲ್ಲಿ ಗುತ್ತಿಗೆ ಪಡೆದ ಯಾವುದೇ ಇಂಜಿನಿಯರ್ ಹಾಗೂ ಕುಡಿಯುವ ನೀರಿನ ಇಲಾಖೆಯ ಇಂಜಿನಿಯರ್ ಇರುವುದಿಲ್ಲ. ಎರಡು ಬಾರಿ ಭೇಟಿ ನೀಡಿದಾಗಲೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಇಲ್ಲವಾಗಿದ್ದು, ಕೇವಲ ಕೆಲಸಗಾರರೇ ಕಾಮಗಾರಿ ಮಾಡುತ್ತಿದ್ದಾರೆ. 

RELATED ARTICLES  ಅಕ್ರಮ ಮದ್ಯ ಸಾಗಾಟ : ಪೊಲೀಸರಿಂದ ದಾಳಿ

ಅದಲ್ಲದೆ ಕಾಮಗಾರಿಯನ್ನು ನಿರ್ವಹಿಸುವ ಭರದಲ್ಲಿ, ಹೊಸದಾಗಿ ನಿರ್ಮಿಸಿದ ಕೆಲವು ರಸ್ತೆಯನ್ನು ಜೆಸಿಬಿಯಿಂದ ಅಗೆದು ಹಾಕಲಾಗಿದೆ. ಅಗೆದ ಮಣ್ಣನ್ನು ಹಾಗೆಯೇ ಬಿಡಲಾಗಿದ್ದು, ಸಮರ್ಪಕವಾಗಿ ಹೊಂಡವನ್ನೂ ಮುಚ್ಚದೆ ರಸ್ತೆಯ ಇಕ್ಕಲೆಗಳಲ್ಲಿ ಬಿಟ್ಟು ಕಾಟಾಚಾರಕ್ಕೆ ಕಾಮಗಾರಿಯನ್ನ ಮಾಡುತ್ತಿದ್ದಾರೆ. ಇಲ್ಲಿ ಅಳವಡಿಸುತ್ತಿರುವ ಪೈಪ್ ಗಳೂ ಕಳಪೆ ಗುಣಮಟ್ಟದ್ದಾಗಿದೆ ಎಂದು ಅವರು ಮಾಧ್ಯಮದವರಿಗೆ ಹೇಳಿಕೆ ನೀಡಿದ್ದಾರೆ.

RELATED ARTICLES  ಮನೆಗೊಂದು ಗಿಡ ಮನಸಿಗೊಂದು ಪುಸ್ತಕ ಕಾರ್ಯಕ್ರಮ.

ನಿಯಮದ ಪ್ರಕಾರ ಮೂರು ಅಡಿ ಆಳವನ್ನು ತೆಗೆದು ಪೈಪ್ ಲೈನ್ ಅಳವಡಿಸಬೇಕು. ಸರಿಯಾದ ಆಳದ ಗುಡಿಗಳನ್ನು ತೆಗೆಯದೇ ಮೇಲಿಂದ ಮೇಲೆ ಅಗೆದು ಪೈಪ್ ಲೈನ್ ಅಳವಡಿಸಿರುವುದು ಕಂಡುಬರುತ್ತದೆ. ಈ ರೀತಿಯ ಕಾಮಗಾರಿಗಳನ್ನು ಕೈಗೊಂಡರೆ ಭವಿಷ್ಯದಲ್ಲಿ ಈ ಕಾಮಗಾರಿ ಹಳ್ಳ ಹಿಡಿಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಕೂಡಲೇ ಸಂಬಂಧಪಟ್ಟ ಇಂಜಿನಿಯರ್ ಹಾಗೂ ತಾಲೂಕಾಡಳಿತ ಎಚ್ಚೆತ್ತುಕೊಂಡು ಕಾಮಗಾರಿ ಪ್ರಗತಿಯಲ್ಲಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಭಾಸ್ಕರ ಪಟಗಾರ ಆಗ್ರಹಿಸಿದ್ದಾರೆ.

ಈ ಕಾಮಗಾರಿಯ ಅವ್ಯವಸ್ಥೆಯ ಬಗ್ಗೆ ಅವರು ಕುಮಟಾ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ತಿಮ್ಮಪ್ಪ ನಾಯಕ್,  ಬಲಿಂದ್ರ ಗೌಡ ಇತರರಿದ್ದರು.