ಕುಮಟಾ : ಸರ್ವರಲ್ಲಿ ಭಾತೃತ್ವ ಮತ್ತು ಸಮಾನತೆಯ ಭಾವನೆಯನ್ನು ಬಿತ್ತಿದ ಹಾಗೂ ಜಾತಿ ದ್ವೇಷದ ಗೋಡೆಯನ್ನು ಕೆಡವಿಹಾಕಿ ಆದರ್ಶದ ಬದುಕು ಬದುಕಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಮತ್ತು ಹೋರಾಟ ಹಾಗೂ ಕಾಯಕ ಯೋಗಿ ಶಿವಶರಣ ಶ್ರೀ ನುಲಿಯ ಚಂದಯ್ಯ ಅವರ ಕಾಯಕ ನಿಷ್ಟೆ ನಮ್ಮೆಲ್ಲರಿಗೂ ಆದರ್ಶವಾಗಿರುವಂತಹುದು ಎಂದು ತಾಲೂಕಾ ಪಂಚಾಯತಿಯ ಕಾರ್ಯನಿರ್ವಹಣಾಧಿಕಾರಿ ನಾಗರತ್ನಾ ನಾಯಕ ಹೇಳಿದರು, ಅವರು ಇಲ್ಲಿನ ತಾಲೂಕಾ ಆಡಳಿತ ಸೌಧದಲ್ಲಿ ನಡೆದ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಕಾಯಕ ಯೋಗಿ ಶಿವಶರಣ ಶ್ರೀ ನುಲಿಯ ಚಂದಯ್ಯ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾರಾಯಣ ಗುರುಗಳು ಹಾಗೂ ಕಾಯಕ ನುಲಿಯ ಚಂದಯ್ಯನಂತಹ ಹಲವಾರು ಮಹಾತ್ಮರು ನಮ್ಮ ನಡುವೆ ಬದುಕಿ ಹೋಗಿದ್ದಾರೆ. ಮಹಾತ್ಮರ ಬದುಕಿನ ಕೆಲವು ಅಂಶಗಳು ನಮ್ಮೊಳಗೆ ಮೈಗೂಡಿದರೆ ನಮ್ಮ ಬದುಕೂ ಸುಂದರವಾಗುವುದರಲ್ಲಿ ಸಂದೇಹವಿಲ್ಲ. ಬ್ರಹ್ಮಶ್ರೀ ನಾರಾಯಣ ಗುರುಗಳು ಮತ್ತು ಸಮಾಜಕ್ಕೊಂದು ಸಂದೇಶ ನೀಡಿ, ಸಾರ್ಥಕ ಬದುಕು ಬದುಕಿದ ನುಲಿಯ ಚಂದಯ್ಯ ಅವರ ಸಾಮಾಜಿಕ ಕೆಲಸಗಳು ಸಮಾಜಕ್ಕೆ ಹಾಗೂ ಪ್ರತಿಯೊಬ್ಬರ ಬದುಕಿಗೆ ಆದರ್ಶ ತೋರುವಂತಹುದು ಎಂದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಶಿಕ್ಷಕ ರಾಮಚಂದ್ರ ಮಡಿವಾಳ ಸಮಾಜದಲ್ಲಿ ಇದ್ದ ಅಸಮಾನತೆ ಹೋಗಲಾಡಿಸಲು ಹೋರಾಡಿದ ಧೀಮಂತರು ನಾರಾಯಣ ಗುರುಗಳು. ಜಾತಿ, ಮತಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ‘ನಾರಾಯಣ ಗುರು,’ ವೆಂಬ ಒಬ್ಬ ಸಮಾಜಕ ಸುಧಾರಕರು ಉದಯಿಸಿ, ಸಮಾಜದ ತಾರತಮ್ಯಗಳನ್ನು ಕಡಿಮೆಮಾಡಲು ಇಡೀ ಜೀವನವನ್ನು ಮುಡಿಪಾಗಿಟ್ಟರು. ಅವರು ಪ್ರತಿಪಾದಿಸಿದ ಒಂದೇಜಾತಿ, ಒಂದೇ ಮತ, ಹಾಗೂ ಒಂದೇ ದೇವರುಎಂಬ ಸತ್ಯವಾಕ್ಯ ಇಂದಿಗೂ ಸಮಾಜದಲ್ಲಿ ಬೆಳಕಾಗಿದೆ. ಅವರ ಜೀವನ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳುವುದು ಇಂದಿನ ಅಗತ್ಯತೆಯಾಗಿದೆ ಎಂದು ಅವರು ವಿವರಿಸಿದರು.
ನಿವೃತ್ತ ಪ್ರಾಂಶುಪಾಲ ಎಂ.ಜಿ.ನಾಯ್ಕ ಮಾತನಾಡಿ ಇಂದಿನ ಯುವ ಪೀಳಿಗೆಗಳಿಗೆ ಹಿರಿಯರ ಆದರ್ಶಗಳನ್ನು ತಿಳಿಸುವ ಅಗತ್ಯತೆ ಇದೆ. ಹೀಗಾಗಿ ಈ ಈರ್ವರು ಮಹಾನ್ ವ್ಯಕ್ತಿಗಳನ್ನು ಪರಿಚಯಿಸುವ ದಿಸೆಯಲ್ಲಿ ತಾಲೂಕಾಡಳಿತ ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ತಾಲೂಕಾಡಳಿತ ಹಾಗೂ ತಾಲೂಕಾ ಪಂಚಾಯತ್ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಸಂತ ಸಾವಂತ ಸ್ವಾಗತಿಸಿದರು. ಅಧಿಕಾರಿಗಳು ಹಾಗೂ ಗಣ್ಯರು ಬ್ರಹ್ಮಶ್ರೀ ನಾರಾಯಣ ಗುರುಗಳು ಹಾಗೂ ನುಲಿಯ ಚಂದಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಲ್ಲಿಸಿ ಕಾರ್ಯಕ್ರಮ ಪ್ರಾರಂಭಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸತೀಶ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕಿ ಭಾರತಿ ಆಚಾರಿ, ಪಿಡಬ್ಲ್ಯುಡಿ ಇಂಜಿನಿಯರ್ ಮೋಹನ ನಾಯ್ಕ, ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ರಾಜು ಮಾಸ್ತಿಹಳ್ಳ, ನಾಮಧಾರಿ ಸಂಘದ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಸಮಾಜದ ಮುಖಂಡರುಗಳಾದ ರಾಜೇಶ ನಾಯ್ಕ, ಪ್ರಶಾಂತ ನಾಯ್ಕ, ಸಂತೋಷ ನಾಯ್ಕ, ವಿಶ್ವನಾಥ ನಾಯ್ಕ, ಮಂಜುನಾಥ ನಾಯ್ಕ ಹಾಗೂ ವಿವಿಧ ಇಲಾಖೆಗಳ ಅಧಿಕಾರಿ ವರ್ಗದವರು ಹಾಜರಿದ್ದರು.